ಆರ್‌ಎಸ್‌ಎಸ್‌ ನಿಷೇಧಕ್ಕೆ ಮುಂದಾದರೆ ದೇಶದಲ್ಲಿ ದಂಗೆ: ಅಪ್ಪಚ್ಚು ರಂಜನ್

| Published : Oct 24 2025, 01:00 AM IST

ಆರ್‌ಎಸ್‌ಎಸ್‌ ನಿಷೇಧಕ್ಕೆ ಮುಂದಾದರೆ ದೇಶದಲ್ಲಿ ದಂಗೆ: ಅಪ್ಪಚ್ಚು ರಂಜನ್
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ನಿಷೇಧಕ್ಕೆ ಮುಂದಾದರೆ ದೇಶವೇ ದಂಗೆ ಏಳಲಿದೆ ಎಂದು ಮಾಜಿ ಶಾಸಕ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ನಿಷೇಧಕ್ಕೆ ಮುಂದಾದರೆ ದೇಶವೇ ದಂಗೆ ಏಳಲಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಎಚ್ಚರಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಸ್ಥಳಗಳಲ್ಲಿ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಿನಲ್ಲಿ ಆರ್‌ಎಸ್‌ಎಸ್ ನಡೆಸುವ ಎಲ್ಲ ಬಗೆಯ ಚಟುವಟಿಕೆಗಳಿಗೂ ನಿಷೇಧ ಹೇರಲು ಮುಖ್ಯಮಂತ್ರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದಿದ್ದಾರೆ. ಇದು ಖಂಡನೀಯ. ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಕೇಂದ್ರ ಗೃಹ ಸಚಿವರು ಎಲ್ಲರೂ ಆರ್‌ಎಸ್‌ಎಸ್‌ನಿಂದ ಬಂದವರು. ಆರ್‌ಎಸ್‌ಎಸ್ ಜಾತಿಗೆ ಸೀಮಿತವಾಗಿಲ್ಲ. ಇಡೀ ದೇಶದಲ್ಲೇ ವಿಶಾಲವಾಗಿ ಬೆಳೆಯುತ್ತಿದ್ದು, ನಿಷೇಧ ಮಾಡಲು ಮುಂದಾದರೆ ಇಡೀ ದೇಶವೇ ದಂಗೆ ಏಳುತ್ತದೆ ಎಂದು ಸೋಮವಾರ ಹೇಳಿದರು.

1975, 1992ರಲ್ಲಿ ಆರ್‌ಎಸ್‌ಎಸ್‌ನನ್ನು ನಿಷೇಧ ಮಾಡಿತ್ತು. ಯಾವುದಕ್ಕೂ ಜಗ್ಗದೇ ಮತ್ತೆ ಬಲಿಷ್ಠವಾಗಿ ನಿಂತಿದೆ. ಎಲ್ಲಾ ವರ್ಗಗಳಲ್ಲಿ ಆರ್‌ಎಸ್‌ಎಸ್ ಕಾರ್ಯನಿರ್ವಹಿಸುತ್ತಿದನ್ನು ನೋಡುತ್ತಿರುವ ಕಾಂಗ್ರೆಸ್‌ಗೆ ರಾಷ್ಟ್ರೀಯ ಸ್ವಯಂ ಸೇವಕರನ್ನು ನೋಡಿ ಭಯ ಆರಂಭವಾಗಿದೆ. ಇಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರದಲ್ಲಿ ಬಿಡಿಗಾಸಿಲ್ಲ. ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಬಿಡುಗಡೆಯಾಗಬೇಕಿದ್ದ ಅನುದಾನ ಬಿಡುಗಡೆಯಾಗದೇ ಅಭಿವೃದ್ಧಿ ಕುಂಠಿತವಾಗಿದೆ. ಕಾಂಗ್ರೆಸ್ ಆರ್‌ಎಸ್‌ಎಸ್ ನಿಷೇಧ ಮಾಡುವ ಕುರಿತು ಆಲೋಚನೆ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಗಮನ ಹರಿಸಲಿ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ತನ್ನ ತಂದೆಯಿಂದ ಇಂದು ಸಚಿವರಾಗಿದ್ದಾರೆ. ತಾಕತ್ತಿದ್ದರೆ ತಮ್ಮ ತಂದೆಯನ್ನು ಮುಖ್ಯಮಂತ್ರಿ ಮಾಡಲಿ ಎಂದು ಸವಾಲೆಸೆದ ಅವರು, ಇಂದು ಗುಲ್ಬರ್ಗ ಜಿಲ್ಲೆ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ರಾಜ್ಯದಲ್ಲಿ ಕೊನೆ ಸ್ಥಾನದಲ್ಲಿದೆ. ಕಾರಣ, ಶೈಕ್ಷಣಿಕವಾಗಿ ಗುಲ್ಬರ್ಗ ಜನತೆ ಮುಂದೆ ಬಂದರೆ ಇವರನ್ನು ಕಿತ್ತು ಹಾಕುತ್ತಾರೆ ಎಂಬ ಭಯ ಅವರಲ್ಲಿದೆ. ಅಭಿವೃದ್ಧಿ ವಿಚಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಹೊರತು ಪಡಿಸಿದರೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ಆರ್‌ಎಸ್‌ಎಸ್ ಚಟುವಟಿಕೆಗಳ ಮೇಲೆ ಕಾಂಗ್ರೆಸ್ ನಿರ್ಬಂಧ ಹೇರುತ್ತಿರುವುದು ಖಂಡನೀಯ. ಒಬ್ಬರ ವೈಯುಕ್ತಿಕ ದ್ವೇಷದ ಹಿನ್ನೆಲೆ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇದೊಂದು ಶೋಚನೀಯ ವ್ಯವಸ್ಥೆಯಾಗಿದ್ದು, ದೇಶಕ್ಕೆ ಗಂಡಾಂತರ ಬಂದಾಗ, ಪಾಕೃತಿಕ ವಿಕೋಪ ಸಂಭವಿಸಿದಾಗ ಆರ್‌ಎಸ್‌ಎಸ್ ಸ್ವಯಂ ಸೇವಕರು ರಕ್ಷಣೆ ಮಾಡಿರುವ ಸಾಕಷ್ಟು ಉದಾಹರಣೆಗಳಿದೆ ಎಂದ ಅವರು, ಈ ಹಿಂದೆ ತಮಿಳುನಾಡಿನಲ್ಲಿ ಆರ್‌ಎಸ್‌ಎಸ್ ನಿಷೇಧಕ್ಕೆ ಮುಂದಾದ ಸಂದರ್ಭದಲ್ಲಿ ಕೋರ್ಟ್ ಕೂಡ ಚೀಮಾರಿ ಹಾಕಿತ್ತು. ಇದನ್ನು ರಾಜ್ಯ ಸರ್ಕಾರ ಮನಗಾಣಬೇಕು ಎಂದರು.

ಜಿಲ್ಲೆಯಲ್ಲಿ ಗೋಸಾಗಾಟ, ಗೋಮಾಂಸ ಮಾರಾಟ ಎಗ್ಗಿಲ್ಲದೇ ಸಾಗುತ್ತಿದೆ. ಜಿಲ್ಲೆಯಲ್ಲಿ ನಿರ್ಬಂಧವಿದ್ದರು, ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಜನಪತ್ರಿನಿಧಿಗಳು ನಿಷ್ಕ್ರಿಯರಾಗಿದ್ದಾರೆ. ಸರ್ಕಾರ ತಡೆಗಟ್ಟುವಲ್ಲಿ ವಿಫಲವಾಗಿದೆ. ಜಿಲ್ಲೆಯಲ್ಲಿ ತಪಾಸಣೆ ಕೇಂದ್ರಗಳು ಇದ್ದರು ಕೂಡ ಹೇಗೆ ಗೋಸಾಗಾಟ, ಗೋಮಾಂಸ ಮಾರಾಟ ನಡೆಯುತ್ತಿದೆ ಎಂದು ಪ್ರಶ್ನಿಸಿದ ಅವರು, ಪ್ರಕರಣಗಳ ಗಂಭೀರತೆ ಅರಿತು ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ನೆಲ್ಲೀರ ಚಲನ್, ವಿ.ಕೆ.ಲೋಕೇಶ್, ವಕ್ತಾರ ತಳೂರು ಕಿಶೋರ್ ಕುಮಾರ್ ಇದ್ದರು.