ಮಾಧ್ಯಮಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿ: ಡಿಸಿ ಡಾ. ಕೆ.ವಿದ್ಯಾಕುಮಾರಿ

| Published : Apr 21 2024, 02:21 AM IST

ಮಾಧ್ಯಮಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿ: ಡಿಸಿ ಡಾ. ಕೆ.ವಿದ್ಯಾಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಹ್ಮಗಿರಿಯ ವಾರ್ತಾಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಚುನಾವಣೆಯಲ್ಲಿ ಪತ್ರಕರ್ತರ ಪಾತ್ರ ಕುರಿತು ಕಾರ್ಯಾಗಾರ ನಡೆಯಿತು. ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಪತ್ರಕರ್ತರ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಲೋಕಸಭಾ ಚುನಾವಣೆ ಕುರಿತು ಮಾಧ್ಯಮದವರು ತಮ್ಮ ದೈನಂದಿನ ಸುದ್ದಿ, ಜಾಹೀರಾತು ಸೇರಿದಂತೆ ಮತ್ತಿತರ ವಿಷಯಗಳ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಧ್ಯಮದ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಕಿವಿಮಾತು ಹೇಳಿದರು.

ಅವರು ನಗರದ ಬ್ರಹ್ಮಗಿರಿಯ ವಾರ್ತಾಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಚುನಾವಣೆಯಲ್ಲಿ ಪತ್ರಕರ್ತರ ಪಾತ್ರ ಕುರಿತು ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಚುನಾವಣಾ ಆಯೋಗ ನ್ಯಾಯ ಸಮ್ಮತ ಚುನಾವಣೆ ನಡೆಸಲು ಅನೇಕ ನಿಯಮಗಳು, ಕಾಯ್ದೆಗಳ ಜೊತೆಗೆ ಕೆಲವೊಂದು ಮಾರ್ಗದರ್ಶನಗಳನ್ನು ಸಹ ನೀಡಿದೆ. ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುವ ಮುನ್ನ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು, ಕಾಸಿಗಾಗಿ ಸುದ್ದಿಗಳನ್ನು ಪ್ರಕಟಿಸದೇ ಇರುವುದು, ನಿಗದಿತ ದಿನಗಳಲ್ಲಿ ಚುನಾವಣಾ ಸಮೀಕ್ಷೆ ನಿರ್ಬಂಧ ಸೇರಿದಂತೆ, ಮತದಾರರ ಮೇಲೆ ಪ್ರಭಾವ ಬೀರದಿರುವಂತೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಅಭ್ಯರ್ಥಿಯ ಅನಗತ್ಯ ಹೊಗಳುವ ಲೇಖನಗಳು, ಸಮಾಜದಲ್ಲಿ ನಿರ್ದಿಷ್ಟ ವರ್ಗದವರ ಬೆಂಬಲ ಅವರಿಗಿದೆ ಎಂದು ಪದೇಪದೆ ಶ್ಲಾಘಿಸಿ ಬರೆಯುವುದು, ಅವರು ಕ್ಷೇತ್ರದಲ್ಲಿ ಚುನಾವಣೆ ಗೆದ್ದೇ ಗೆಲ್ಲುತ್ತಾರೆ ಎಂದು ಪ್ರಕಟಿಸುವುದು, ಕಾಸಿಗಾಗಿ ಸುದ್ದಿಗಳು ಕೂಡ ನಿರ್ಬಂಧದ ವ್ಯಾಪ್ತಿಯಲ್ಲಿ ಬರುತ್ತವೆ ಎಂದರು.

ಒಂದೊಮ್ಮೆ ಈ ನಿರ್ಬಂಧ, ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಕಾನೂನಿನ ಅಡಿಯಲ್ಲಿ ಅಪರಾಧವಾಗುತ್ತದೆ ಎಂದವರು ಎಚ್ಚರಿಸಿದರು.

ಜಿಲ್ಲೆಯ ಪ್ರತಿಯೊಬ್ಬ ಮತದಾರರು ಏ.26 ಹಾಗೂ ಮೇ 7ರಂದು ನಡೆಯಲಿರುವ ಚುನಾವಣೆಯಲ್ಲಿ ಸಂವಿಧಾನಿಕವಾಗಿ ಲಭ್ಯವಾಗಿರುವ ತಮ್ಮ ಅಮೂಲ್ಯ ಮತವನ್ನು ತಪ್ಪದೇ ಚಲಾಯಿಸಬೇಕು ಎಂದವರು ಮಾಧ್ಯಮಗಳ ಮೂಲಕ ಜನತೆಗೆ ಮನವಿ ಮಾಡಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಸಿ.ಇ.ಒ. ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ನೋಡೆಲ್ ಅಧಿಕಾರಿ ಡಾ. ಅರುಣ್ ಕೆ., ಜಿಲ್ಲಾ ವಾರ್ತಾಧಿಕಾರಿ ಹಾಗೂ ಮಾಧ್ಯಮ ನೋಡೆಲ್ ಅಧಿಕಾರಿ ಮಂಜುನಾಥ್ ಬಿ., ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಕಾರ್ಯದರ್ಶಿ ನಝೀರ್ ಪೊಲ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.