ಕನ್ನಡಪ್ರಭ ವಾರ್ತೆ ನೆಲಮಂಗಲ/ದಾಬಸ್‍ಪೇಟೆ
ದೇಶದಲ್ಲಿ ಎಸ್‍ಐಆರ್ ರುಚಿಯನ್ನು ಕಂಡಿರುವ ಬಿಜೆಪಿ, ಕರ್ನಾಟಕದ 97 ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದೆ. ಈಗ ಕಾಂಗ್ರೆಸ್‍ನ ಬಿಎಲ್-2 ಹಾಗೂ ಮುಖಂಡರು ಎಚ್ಚರ ತಪ್ಪಿದರೆ ಸಂಕಷ್ಟವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಆರೋಪಿಸಿದರು.ನೆಲಮಂಗಲ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಎಸ್‍ಐಆರ್ ಬಗ್ಗೆ ಬಿಎಲ್-2 ಕಾರ್ಯಾಗಾರದಲ್ಲಿ ಮಾತನಾಡಿದರು.
ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಎಸ್‍ಐಆರ್ ನಿಂದ ಅನೇಕ ಬದಲಾವಣೆಗಳನ್ನು ಕಂಡಿದ್ದೇವೆ, ಕೇರಳ ರಾಜ್ಯದಲ್ಲಿ ಮೊದಲೇ ಎಸ್‍ಐಆರ್ ಬಗ್ಗೆ ಜಾಗೃತಿ ವಹಿಸಿದ ಪರಿಣಾಮ ಕೇವಲ ಶೇ.3ರಷ್ಟು ಮತದಾರರು ಮಾತ್ರ ಡಿಲೀಟ್ ಆಗಿದ್ದಾರೆ. ಬಿಜೆಪಿ ಕರ್ನಾಟಕವನ್ನು ಗುರಿಯಾಗಿಸಿಕೊಂಡಿದ್ದು, ನಾವು ಸಹ ಕೇರಳದಂತೆ ಎಚ್ಚರಿಕೆ ವಹಿಸಬೇಕಿದೆ. ಮನೆ ಮನೆಗಳಿಗೆ ಭೇಟಿ ನೀಡಿ ನಮ್ಮ ಮತದಾರರನ್ನು ಉಳಿಸುವ ಕೆಲಸವನ್ನು ಮಾಡಬೇಕು. ಮುಂದಿನ ಗ್ರಾಪಂ, ತಾಪಂ, ಜಿಪಂ, ವಿಧಾನಸಭಾ ಚುನಾವಣೆಗಳಿಗೆ ತೊಂದರೆಯಾದಂತೆ ಎಚ್ಚರಿಕೆ ವಹಿಸಲು ಈಗಲೇ ಜಾಗೃತರಾಗಬೇಕು ಎಂದರು.ಗ್ಯಾರಂಟಿ ಬರಲ್ಲ:
ಎಸ್‍ಐಆರ್ ನಲ್ಲಿ ನಾವು ಭಾಗವಹಿಸದಿದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಲಿದೆ. ಮತದಾರರ ಐಡಿ ಇಲ್ಲದಿದ್ದರೆ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಸೇರಿದಂತೆ ಎಲ್ಲವೂ ನಿಂತು ಹೋಗಲಿದೆ, ಆದ್ದರಿಂದ ತಪ್ಪದೇ ಮತದಾರರ ಗಮನಕ್ಕೆ ತಂದು ದಾಖಲೆಗಳನ್ನು ನೀಡಿ ಉಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಬಿಎಂಐಸಿಪಿ ಅಧ್ಯಕ್ಷ ರಘುನಂದನ್ ರಾಮಣ್ಣ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‍ಐಆರ್ ನಲ್ಲಿ ನಾವೆಲ್ಲರೂ ಭಾಗವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಬಿಜೆಪಿಯವರು ಲಾಭಮಾಡಿಕೊಂಡು ಚುನಾವಣೆ ಗೆಲ್ಲುತ್ತಾರೆ. ಇದಕ್ಕೆ ಆಸ್ಪದ ನೀಡಬಾರದು ಎಂದರು.
ನೆಲಮಂಗಲ ವಿಧಾನಸಭಾ ಕ್ಷೇತ್ರದ 276 ಬೂತ್ ಗಳಲ್ಲಿನ ಬಿಎಲ್- 2ಗಳಿಗೆ ಎಸ್‍ಐಆರ್ ಬಗ್ಗೆ ರಘುನಂದನ್ ರಾಮಣ್ಣ ತರಬೇತಿ ನೀಡಿದರು. ಬಿಎಲ್‍ಓ -2ಗಳಿಗೆ ಪ್ರಮಾಣಪತ್ರ ಹಾಗೂ ಪಕ್ಷದ ಐಡಿಕಾರ್ಡ್ ವಿತರಣೆ ಮಾಡಲಾಯಿತು.ಎನ್‍ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಅಧ್ಯಕ್ಷ ಎನ್. ಗಣೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಪ್ರದೀಪ್, ಮಂಜುನಾಥ್ ಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ನಾಗರತ್ನಮ್ಮ ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ನಾರಾಯಣಗೌಡ, ಬಿ.ಜಿ.ವಾಸು, ಸಿ.ಎಂಗೌಡ, ಕೆ.ಕೃಷ್ಣಪ್ಪ, ಅರ್ಜುನ್, ಟಿ.ನಾಗರಾಜು, ಲಕ್ಷ್ಮೀನಾರಾ ಯಣ್ ಮತ್ತಿತರರು ಭಾಗವಹಿಸಿದ್ದರು.
-------ಕೋಟ್
ರಾಜ್ಯದಲ್ಲಿ ಟಾರ್ಗೆಟ್ ಮಾಡಿರುವ 97 ಕ್ಷೇತ್ರಗಳಲ್ಲಿ ನೆಲಮಂಗಲವೂ ಇದೆ. ಆದ್ದರಿಂದ ಕಾಂಗ್ರೆಸ್ ಮುಖಂಡರು, ಬಿಎಲ್‍ಒ-2ಗಳು ಎಚ್ಚರ, ಕಾಳಜಿ ಹಾಗೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ನಿಯಮಾನುಸಾರ ಅರ್ಹವಿರುವ ಯಾವುದೇ ಮತದಾರ ಮತದಾನದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು. ಎಚ್ಚರ ತಪ್ಪಿದರೆ ನಮ್ಮ ಮತದಾರರನ್ನು ಕಳೆದುಕೊಳ್ಳಬೇಕಾಗುತ್ತದೆ.- ಎನ್. ಶ್ರೀನಿವಾಸ್, ಶಾಸಕ, ನೆಲಮಂಗಲ