ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಪಿಪಿ ವೃತ್ತದಲ್ಲಿ ನಡೆದ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಅನಾವರಣ ಕಾರ್ಯಕ್ರಮದ ವೇಳೆ ಕೆಲವರಿಂದ ಅಸಮಾಧಾನ ವ್ಯಕ್ತವಾಗಿದ್ದು, ಕಾರ್ಯಕ್ರಮದ ನಿರ್ವಹಣೆ ಮತ್ತು ಕೆಲವು ಬೆಳವಣಿಗೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಎನ್. ಆರ್‌. ಸಂತೋಷ್, ಅನೇಕ ಸಮಾಜದವರ ಸಹಕಾರ ಮತ್ತು ಆಶೀರ್ವಾದದಿಂದ ನಿರ್ಮಾಣಗೊಂಡ ಬಸವೇಶ್ವರರ ಪುತ್ಥಳಿಯನ್ನು ಕೆಲವರು ತಮ್ಮ ವೈಯಕ್ತಿಕ ಕಾರ್ಯಕ್ರಮದಂತೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ನಾಲ್ಕನೇ ಬಾರಿ ಶಾಸಕರಾಗಿರುವ ಕೆ ಎಂ ಶಿವಲಿಂಗೇಗೌಡ ಅವರು ಕಲ್ಲಿನ ಮೇಲೆ ಬಸವಣ್ಣನವರ ಹೆಸರಿಗಿಂತ ತಮ್ಮ ಹೆಸರನ್ನು ದೊಡ್ಡದಾಗಿ ಕೆತ್ತಿಸಿಕೊಂಡಿರುವುದು ದುರಹಂಕಾರದ ಪರಮಾವಧಿಯಾಗಿದೆ ಎಂದು ಟೀಕಿಸಿದರು.ಎಲ್ಲಾ ಸಮಾಜದವರೊಂದಿಗೆ ಸೇರಿ ಮಾಲಾರ್ಪಣೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ಪೊಲೀಸ್ ವ್ಯವಸ್ಥೆಯಿಂದ ತಡೆದು ನಿಲ್ಲಿಸಲಾಯಿತು. ಸುಮಾರು ಒಂದು ಗಂಟೆ ಬಳಿಕ ಬರುವಂತೆ ಸೂಚನೆ ನೀಡಲಾಯಿತು. ನಂತರವೂ ಪುತ್ಥಳಿಗೆ ಏರಲು ಸೂಕ್ತ ವ್ಯವಸ್ಥೆ ಮಾಡದೇ, ಮೆಟ್ಟಿಲುಗಳನ್ನು ತೆರವುಗೊಳಿಸಲಾಗಿತ್ತು. ಆದರೂ ಕಾರ್ಯಕರ್ತರ ಸಹಾಯದಿಂದ ಮಾಲಾರ್ಪಣೆ ಮಾಡಲು ಪ್ರಯತ್ನಿಸಿದಾಗ, ವೇದಿಕೆಯಲ್ಲಿ ಮಾತನಾಡುತ್ತಿದ್ದವರ ಮೈಕ್‌ನ್ನು ಕಿತ್ತುಕೊಂಡು ಹೂವಿನರವನ್ನು ಇಲ್ಲಿ ಹಾಕಬೇಡಿ, ಅಲ್ಲಿ ಹಾಕಬೇಡಿ ಎಂದು ಅಡ್ಡಿಪಡಿಸಲಾಗಿದೆ ಎಂದು ದೂರಿದರು. ದೇವರ ಕಾರ್ಯದಲ್ಲಿ ವೈಯಕ್ತಿಕ ಪ್ರಚಾರಕ್ಕೆ ಅವಕಾಶ ನೀಡಬಾರದು. ಇಂತಹ ದರ್ಪದ ನಡೆ ಹೆಚ್ಚು ದಿನ ಮುಂದುವರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಬಕಪ್ಪ ಶಿವಣ್ಣ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮ್ಮನಟ್ಟಿ ಅಜ್ಜಪ್ಪ, ಭೋಜ ನಾಯಕ್, ಜಯರಾಮ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.