ಹೊಸಪೇಟೆ: ಮಳೆಗಾಲದ ಆರಂಭದ ಈ ದಿನಗಳಲ್ಲಿ ನೀರಿನ ಮೂಲಗಳು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಜಲಮೂಲ ಕಲುಷಿಗೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.

ನಗರದ ತಾಪಂ ವಿದ್ಯಾರಣ್ಯ ಸಭಾಂಗಣದಲ್ಲಿ ಇತ್ತೀಚೆಗೆ ವಿಶೇಷ ನೀರಿನ ಪರೀಕ್ಷೆಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಪ್ರತಿಯೊಬ್ಬರಿಗೂ ಸುರಕ್ಷಿತ ಕುಡಿಯುವ ನೀರನ್ನು ಖಾತರಿ ಪಡಿಸುವ ಮಹತ್ತರ ಉದ್ದೇಶವಿದೆ. ವಿಶೇಷ ನೀರಿನ ಪರೀಕ್ಷೆಯ ಅಭಿಯಾನವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮೇ 25ರಿಂದ ಜೂ. 10ರ ವರೆಗೆ ಜಿಲ್ಲಾದ್ಯಂತ ಈ ವಿಶೇಷ ಆಂದೋಲನ ನಡೆಯಲಿದೆ. ಮೊದಲು ಕುಡಿಯುವ ನೀರಿನ ಗುಣಮಟ್ಟದ ಕುರಿತು ಗ್ರಾಮೀಣ ಮಟ್ಟದಲ್ಲೇ ನಿರಂತರ ನಿಗಾ ವಹಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಪ್ರತಿ ಗ್ರಾಪಂ ತಮಗೆ ನೀಡಿರುವ ಕಿಟ್‌ಗಳನ್ನು ಸಮರ್ಪಕವಾಗಿ ಬಳಸಿ, ನಿಯಮಿತವಾಗಿ ನೀರಿನ ಗುಣಮಟ್ಟ ತಪಾಸಣೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಾಂಕ್ರಾಮಿಕ ರೋಗ ಮುಕ್ತ ಗ್ರಾಮವೇ ನಮ್ಮ ಗುರಿ: ಅಶುದ್ಧ ಹಾಗೂ ಕಲುಷಿತ ನೀರಿನ ಸೇವನೆಯಿಂದ ಗ್ರಾಮೀಣ ಭಾಗದಲ್ಲಿ ಹರಡುವ ಕಾಲರಾ, ಕಾಮಾಲೆ, ಅತಿಸಾರ ಭೇದಿಯಂತಹ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಗ್ರಾಮದ ಜಲಮೂಲಗಳಲ್ಲಿ ಕ್ಲೋರಿನೇಷನ್ ಪ್ರಕ್ರಿಯೆಯನ್ನು ಸರಿಯಾದ ಪ್ರಮಾಣದಲ್ಲಿ ನಿರ್ವಹಿಸುವಂತೆ ಮತ್ತು ಶುದ್ಧ ಕುಡಿಯುವ ನೀರಿನ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಅವರು ತಿಳಿಸಿದರು.

ತಾಲೂಕಿನ ಎಲ್ಲ ಪಿಡಿಒಗಳು, ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ಹಾಗೂ ಪ್ರಮುಖವಾಗಿ ಪ್ರತಿದಿನ ನೀರು ಸರಬರಾಜು ಮಾಡುವ ನೀರು ಗಂಟಿಗಳಿಗೆ ವಿಶೇಷ ನೀರಿನ ಪರೀಕ್ಷೆಯ ಕಿಟ್ ವಿತರಿಸಲಾಯಿತು.


ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಹಿರಿಯ ರಸಾಯನ ತಜ್ಞರು ತರಬೇತಿಯನ್ನು ಪ್ರಾಯೋಗಿಕವಾಗಿ ನಡೆಸಿಕೊಟ್ಟರು. ಕಿಟ್ ಬಳಸಿ ನೀರಿನಲ್ಲಿರುವ ಫ್ಲೋರೈಡ್, ನೈಟ್ರೇಟ್, ಕ್ಲೋರೈಡ್, ಗಡಸುತನದ ಪ್ರಮಾಣವನ್ನು ಸ್ಥಳದಲ್ಲೇ ಪತ್ತೆ ಹಚ್ಚುವುದು ಹೇಗೆ ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ತಾಪಂ ಇಒ ಆಲಂ ಬಾಷಾ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ವಿಜಯಕುಮಾರ್, ಕಿರಿಯ ಅಭಿಯಂತರ ಸುರೇಶ್, ನರೇಶ್, ಸಹಾಯಕ ಅಭಿಯಂತರ ಮಹಾರುದ್ರಗೌಡ, ಹಿರಿಯ ರಸಾಯನ ತಜ್ಞ ಅರುಣಕುಮಾರ್ ಜಿ.ವಿ. ಇದ್ದರು.