ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ‘ಒನ್ ಟೈಮ್ ಸೆಟಲ್‌ಮೆಂಟ್’ (ಒಟಿಎಸ್) ಯೋಜನೆಯಡಿ ಬಡ್ಡಿ, ದಂಡ ಮನ್ನಾ ಮಾಡಿದರೂ ಪಾಲಿಕೆ ವ್ಯಾಪ್ತಿಯಲ್ಲಿ ಇನ್ನೂ 2.32 ಲಕ್ಷ ಆಸ್ತಿ ಮಾಲೀಕರು ₹373 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಒಟ್ಟಾರೆ ಆಸ್ತಿ ತೆರಿಗೆ ಸಂಗ್ರಹ ನಾಲ್ಕು ಸಾವಿರ ಕೋಟಿ ರುಪಾಯಿ ದಾಟಿಲ್ಲ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಸುಸ್ತಿದಾರರಿಗೆ ಆಸ್ತಿ ತೆರಿಗೆ ಮೇಲೆ ವಿಧಿಸಲಾಗುತ್ತಿದ್ದ ದುಪ್ಪಟ್ಟು ದಂಡ ಹಾಗೂ ಬಡ್ಡಿಯನ್ನು ಈ ಯೋಜನೆಯಡಿ ರಿಯಾಯಿತಿಯನ್ನು ಎಂಟು ತಿಂಗಳು ನೀಡಲಾಗಿದೆ. ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಪಾವತಿದಾರರಿಗೆ ನೀಡಲಾಗುವ ಶೇಕಡ 5ರಷ್ಟು ರಿಯಾಯಿತಿಯನ್ನು ಜೂನ್ ವರೆಗೆ ನೀಡಲಾಗಿತ್ತು. ಈವರೆಗೆ ಸುಮಾರು ₹3700 ಕೋಟಿ ಮಾತ್ರ ಆಸ್ತಿ ತೆರಿಗೆ ವಸೂಲಿಯಾಗಿದೆ. ಆರ್ಥಿಕ ವರ್ಷದ ಅಂತ್ಯದ ಮಾರ್ಚ್ ವೇಳೆ ₹5210 ಕೋಟಿ ವಸೂಲಿ ಮಾಡುವ ಗುರಿಯನ್ನು ಬಿಬಿಎಂಪಿ ಹಾಕಿಕೊಂಡಿದೆ.
₹360 ಕೋಟಿ ವಸೂಲಿ:
ಆರ್ಥಿಕ ವರ್ಷದ ಆರಂಭದಲ್ಲಿ 3.95 ಲಕ್ಷ ಆಸ್ತಿ ಮಾಲೀಕರು ₹734 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಕಳೆದ ಎಂಟು ತಿಂಗಳಲ್ಲಿ 1.64 ಲಕ್ಷ ಆಸ್ತಿ ಮಾಲೀಕರು ಮಾತ್ರ ಒಟಿಎಸ್ ಯೋಜನೆ ಬಳಕೆ ಮಾಡಿಕೊಂಡು ₹360 ಕೋಟಿ ಮಾತ್ರ ಬಾಕಿ ಮೊತ್ತ ಪಾವತಿ ಮಾಡಿದ್ದಾರೆ.
6,400 ಮಳಿಗೆಗಳಿಗೆ ಬೀಗ
ಆಸ್ತಿ ತೆರಿಗೆ ಪಾವತಿ ಮಾಡದ ಕಾರಣಕ್ಕಾಗಿ ಈವರೆಗೆ 6381 ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿ ಸೀಜ್ ಮಾಡಿ ವಸೂಲಿ ಮಾಡುವ ಕೆಲಸ ಮಾಡಿದ್ದಾರೆ. ಜತೆಗೆ ಅತಿ ಹೆಚ್ಚಿನ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಸತಿ ಹಾಗೂ ಇನ್ನಿತರೆ ಆಸ್ತಿಗಳ ಮಾಲೀಕರ 82 ಸಾವಿರ ಬ್ಯಾಂಕ್ ಖಾತೆಯನ್ನು ಬಿಬಿಎಂಪಿಯ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲಾಗಿದೆ.
₹600 ಕೋಟಿ ಹೆಚ್ಚುವರಿ ವಸೂಲಿ
ಬಿಬಿಎಂಪಿ ಕಳೆದ ವರ್ಷ ಯಾವುದೇ ರಿಯಾಯಿತಿ ಯೋಜನೆ ಜಾರಿಗೊಳಿಸದೇ ನವೆಂಬರ್ ವೇಳೆಗೆ ₹3,075 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿತ್ತು. ಈ ಬಾರಿ ಒಟಿಎಸ್ ಯೋಜನೆ ಹಾಗೂ ಮೂರು ತಿಂಗಳು ಆಸ್ತಿ ತೆರಿಗೆ ಮೇಲೆ ಶೇ.5ರಷ್ಟು ರಿಯಾಯಿತಿ ನೀಡಿದರೂ ಈವರೆಗೆ ₹3,684 ಕೋಟಿ ಸಂಗ್ರಹಿಸಿದೆ. ಕಳೆದ ವರ್ಷದ ಈ ವೇಳೆಗೆ ಹೋಲಿಕೆ ಮಾಡಿದರೆ ಸುಮಾರು ₹600 ಕೋಟಿ ಅಷ್ಟೇ ಹೆಚ್ಚುವರಿಯಾಗಿ ಸಂಗ್ರಹಿಸಿದೆ.
ಒಟಿಎಸ್ ಲಾಭಕ್ಕೆ 6 ದಿನ ಬಾಕಿ
ಒನ್‌ಟೈಮ್ ಸೆಟ್ಲಮೆಂಟ್ (ಒಟಿಎಸ್) ಯೋಜನೆ ನವೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಡಿಸೆಂಬರ್ 1ರಿಂದ ಆಸ್ತಿ ತೆರಿಗೆ ಪಾವತಿ ಮಾಡಲು ಮುಂದಾದರೆ, ಆಸ್ತಿ ತೆರಿಗೆ ಒಟ್ಟು ಮೊತ್ತಕ್ಕೆ ಸರಿಯಾಗಿ ದಂಡ ಮೊತ್ತ ಹಾಗೂ ಬಡ್ಡಿ ಸೇರಿಸಿ ಪಾವತಿ ಮಾಡಬೇಕಾಗಲಿದೆ.
ಆಸ್ತಿ ತೆರಿಗೆ ಸಂಗ್ರಹ ವಿವರ (ಕೋಟಿ ₹)
ವಲಯಗುರಿಸಂಗ್ರಹ ಮೊತ್ತ
ಪೂರ್ವ891.89641.99
ಮಹದೇವಪುರ1,309.04981.80
ದಾಸರಹಳ್ಳಿ164.95111.71
ಬೊಮ್ಮನಹಳ್ಳಿ585.11370.55
ಆರ್.ಆರ್.ನಗರ434.35388.98
ದಕ್ಷಿಣ769.50516.69
ಪಶ್ಚಿಮ610.39386.56
ಯಲಹಂಕ445.24385.56
ಒಟ್ಟು5,210.483,684.04
ಆಸ್ತಿ ಆಧಾರಿತ ಬಾಕಿ ವಿವರ (ಕೋಟಿ ₹)
ಆಸ್ತಿಬಾಕಿ ಮೊತ್ತ
ವಸತಿ304.82
ವಾಣಿಜ್ಯ168.23
ವಸತಿ/ ವಾಣಿಜ್ಯ65.38
ನಿವೇಶನ104.04
ಆಸ್ತಿ ತೆರಿಗೆ ಬಾಕಿದಾರರಿಂದ ಬಡ್ಡಿ ಸಹಿತ ದಂಡ ವಸೂಲಿ: ತುಷಾರ್
ಕನ್ನಡಪ್ರಭ ವಾರ್ತೆ ಬೆಂಗಳೂರುಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ದಂಡ ಮತ್ತು ಬಡ್ಡಿ ರಹಿತವಾಗಿ ಬಾಕಿ ತೆರಿಗೆ ಪಾವತಿಸಲು ಜಾರಿಗೊಳಿಸಲಾಗಿದ್ದ ಒನ್ ಟೈಂ ಸೆಟಲ್‌ಮೆಂಟ್ (ಒಟಿಎಸ್) ಅವಧಿ ನ.30ಕ್ಕೆ ಮುಗಿಯಲಿದ್ದು, ಡಿ.1ರಿಂದ ಬಾಕಿ ಉಳಿಸಿಕೊಂಡವರ ಆಸ್ತಿಗಳ ಬಳಿ ತೆರಳಿ ತೆರಿಗೆ ವಸೂಲಿ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಒಟಿಎಸ್ ಅಡಿಯಲ್ಲಿ ದಂಡ ಮತ್ತು ಬಡ್ಡಿ ರಹಿತವಾಗಿ ಬಾಕಿ ತೆರಿಗೆ ಪಾವತಿಸಲು ಇನ್ನೂ ಐದು ದಿನಗಳ ಮಾತ್ರ ಬಾಕಿ ಉಳಿದಿವೆ. ಅಷ್ಟರೊಳಗೆ ತೆರಿಗೆ ಬಾಕಿ ಉಳಿಸಿಕೊಂಡವರು ಪಾವತಿಸಬೇಕು. ಡಿ.1ರಿಂದ ದಂಡ ಮತ್ತು ಬಡ್ಡಿ ಸಹಿತವಾಗಿ ತೆರಿಗೆ ವಸೂಲಿ ಮಾಡಲಾಗುವುದು. ಅದಕ್ಕೆ ಸಂಬಂಧಿಸಿದಂತೆ ವಲಯ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದರು.ಪ್ರಸಕ್ತ ಸಾಲಿನಲ್ಲಿ ₹5,700 ಕೋಟಿ ಆಸ್ತಿ ತೆರಿಗೆ ವಸೂಲಿಯ ಗುರಿ ಹೊಂದಲಾಗಿದೆ. ಅದರಂತೆ ಈವರೆಗೆ ₹3,751 ಕೋಟಿ ತೆರಿಗೆ ವಸೂಲಿಯಾಗಿದ್ದು, ನ.30ರೊಳಗೆ ₹4 ಸಾವಿರ ಕೋಟಿ ತೆರಿಗೆ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, 2025ರ ಮಾರ್ಚ್ ಅಂತ್ಯದೊಳಗೆ ಗುರಿಯಂತೆ ತೆರಿಗೆ ವಸೂಲಿ ಮಾಡಲಾಗುವುದು ಎಂದು ಹೇಳಿದರು.