ಕೃಷಿಯ ಮೂಲ ಆಧಾರವೇ ಗೋವು ಸಂಪತ್ತು: ಶಾಸಕ ಸಿದ್ದು ಸವದಿ

| Published : Feb 02 2025, 01:04 AM IST

ಸಾರಾಂಶ

ನಮ್ಮ ಬದುಕು ಕಟ್ಟಿಕೊಳ್ಳಬೇಕಾದರೆ ಗೋವು ಸಂಪತ್ತು ಉಳಿಯಬೇಕು. ಗೋವು ಆಧಾರಿತ ಕೃಷಿ ನಾವು ಮರೆತಿರುವುದರಿಂದ ಮಾರಕ ರೋಗಗಳು ನಮ್ಮನ್ನು ಆವರಿಸುತ್ತಿವೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ನಮ್ಮ ಬದುಕು ಕಟ್ಟಿಕೊಳ್ಳಬೇಕಾದರೆ ಗೋವು ಸಂಪತ್ತು ಉಳಿಯಬೇಕು. ಗೋವು ಆಧಾರಿತ ಕೃಷಿ ನಾವು ಮರೆತಿರುವುದರಿಂದ ಮಾರಕ ರೋಗಗಳು ನಮ್ಮನ್ನು ಆವರಿಸುತ್ತಿವೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ತೇರದಾಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಶ್ರೀಅಲ್ಲಮಪ್ರಭು ಜೋಡೆತ್ತಿನ ರೈತ ಸಂಘದ ಸಂಯುಕ್ತ ಆಶ್ರಯದಲ್ಲಿ ತೇರದಾಳ ತಾಲೂಕು ಮಟ್ಟದ ಜೋಡೆತ್ತಿನ ಕೃಷಿಕರ ಸಮಾವೇಶ ಹಾಗೂ ಜೋಡೆತ್ತಿನ ಕೃಷಿಕರ ಕುರಿತು ವೈಜ್ಞಾನಿಕ ಚಿಂತನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆಗಣಿ ಗೊಬ್ಬರ ಬಿಟ್ಟು ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಭೂಮಿ ಫಲವಂತಿಕೆ ಹಾಳುಗೆಡವಿ ಬಂಜರು ಭೂಮಿಯನ್ನಾಗಿ ಮಾಡಿದ್ದೇವೆ. ದೇಶದ ಸಂಸ್ಕೃತಿ ಹಾಗೂ ಮಣ್ಣಿನ ಸಂಪತ್ತು ಉಳಿಸಿದಾಗ ಮಾತ್ರ ನಾಗರಿಕತೆ ಉಳಿಯುತ್ತದೆ ಎಂದರು.

ಕೃಷಿಯ ಮೂಲ ಆಧಾರ ಗೋವು. ವಿದೇಶಿ ವ್ಯಾಮೋಹದಿಂದ ನಮ್ಮ ಮೂಲ ಸಂಸ್ಕೃತಿ ಮರೆಯುತ್ತಿದ್ದೇವೆ. ಮಣ್ಣು ಎನ್ನುವ ಸಂಪತ್ತು ಉಳಿಸಿದರೆ ಮುಂದಿನ ನಮ್ಮ ಜನಾಂಗಕ್ಕೆ ಸಮೃದ್ಧ ಭಾರತ ಬಿಟ್ಟು ಹೋಗಲು ಅನುಕೂಲವಾಗುತ್ತದೆ. ಮುಂದಿನ ನಮ್ಮ ಪೀಳಿಗೆಯು ಗೋವು ಸಂಪತ್ತು ನೋಡಬೇಕಾದರೆ ನಾವು ಇಂದು ಮನೆಗೊಂದು ಗೋವು ಸಾಕಬೇಕು. ಕುರ್ಚಿ ದುರಾಸೆಗಾಗಿ ನಮ್ಮ ಸಂಸ್ಕೃತಿ ಹಾಳು ಮಾಡಬಾರದು. ಪಾಪ ಎನ್ನುವುದು ಮುಂದೆ ನಮಗೆ ಕಟ್ಟಿಟ್ಟ ಬುತ್ತಿ. ಈ ದೇಶದ ಸಂಸ್ಕೃತಿ, ಮಣ್ಣಿನ ಸಂಪತ್ತು ಉಳಿಸಿದಾಗ ಭವಿಷ್ಯದ ಭಾರತಕ್ಕೆ ಭವಿಷ್ಯವಿದೆ. ದೊಡ್ಡ ಉದ್ಯೋಗ ಕೊಡುವ ಕ್ಷೇತ್ರ ಕೃಷಿ. ಕೃಷಿ ಉಳಿಸುವ ಕೆಲಸವಾಗಬೇಕಾದರೆ ಗೋವು ಸಂಪತ್ತು ಉಳಿಸಬೇಕು. ಮಣ್ಣಿನ ಫಲವತ್ತತೆ ಉಳಿಯಬೇಕಾದರೆ ಸೆಗಣಿ ಗೊಬ್ಬರ ಉಪಯೋಗಿಸಬೇಕು. ರಾಷ್ಟ್ರದ ಸಂಪತ್ತನ್ನು ಹಾಗೂ ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣನ್ನು ಹಾಗೂ ಸಮೃದ್ಧವಾದ ದೇಶವನ್ನು ನಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಹೋಗೋಣ ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ವಿ.ಐ.ಬೆಣಗಿ ಮಾತನಾಡಿ, ಒಕ್ಕಲುತನ ಹಾಳಾದರೆ ಜಗತ್ತೇ ಹಾಳಾಗುತ್ತದೆ. ದೇಶದ ಉದ್ಧಾರವಾಗಬೇಕಾದರೆ ಮಣ್ಣಿನ ಸಂರಕ್ಷಣೆ ಅಗತ್ಯ. ಮಣ್ಣು ಜೀವಂತ ವಸ್ತು, ಮಣ್ಣಿನ ಆರೋಗ್ಯ ಬಹಳ ಅವಶ್ಯಕ. ಅದಕ್ಕಾಗಿ ದೇಶೀಯ ಗೋವು ರಕ್ಷಣೆ ಮಾಡುವುದು ಅನಿವಾರ್ಯವಾಗಿದೆ. ಕೃಷಿಯಲ್ಲಿ ಮಣ್ಣಿನ ಪರೀಕ್ಷೆ ಮಾಡಿ ರಾಸಾಯನಿಕ ಗೊಬ್ಬರವನ್ನು ಬಳಸಬೇಕು ಎಂದು ರೈತರಿಗೆ ಸಲಹೆ ನೀಡಿದರು.

ವಿಜಯಪೂರದ ಕೃಷಿ ತಜ್ಞ ಬಸವರಾಜ ಬಿರಾದಾರ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ನಂದಿಕೂಗು ಪುಸ್ತಕ ಬಿಡುಗಡೆ ಮಾಡಿದರು. ಪಟ್ಟಣದ ಗಣ್ಯರಾದ ಪ್ರವೀಣ ನಾಡಗೌಡ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಬುಜಬಲಿ ಕೆಂಗಾಲಿ, ಸುರೇಶ ಕಬಾಡಗಿ, ಕೃಷಿ ಪಂಡಿತ ಧನಪಾಲ ಯಲ್ಲಟ್ಟಿ, ಧರೆಪ್ಪ ಕಿತ್ತೂರ, ನಿಂಗಪ್ಪ ಮಲಾಬದಿ, ಮಾಜಿ ಸೈನಿಕ ಸುಭಾಸ ಮಾಕಾಳೆ, ಸಿರಸ್ತೇದಾರ ಲಕ್ಷ್ಮಣರಾವ ಮಿರಜಕರ, ನಂದಿ ರಥಯಾತ್ರೆ ವಕ್ತಾರ ನವೀನ ಸೇರಿ ಇನ್ನಿತರರು ವೇದಿಕೆಯಲ್ಲಿದ್ದರು. ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾವಿರಾರು ರೈತರು ಸೇರಿದ್ದರು. ರೈತ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕಿಂತ ಪೂರ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಂದಿ ರಥಯಾತ್ರೆ ಸಂಚರಿಸಿತು. ಈಶ್ವರ ಯಲ್ಲಟ್ಟಿ ನಿರೂಪಿಸಿದರು. ರಾಮಣ್ಣ ಹಿಡಕಲ್ಲ ಸ್ವಾಗತಿಸಿದರು. ಎಮ್.ಬಿ.ಮಾಳೇದ ವಂದಿಸಿದರು.