ಬಸ್ರೂರು: ಕ್ಯಾನ್ಸರ್, ಮಧುಮೇಹ ತಪಾಸಣಾ ಶಿಬಿರ

| Published : Oct 24 2025, 01:00 AM IST

ಸಾರಾಂಶ

ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಇಲ್ಲಿನ ಬಸ್ರೂರು ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಸ್ತನ, ಗರ್ಭಕೋಶ ಹಾಗೂ ಬಾಯಿ ಕ್ಯಾನ್ಸರ್‌ಗಳ ಜೊತೆಗೆ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ಉಚಿತ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಇಲ್ಲಿನ ಬಸ್ರೂರು ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಸ್ತನ, ಗರ್ಭಕೋಶ ಹಾಗೂ ಬಾಯಿ ಕ್ಯಾನ್ಸರ್‌ಗಳ ಜೊತೆಗೆ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ಉಚಿತ ಶಿಬಿರ ನಡೆಯಿತು.ಕೋಣಿ ಗ್ರಾ.ಪಂ., ಮಾನಸ್ವಿನಿ ಸಂಜೀವಿನಿ ಸಂಘ, ಬಸ್ರೂರು ವ್ಯ.ಸೇ.ಸಹಕಾರಿ ಸಂಘ, ಕೋಟೇಶ್ವರ ರೋಟರಿ ಕ್ಲಬ್ ಮತ್ತು ಆನ್ಸ್ ಕ್ಲಬ್‌ಗಳ ಸಹಯೋಗದಲ್ಲಿ ನಡೆದ ಶಿಬಿರವನ್ನು ಕೋಣಿ ಗ್ರಾ.ಪಂ. ಅಧ್ಯಕ್ಷ ಗಣಪತಿ ಶೇಟ್ ಉದ್ಘಾಟಿಸಿದರು. ಮಾನಸ್ವಿನಿ ಅಧ್ಯಕ್ಷೆ ನಾಗರತ್ನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕೆಎಂಸಿ ಸಹಪ್ರಾಧ್ಯಾಪಕಿ ಡಾ. ಅಖಿಲಾ ಡಿ., ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಕುರಿತು ಜನಜಾಗೃತಿ ಉಪನ್ಯಾಸ ನೀಡಿದರು. ಕ್ಯಾನ್ಸರ್ ವಿಧಾನಗಳು, ಲಕ್ಷಣಗಳು ಹಾಗೂ ಶೀಘ್ರ ಪತ್ತೆಯ ಅಗತ್ಯತೆಯನ್ನು ವಿವರಿಸಿದರು. ಸ್ತನ ಸ್ವಪರೀಕ್ಷೆ, ಪ್ಯಾಪ್ ಸ್ಮಿಯರ್ ಪರೀಕ್ಷೆ, ನಿಯಮಿತ ವೈದ್ಯಕೀಯ ತಪಾಸಣೆಯ ಮಹತ್ವವನ್ನು ತಿಳಿಸಿದರು. ಕ್ಯಾನ್ಸರನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಹೆಚ್ಚುತ್ತದೆ ಎಂದವರು ಹೇಳಿದರು.ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸೌಮ್ಯ ಮೊಗವೀರ, ಪಿಡಿಒ ತೇಜಪ್ಪ ಕುಲಾಲ್, ಮಂಗಳೂರಿನ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಪ್ರಾದೇಶಿಕ ವ್ಯವಸ್ಥಾಪಕ ರಂಜನ್, ಬಸ್ರೂರು ವ್ಯ.ಸೇ.ಸ.ಸಂಘ ಅಧ್ಯಕ್ಷ ಸೀನಾ ಪೂಜಾರಿ, ರೋಟರಿ ಅಧ್ಯಕ್ಷ ವಿಜಯ ಶೆಟ್ಟಿ, ಕಾರ್ಯದರ್ಶಿ ಸುಧೀರ್ ಕುಮಾರ ಶೆಟ್ಟಿ, ಆ್ಯನ್ಸ್ ಕ್ಲಬ್ ಅಧ್ಯಕ್ಷೆ ರೇವತಿ ಪ್ರಭಾಕರ್, ಕಾರ್ಯದರ್ಶಿ ದೀಪಿಕಾ ಉದಯಕುಮಾರ್ ಶೆಟ್ಟಿ, ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ. ವಿದ್ಯಾ, ಸಾಮಾಜಿಕ ಕಾರ್ಯಕರ್ತ ಕೃಷ್ಣದೇವ ಕಾರಂತ್, ಗ್ರಾ.ಪಂ. ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 77 ಭಾಗವಹಿಸಿ ಪ್ರಯೋಜನ ಪಡೆದರು.