ಕನ್ನಡಪ್ರಭವಾರ್ತೆ, ತುರುವೇಕೆರೆ

ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ತಾಲೂಕಿನ ವಿವಿಧ ಬಸವೇಶ್ವರ ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ತಾಲೂಕು ಆಡಳಿತ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಯುವ ಘಟಕದಿಂದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಆಚರಿಸಲಾಯಿತು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬಸವೇಶ್ವರ ಜಯಂತಿಯನ್ನು ಆಚರಿಸಲಾಯಿತು. ಈ ಸಂಧರ್ಭದಲ್ಲಿ ಅಕ್ಕನ ಬಳಗ, ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ, ಯುವ ಘಟಕದ ಪದಾದಿಕಾರಿಗಳು ಬಸವೇಶ್ವರರ ಬೃಹತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಎಲ್ಲಾ ಭಕ್ತಾದಿಗಳಿಗೆ ಪಾನಕ, ಉಪಹಾರದ ವ್ಯವಸ್ಥೆಯನ್ನು ಮಾಡಲಾಯಿತು. ಗ್ರಾಮಸ್ಥರು ತಮ್ಮ ಮನೆಯಲ್ಲಿರುವ ರಾಸುಗಳನ್ನು ಶುಭ್ರಗೊಳಿಸಿ, ಹೊಸಬಟ್ಟೆಯನ್ನು ಮೈಮೇಲೆ ಹಾಕಿ, ರಾಸುಗಳ ಕೊಂಬು, ಮೈಗೆ ಬಣ್ಣ ಬಳಿದು, ಹೂವಿನಿಂದ ಅಲಂಕರಿಸಿದರು. ಅಲಂಕಾರಗೊಂಡ ರಾಸುಗಳನ್ನು ಗ್ರಾಮದ ದೇವಾಲಯದ ತನಕ ಕರೆದೊಯ್ದು ಪೂಜೆ ಮಾಡಿಸಲಾಯಿತು. ಮಾದಾಪಟ್ಟಣ ಗ್ರಾಮದ ಬಸವಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರು ಸೇರಿ ಬಸವೇಶ್ವರ ಜಯಂತಿಯನ್ನು ಆಚರಿಸಿದರು. ಇದೇ ರೀತಿ ದೊಂಬರನಹಳ್ಳಿ ಸಮೀಪದ ಬಂಡೀಹಳ್ಳಿ ಬಸವಣ್ಣನವರ ದೇವಸ್ಥಾನದಲ್ಲೂ ಪೂಜಾ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಸ್.ಎಂ.ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಜಗುಣಸ್ವಾಮಿ, ಕೆಎಂಎಫ್‌ ನ ನಿರ್ದೇಶಕ ಸಿ.ವಿ.ಮಹಲಿಂಗಯ್ಯ, ಮುಖಂಡರಾದ ಮುನಿಯೂರು ಮೂರ್ತಿ, ವೆಂಕಟಾಪುರ ಯೋಗೀಶ್, ವಿಶ್ವನಾಥ್, ಯಜಮಾನ್ ಮಹೇಶ್, ನವೀನ್‌ ಬಾಬು, ಸುನಿಲ್‌ ಬಾಬು, ಚಿದಾನಂದ್, ದಂಡಿನಶಿವರ ಕುಮಾರ್, ಲೋಕಮ್ಮನಹಳ್ಳಿ ಶಂಕರಪ್ಪ, ಡೊಂಕಿಹಳ್ಳಿ ರಾಮಣ್ಣ, ಅರಳೀಕೆರೆ ಬಾಬು ಸೇರಿದಂತೆ ಅಕ್ಕನ ಬಳಗದ ಸದಸ್ಯರು ಇದ್ದರು. .