ಸಾರಾಂಶ
ಬೆಂಗಳೂರು : ಬಸವನಗುಡಿ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಅದ್ಧೂರಿ ಚಾಲನೆ ದೊರೆತಿದ್ದು, ಇಡೀ ದಿನ ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿದ್ದು, ಕಡಲೆಕಾಯಿ ಕೊಂಡು ಪರಿಷೆಯನ್ನು ಸಂಭ್ರಮಿಸಿದ್ದಾರೆ.
ಕಾರ್ತಿಕ ಮಾಸದ ಕಡೆಯ ಸೋಮವಾರದ ಹಿನ್ನೆಲೆಯಲ್ಲಿ ದೊಡ್ಡ ಬಸವಣ್ಣನಿಗೆ ಬೆಳಗ್ಗೆ 5ಕ್ಕೆ ಪಂಚಾಮೃತಾಭಿಷೇಕ, 100 ಕೇಜಿ ಕಡಲೆಕಾಯಿ ಅಭಿಷೇಕ. ನಾಣ್ಯಾಭಿಷೇಕ ನೆರವೇರಿಸಲಾಯಿತು. ದೊಡ್ಡಗಣಪತಿಗೆ 75 ಕೇಜಿ ಬೆಣ್ಣೆಯಿಂದ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪರಿಷೆಗೆ ಚಾಲನೆ ನೀಡಿದರು.
ದೊಡ್ಡ ಗಣಪತಿ ದೇವಸ್ಥಾನದ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ರಾಶಿ ರಾಶಿ ಕಡಲೆಕಾಯಿ ವ್ಯಾಪಾರ ನಡೆಯಿತು. ಹಸಿಕಡಲೆ, ಬೇಯಿಸಿದ ಕಡಲೆ, ಹುರಿದ ಕಡಲೆಗಳನ್ನು ಜನರು ಮುಗಿಬಿದ್ದು ಖರೀದಿಸಿದರು. ಬಸವನಗುಡಿ ದೊಡ್ಡಗಣಪತಿ ದೇವಸ್ಥಾನಕ್ಕೆ ಹೊಂದಿಕೊಂಡ ಇತರ ರಸ್ತೆಗಳು ಮಳಿಗೆಗಳು, ಬೀದಿ ವ್ಯಾಪಾರಸ್ಥರಿಂದ ತುಂಬಿ ಹೋಗಿವೆ. ರಸ್ತೆಗಳು ಅಲಂಕೃತ ವಿದ್ಯುದೀಪಗಳಿಂದ ಜಗಮಗಿಸುತ್ತಿವೆ. ಪರಿಷೆಯ ಕೊನೆಯ ದಿನವಾದ ಮಂಗಳವಾರ ಇನ್ನಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸುವ ಸಾಧ್ಯತೆಯಿದೆ.
ತರಹೇವಾರಿ ತಳಿಯ ಕಡಲೆ:
ಹಲವು ತಳಿಯ ಕಡಲೆಕಾಯಿಯನ್ನು ಖರೀದಿಸುವ ಮೂಲಕ ಅದರ ಸವಿ ಸವಿದರು. ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿಂತಾಮಣಿ ಸೇರಿ ನೆರೆಯ ಆಂಧ್ರಪ್ರದೇಶ, ತಮಿಳುನಾಡುಗಳಿಂದಲೂ ವ್ಯಾಪಾರಿಗಳು, ಕಡಲೆಕಾಯಿಯನ್ನು ಮಾರಾಟಕ್ಕೆ ತಂದಿದ್ದಾರೆ. ಹಾಗೇ ವ್ಯಾಪಾರಿಗಳು ಹಸಿ ಹಾಗೂ ಹುರಿದ ಕಡಲೆಕಾಯಿಗೆ ಸೇರಿಗೆ ₹60- ₹70 ರಂತೆ ಮಾರಾಟ ಮಾಡುತ್ತಿದ್ದಾರೆ. ಮಳೆ ವ್ಯತ್ಯಾಸದಿಂದ ಫಸಲು ಕಡಿಮೆ ಬಂದ ಹಿನ್ನೆಲೆಯಲ್ಲಿ ದರ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದರು.
ಪ್ಲಾಸ್ಟಿಕ್ ಚೀಲಕ್ಕೆ ನಿಷೇಧ: ಬಿಬಿಎಂಪಿ ಕಡಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್ ವಿರುದ್ಧ ‘ಪರಿಷೆಗೆ ಬನ್ನಿ ಕೈಚೀಲ ತನ್ನಿ’ ಜನ ಜಾಗೃತಿ ಕಾರ್ಯವನ್ನು ಮಾಡುತ್ತಿದೆ.
ಬೆಲ್ಲದ ಪರಿಷೆ:
ಆರೋಗ್ಯಕರ ಮತ್ತು ರುಚಿಕರ ಬೆಲ್ಲದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಡಲೆಕಾಯಿ ಪರಿಷೆಯಲ್ಲಿ ಮಂಡ್ಯ ಕೃಷಿ ಇಲಾಖೆಯು ಶುದ್ಧ ಬೆಲ್ಲ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಸಂದೇಶದೊಂದಿಗೆ ‘ಬೆಲ್ಲದ ಪರಿಷೆ’ ಆಯೋಜಿಸಿದೆ. ವಿವಿಧ ವಿನ್ಯಾಸಗಳು ಪರಿಷೆಯ ಆಕರ್ಷಣೆಯಾಗಿದೆ.
ಸುಂಕವಿಲ್ಲದ್ದಕ್ಕೆ ಸಂತಸ:
ನಾವು 30 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಕಳೆದ ವರ್ಷ ದಿನಕ್ಕೆ ₹1 ಸಾವಿರ ಸುಂಕ ವಸೂಲಿ ಮಾಡುತ್ತಿದ್ದರು. ಆದರೆ ಈ ಸಲ ಸುಂಕ ವಸೂಲಿ ಮಾಡುತ್ತಿಲ್ಲ. ಇದರಿಂದ ಹೆಚ್ಚಿನ ಲಾಭವಾಗಲಿದೆ ಎಂದು ಕಲಾಸಿಪಾಳ್ಯದ ವ್ಯಾಪಾರಿ ದೀಪಾ ಸಂತಸ ವ್ಯಕ್ತಪಡಿಸಿದ್ದಾರೆ.ತೆಪ್ಪೋತ್ಸವ ಸಂಪನ್ನ
ಸಂಜೆ ಕೆಂಪಾಂಬುದಿ ಕೆರೆಯಲ್ಲಿ ತೆಪ್ಪೋತ್ಸವ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಜನರು ತೆಪ್ಪೋತ್ಸವ ಕಣ್ತುಂಬಿಕೊಂಡರು. ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ನಡೆದ ಸಂಗೀತ ಕಾರ್ಯಕ್ರಮಗಳು ನೆರೆದ ಸಂಗೀತ ರಸಿಕರ ಮನಸೆಳೆಯಿತು. ನೃತ್ಯಗುರು ಕರ್ನಾಟಕ ಕಲಾಶ್ರೀ ವಿದ್ಯಾ ಶಂಕರ್ ತಂಡ ಸಮೂಹ ಭರತನಾಟ್ಯ ಪ್ರದರ್ಶನ ನಡೆಸಿಕೊಟ್ಟಿತ್ತು. ಹಾಗೆಯೇ ವಿಜಯ ವಿಠಲ ಶಾಲೆ ವತಿಯಿಂದ ವೈವಿದ್ಯಮಯ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಿತು.
ಮಂಗಳವಾರ ಹಿರಿಯ ಸುಗಮ ಸಂಗೀತ ಕಲಾವಿದ ಕಿಕ್ಕೇರಿ ಕೃಷ್ಣಮೂರ್ತಿ ಅವರ ಆದರ್ಶ ಸುಗಮ ಸಂಗೀತ ಅಕಾಡೆಮಿ ತಂಡ ‘ಕನ್ನಡ ಡಿಂಡಿಮ’ ಕಾರ್ಯಕ್ರಮ ನಡೆಯಲಿದೆ.
ಬಸವನಗುಡಿ ಹೆರಿಟೇಜ್ ಕಾರಿಡಾರ್: ಡಿಸಿಎಂಕಡಲೆಕಾಯಿ ಪರಿಷೆ ಉದ್ಘಾಟನೆ ಮಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಬಸವನಗುಡಿಯನ್ನು ಬ್ರ್ಯಾಂಡ್ ಬೆಂಗಳೂರಿನಡಿ ಹೆರಿಟೇಜ್ ಕಾರಿಡಾರ್ ಮಾಡುವ ಸಂಬಂಧ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಜೊತೆಗೆ ವೃಷಭಾವತಿ ನದಿ ಜನ್ಮಸ್ಥಳಕ್ಕೆ ಜೀವಕಳೆ ತಂದುಕೊಡುವ ಕೆಲಸ ಮಾಡಲಿದ್ದೇವೆ ಎಂದರು.
ಪರಿಷೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಎಲ್ಲರೂ ಕೈ ಜೋಡಿಸಿ. ಈ ಬಾರಿಯಿಂದ ವ್ಯಾಪಾರಸ್ಥರಿಗೆ ಸುಂಕ ವಿನಾಯಿತಿ ನೀಡುವ ಮೂಲಕ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಹೇಳಿದರು.
ಶಾಸಕ ರವಿಸುಬ್ರಹ್ಮಣ್ಯ ಮಾತನಾಡಿ, ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಪಾರಂಪರಿಕ ದೇವಾಲಯಗಳಿವೆ. ಕ್ಷೇತ್ರವನ್ನು ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕು ಎಂದು ಕೋರಿದರು.
ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ಜಯನಗರ ಶಾಸಕ ರಾಮಮೂರ್ತಿ ಇದ್ದರು.
ಬ್ರ್ಯಾಂಡ್ ಬೆಂಗಳೂರಿನ ಬಗ್ಗೆ ವಿಪಕ್ಷ ನಾಯಕರು ಟೀಕೆ ಮಾಡಿದ್ದಾರೆ. ಇದರ ಬಗ್ಗೆ ಈಗ ಉತ್ತರ ಕೊಡುವುದಿಲ್ಲ. ಆದರೆ, 2028ಕ್ಕೂ ಮುನ್ನ ಖಂಡಿತವಾಗಿ ಉತ್ತರ ನೀಡುತ್ತೇನೆ. ನಾನು ಸುಮ್ಮನೆ ಕುಳಿತುಕೊಳ್ಳಲ್ಲ. ಬ್ರ್ಯಾಂಡ್ ಬೆಂಗಳೂರು ಎಂದರೇನು? ಅದರಡಿ ಏನೇನು ಮಾಡಿದ್ದೇವೆ ಎಂಬುದರ ಬಗ್ಗೆ ಹೇಳುತ್ತೇವೆ.
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ.