ಮಳೆಯಿಂದಾಗಿ ಸಂಪೂರ್ಣವಾಗಿ ಹಾಳಾಗಿರುವ 400 ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ಡಾಂಬರು

| Published : Nov 26 2024, 01:30 AM IST / Updated: Nov 26 2024, 05:40 AM IST

ಸಾರಾಂಶ

ಮಳೆಯಿಂದಾಗಿ ಸಂಪೂರ್ಣವಾಗಿ ಹಾಳಾಗಿರುವ ರಸ್ತೆಗಳು ಶೀಘ್ರದಲ್ಲೇ ಸಂಪೂರ್ಣ ಡಾಂಬರೀಕರಣ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

 ಬೆಂಗಳೂರು : ನಗರದ ರಸ್ತೆಗಳ ಗುಂಡಿ ಸಮಸ್ಯೆ ಪರಿಹರಿಸಲು ₹694 ಕೋಟಿ ವೆಚ್ಚದಲ್ಲಿ 400 ಕಿಲೋ ಮೀಟರ್‌ ಉದ್ದದ ರಸ್ತೆಗಳಿಗೆ ಡಾಂಬರೀಕರಣ ಮಾಡಲು ಬಿಬಿಎಂಪಿ ಯೋಜನೆ ರೂಪಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ನಗರದಲ್ಲಿ ಗುಂಡಿಗಳು ಸೃಷ್ಟಿಯಾದ ಕೂಡಲೇ ಅದನ್ನು ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಕಳೆದ ಐದಾರು ವರ್ಷಗಳಿಂದ ಹೊಸದಾಗಿ ಡಾಂಬರೀಕರಣ ಮಾಡದ ಕಾರಣ ಹಲವು ಮುಖ್ಯ, ಉಪಮುಖ್ಯ ರಸ್ತೆಗಳು ಗುಂಡಿ ಮುಚ್ಚಿದ್ದರಿಂದ ರಸ್ತೆ ಉಬ್ಬು ಸೃಷ್ಟಿಯಾಗುವಂತಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿರುವ ರಸ್ತೆಗಳನ್ನು ಗುರುತಿಸಿ ಹೊಸದಾಗಿ ಡಾಂಬರೀಕರಣ ಮಾಡಲು ನಿರ್ಧರಿಸಲಾಗಿದೆ ಎಂದರು.

ಸದ್ಯ ಸುಮಾರು 400 ಕಿ.ಮೀ. ಉದ್ದದ ರಸ್ತೆಗಳಲ್ಲಿ ಈಗಿರುವ ಡಾಂಬರ್‌ ಸಂಪೂರ್ಣವಾಗಿ ತೆಗೆದು, ಹೊಸದಾಗಿ ಡಾಂಬರೀಕರಣ ಮಾಡಲಾಗುವುದು. ಪ್ರತಿ ಕಿ.ಮೀ. ರಸ್ತೆಗೆ 1.5ರಿಂದ 2 ಕೋಟಿ ರುಪಾಯಿ ವೆಚ್ಚವಾಗುವ ಅಂದಾಜಿಸಲಾಗಿದೆ. ಅದರಂತೆ ಒಟ್ಟು ₹694 ಕೋಟಿ ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡಲಾಗುತ್ತದೆ. ಈ ಸಂಬಂಧ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಮೂರ್ನಾಲ್ಕು ದಿನಗಳಲ್ಲಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಡಿಸೆಂಬರ್‌ ಅಂತ್ಯದಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಗುತ್ತಿಗೆದಾರರನ್ನು ನೇಮಿಸಲಾಗುವುದು ಹಾಗೂ ಜನವರಿಯಿಂದ ಕಾಮಗಾರಿ ಆರಂಭಿಸಿ, ಮುಂದಿನ ಮಳೆಗಾಲದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.