ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಭನ್ವರ್ ಸಿಂಗ್ ಮೀನಾ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬರ ಪರಿಸ್ಥಿತಿ ಎದುರಿಸಲು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಕೇಸ್ವಾನ್ ಸಭಾಂಗಣದಲ್ಲಿ ಭಾನುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು. ಡಿಸೆಂಬರ್ ನಂತರ ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಈಗಿನಿಂದಲೇ ಸೂಕ್ತ ಕಾರ್ಯ ಯೋಜನೆ ರೂಪಿಸಬೇಕು. ಮುಂದಿನ ಸಭೆ ವೇಳೆಗೆ ಇದಕ್ಕೆ ಆದ್ಯತೆ ನೀಡಿ ಯೋಜನೆ ಸಿದ್ಧಪಡಿಸಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ನೂತನವಾಗಿ ’ಪ್ರಜಾಸೇವಾ ಇಲಾಖೆ’ ಸ್ಥಾಪನೆಯಾಗಿದ್ದು, ಈ ಇಲಾಖೆ ಕಾರ್ಯಚಟುವಟಿಕೆಗಳ ಕುರಿತು ಶೀಘ್ರ ದಲ್ಲೇ ಪರಿಶೀಲನೆ ಆರಂಭಿಸಲಾಗುವುದು. ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯ ಆಪ್ ಹಾಜರಾತಿ ಬಳಸಬೇಕು. ನಮ್ಮ ಜಿಲ್ಲೆಯ ಕರ್ತವ್ಯ ಆಪ್ ಬಳಕೆ ಸದ್ಯ ಶೇ.50 ರಷ್ಟಿದ್ದು, ಎಲ್ಲಾ ಉಪ ಕಚೇರಿಗಳಲ್ಲಿ ಇದನ್ನು ಕಡ್ಡಾಯಗೊಳಿಸಬೇಕು ಎಂದು ತಿಳಿಸಿದರು.


ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳ ಮುಂದೆ ಕಡ್ಡಾಯವಾಗಿ ಮಾಹಿತಿ ಫಲಕ ಅಳವಡಿಸಬೇಕು. ಇದರಲ್ಲಿ ಸಾರ್ವಜನಿಕರಿಗೆ ಲಂಚ ನೀಡದಂತೆ ಜಾಗೃತಿ ಮೂಡಿಸುವ ಬರಹ, ದೂರು ಸಲ್ಲಿಸಬೇಕಾದ ಸಹಾಯವಾಣಿ ಸಂಖ್ಯೆ ಹಾಗೂ ಅಧಿಕಾರಿಗಳು ಕಚೇರಿಯಲ್ಲಿ ಲಭ್ಯವಿರುವ ಸಮಯದ ಮಾಹಿತಿ ಇರಬೇಕು. ಕಚೇರಿಗಳಲ್ಲಿ ರೈತರು ಹಾಗೂ ಸಾರ್ವಜನಿಕರಿಗೆ ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಜನರು ಉದ್ಯೋಗ ಅರಸಿ ಬೇರೆಡೆಗೆ ವಲಸೆ ಹೋಗಬಾರದು. ಇದನ್ನು ತಡೆಯಲು ವಿಬಿ ಜಿ ರಾಮ್ ಜಿ (ನರೇಗಾ) ಯೋಜನೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಬೇಕು. ಕೃಷಿ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸಮನ್ವಯದೊಂದಿಗೆ ರೈತರಿಗೆ ಪರ್ಯಾಯ ಆದಾಯ ತರುವಂತಹ ಕೆಲಸ ಒದಗಿಸಿ, ಅವರನ್ನು ಜಿಲ್ಲೆಯಲ್ಲೇ ಉಳಿಸಿಕೊಳ್ಳುವತ್ತ ಗಮನಹರಿಸಬೇಕು. ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳು ಸಕ್ರಿಯವಾಗಿ ಕೆಲಸ ಮಾಡಬೇಕು. ಬೆಳೆವಿಮೆಗೆ ಸಂಬಂಧಿಸಿದಂತೆ ಇನ್ಶೂರೆನ್ಸ್ ಕಂಪನಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಸಣ್ಣ ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಜಿಲ್ಲೆಯ ಕೆರೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಕೆರೆಗಳ ನೀರಿನ ಮಟ್ಟ ಹಾಗೂ ತಾಂತ್ರಿಕ ಸ್ಥಿತಿಗತಿಗಳ ಬಗ್ಗೆ ನಿಖರವಾದ ಮಾಹಿತಿ ಪಡೆದು, ಕ್ರಾಸ್ ವೆರಿಫೈ ಮಾಡಬೇಕು. ಜಿಲ್ಲೆಯಿಂದ ಸರ್ಕಾರಕ್ಕೆ ಹೋಗುವ ಪ್ರತಿಯೊಂದು ಮಾಹಿತಿಯೂ ಅತ್ಯಂತ ನಿಖರವಾಗಿರಬೇಕು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಶೇ.44ರಷ್ಟು ಮಳೆ ಕೊರತೆ:

ಜಿಲ್ಲೆಯಲ್ಲಿ ಶೇ.44 ರಷ್ಟು ಮುಂಗಾರು ಮಳೆ ಕೊರತೆಯಾಗಿ ಕೃಷಿ ಚಟುವಟಿಕೆಗಳ ಮೇಲೆ ತೀವ್ರ ಹೊಡೆತ ಬಿದ್ದಿದೆ. ಜಿಲ್ಲೆಯ ಒಟ್ಟು ಬಿತ್ತನೆ ಗುರಿಯಲ್ಲಿ ಕೇವಲ 5,647 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಇದು ಕೇವಲ ಶೇ.6 ರಷ್ಟು ಪ್ರಗತಿ ತೋರಿಸುತ್ತದೆ. ಬರ ನಿರ್ವಹಣೆ ಕುರಿತಂತೆ ’ಗ್ರೌಂಡ್ ಟ್ರೂಥಿಂಗ್’ ಬೆಳೆ ಸಮೀಕ್ಷೆ ಕೈಗೊಳ್ಳುವ ಸಂಬಂಧ ಮಾಹಿತಿ ನೀಡಿದರು.

ಸದ್ಯ ತೀವ್ರ ನೀರಿನ ಅಭಾವವಿರುವ 8 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 18 ಗ್ರಾಮಗಳಿಗೆ ಖಾಸಗಿ ಬೋರ್‌ ವೆಲ್‌ಗಳ ಮೂಲಕ ಕುಡಿವ ನೀರನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ಜಾನುವಾರುಗಳಿಗೆ ಮುಂದಿನ 30 ವಾರಗಳವರೆಗೆ ಸಾಕಾಗುವಷ್ಟು ಮೇವಿನ ಲಭ್ಯತೆ ಜಿಲ್ಲೆಯಲ್ಲಿದೆ. ಇದರೊಂದಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಹಿತಿ ನೀಡಲಾಯಿತು. ಜಿಲ್ಲೆಯ ಜಲಾಶಯದಿಂದ ಜನ ಜಾನುವಾರುಗಳಿಗೆ ಕುಡಿವ ನೀರು ಮಾತ್ರ ಒದಗಿಸಲಾಗುವುದು ಎಂದು ಸಾರ್ವಜನಿಕರಿಗೆ ಮಾಹಿತಿ ತಿಳಿಸಲಾಗಿದೆ ಎಂದರು.

ಮುಂಗಾರು ಮಳೆಯಿಂದ ಉಂಟಾಗಬಹುದಾದ ಮಳೆ ಹಾನಿ, ಬೆಳೆ ಹಾನಿ, ಭೂಕುಸಿತ ಹಾಗೂ ಇತರೆ ವಿವರಗಳನ್ನು ಸಭೆಗೆ ಮಾಹಿತಿ ನೀಡಲಾಯಿತು. ವಿಬಿ-ಜಿ ರಾಮ್-ಜಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡು ಹೆಚ್ಚಿನ ಮಾನವ ದಿನಗಳನ್ನು ಸೃಜಿಸುವುದು ಮತ್ತು ಕೂಲಿಗಾಗಿ ಸಾರ್ವಜನಿಕರು ವಲಸೆ ಹೋಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಂಜುಂಡೇ ಗೌಡ, ಉಪವಿಭಾಗಾಧಿಕಾರಿ ನಟೇಶ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ.ತಿರುಮಲೇಶ್, ತೋಟಗಾರಿಕೆ ಉಪ ನಿರ್ದೇಶಕಿ ಮಂಗಳ, ತಾಲೂಕು ತಹಸೀಲ್ದಾರರು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.