ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದಲ್ಲಿ ಜಗಜ್ಯೋತಿ ಬಸವೇಶ್ವರರ ಅಶ್ವರೂಢ ಕಂಚಿನ ಪ್ರತಿಮೆ ಲೋಕಾರ್ಪಣೆಯ ಮೂಲಕ ಬಸವ ತತ್ವ ಅನುಯಾಯಿಗಳ ದಶಕಗಳ ಕನಸು ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಸಾಕಾರಗೊಂಡಿತು. ನಗರ ಹೃದಯ ಭಾಗದ ಪಿಪಿ ವೃತ್ತದ ಬಳಿ ನಿರ್ಮಿಸಲಾದ ಈ ಭವ್ಯ ಪ್ರತಿಮೆ ಅನಾವರಣ ಕಾರ್ಯಕ್ರಮವು ಸೋಮವಾರ ಭಕ್ತಿಭಾವ, ಸಂಭ್ರಮ ಮತ್ತು ಉತ್ಸಾಹದ ನಡುವೆ ಐತಿಹಾಸಿಕ ಕ್ಷಣವಾಗಿ ಮೂಡಿಬಂದಿತು.ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಅನಾವರಣ ಸಮಿತಿ ವತಿಯಿಂದ ಆಯೋಜಿಸಲಾದ ಈ ಸಮಾರಂಭದಲ್ಲಿ ರಾಜ್ಯ ಗೃಹ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಕೆಎಂ ಶಿವಲಿಂಗೇಗೌಡ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು, ಮಂಗಳವಾದ್ಯಗಳ ನಾದ ಹಾಗೂ ಭಕ್ತರ ಜಯಘೋಷಗಳ ನಡುವೆ ಪ್ರತಿಮೆ ಲೋಕಾರ್ಪಣೆಗೊಂಡಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಶಿವಲಿಂಗೇಗೌಡರು, ಸಾಮಾಜಿಕ ಸಮಾನತೆ, ಮಾನವೀಯತೆ ಮತ್ತು ಕಾಯಕ ತತ್ವವನ್ನು ಸಾರಿದ ಬಸವೇಶ್ವರರ ಪ್ರತಿಮೆ ಸ್ಥಾಪನೆ ತಾಲೂಕಿಗೆ ಕಳಸಪ್ರಾಯವಾದ ಕಾರ್ಯವಾಗಿದೆ. ನಗರದಲ್ಲಿ ಬಸವೇಶ್ವರರು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗಳು ತಲೆ ಎತ್ತಿ ನಿಂತಿರುವುದು ಹೆಮ್ಮೆ ತರುವ ವಿಷಯವಾಗಿದ್ದು, ಕೇವಲ ಪ್ರತಿಮೆಗಳ ದರ್ಶನಕ್ಕೆ ಸೀಮಿತವಾಗದೆ ಅವರ ತತ್ವ-ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೇಯಸ್ ಪಾಟೀಲ್, ಅಭಿವೃದ್ಧಿ ಕಾರ್ಯಗಳನ್ನು ಮಾಡುವ ನಾಯಕತ್ವಕ್ಕೆ ಜನರು ಬೆಂಬಲ ನೀಡಬೇಕು. ಶಾಸಕ ಶಿವಲಿಂಗೇಗೌಡ ಅವರು ತಾಲೂಕಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವುದರ ಜೊತೆಗೆ ಬಸವೇಶ್ವರರ ಪ್ರತಿಮೆ ನಿರ್ಮಾಣದ ಮೂಲಕ ತಮ್ಮ ಬದ್ಧತೆಯನ್ನು ತೋರಿಸಿದ್ದಾರೆ ಎಂದು ಹೇಳಿದರು.
ಕೆರಗೋಡಿ ರಂಗಾಪುರದ ಗುರು ಪರದೇಶಿ ಕೇಂದ್ರ ಸ್ವಾಮೀಜಿ ಮಾತನಾಡಿ, ಕಾಯಕವೇ ಕೈಲಾಸ ಎಂಬ ಬಸವಣ್ಣನ ಸಂದೇಶವು ಸರ್ವಕಾಲಿಕವಾಗಿದ್ದು, ಬಸವ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸಾಮರಸ್ಯ, ಸಮಾನತೆ ಮತ್ತು ಶಾಂತಿ ನೆಲೆಸುತ್ತದೆ. ಪ್ರತಿಮೆಗಳ ಸ್ಥಾಪನೆ ಮಾತ್ರ ಸಾಕಾಗದು, ಅವುಗಳ ಹಿಂದೆ ಇರುವ ವಚನ ಸಾಹಿತ್ಯದ ಸಾರವನ್ನು ಅರಿತು ಬದುಕಿನಲ್ಲಿ ಪಾಲಿಸಿದರೆ ಸಮಾಜ ಸುಧಾರಣೆಗೆ ದಾರಿ ಸಿಗುತ್ತದೆ ಎಂದು ತಿಳಿಸಿದರು.
ಪುತ್ಥಳಿ ಅನಾವರಣ ಸಮಿತಿಯ ಜಿ.ಬಿ. ಶಶಿಧರ್ ಮಾತನಾಡಿ, ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಸವ ತತ್ವ ಅನುಯಾಯಿಗಳ ದೀರ್ಘಕಾಲದ ಕನಸಾಗಿದ್ದ ಪ್ರತಿಮೆ ಸ್ಥಾಪನೆ ಇಂದು ನನಸಾಗಿದೆ. ಇದಕ್ಕೆ ಕಾರಣಕರ್ತರಾದ ಶಾಸಕ ಶಿವಲಿಂಗೇಗೌಡರು ಹಾಗೂ ಸಮಿತಿಯ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಸಮಿತಿಯ ಕಾರ್ಯಾಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಪ್ರತಿಮೆ ಸ್ಥಾಪನೆಗೆ ಕೆಲವು ಅಡೆತಡೆಗಳು ಎದುರಾದರೂ ಅವನ್ನು ಮೀರಿ ಈ ಕಾರ್ಯ ಯಶಸ್ವಿಯಾಗಿರುವುದು ಸಂತೋಷ ತಂದಿದೆ. ಇದು ಸಮುದಾಯದ ಏಕತೆ ಮತ್ತು ಭಕ್ತಿಯ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಯಳನಾಡು ಮೂರು ಕಳಸ ಮಠದ ಜ್ಞಾನಪ್ರಭು ಸಿದ್ದರಾಮ ದೇಶಿ ಕೇಂದ್ರ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಚಂದ್ರಶೇಖರ ಸ್ವಾಮೀಜಿ, ಡಿ.ಎಂ. ಕುರ್ಕೆ ಬೂದಿಹಾಳ ವಿರಕ್ತ ಮಠದ ಶಶಿಶೇಖರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.
ಇದೇ ವೇಳೆ ಬಸವ ಪುತ್ಥಳಿ ಅನಾವರಣ ಸಮಿತಿಯ ಅಧ್ಯಕ್ಷ ಅಡವಿ ಸ್ವಾಮಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಶೇಖರ್, ಬಂಕ್ ಮಂಜಣ್ಣ, ಉಮೇಶ್, ಜ್ಞಾನೇಶ್, ಜಿಪಂ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಯಳವಾರ ಕೇಶವಣ್ಣ ಸೇರಿದಂತೆ ಅನೇಕ ಗಣ್ಯರು ಮತ್ತು ಭಕ್ತರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.ಗೊಂದಲದ ಕ್ಷಣ:
ಕಾರ್ಯಕ್ರಮದ ವೇಳೆ ಎನ್.ಆರ್. ಸಂತೋಷ್ ಅವರು ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಮುಂದಾದಾಗ, ಮೆಟ್ಟಿಲುಗಳ ವ್ಯವಸ್ಥೆ ಇಲ್ಲದ ಕಾರಣ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ವ್ಯವಸ್ಥಾಪಕರು ತಕ್ಷಣ ಕ್ರಮ ಕೈಗೊಂಡು ಅವರಿಗೆ ದಾರಿ ಮಾಡಿಕೊಟ್ಟು, ಅವರು ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿದರು.ಈ ಕುರಿತು ಸ್ಪಷ್ಟನೆ ನೀಡಿದ ಶಾಸಕ ಕೆಎಂ ಶಿವಲಿಂಗೇಗೌಡರು, ಯಾರಿಗೂ ತೊಂದರೆ ಉಂಟುಮಾಡುವ ಉದ್ದೇಶದಿಂದ ಮೆಟ್ಟಿಲುಗಳನ್ನು ತೆರವುಗೊಳಿಸಲಿಲ್ಲ. ಜನರು ಪುತ್ಥಳಿಯ ಬಳಿ ಭಾವಚಿತ್ರಗಳನ್ನು ತೆಗೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಹಿನ್ನೆಲೆ, ಸುರಕ್ಷತೆ ದೃಷ್ಟಿಯಿಂದ ಅವರು ಬರುವ ಮುಂಚೆಯೇ ಮೆಟ್ಟಿಲುಗಳನ್ನು ತೆರವು ಮಾಡಲಾಗಿತ್ತು. ಬಳಿಕ ಸಂತೋಷ್ ಅವರಿಗೆ ಸುಗಮವಾಗಿ ಮಾಲಾರ್ಪಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.