ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಎಂಬುದು ಅತ್ಯಂತ ಉಪಯುಕ್ತವಾದ ಉಪಕರಣ. ಜೀವನದಲ್ಲಿ ಒಳ್ಳೆಯ ಸಚ್ಚಾರಿತ್ಯರಾಗಿ ಉತ್ತಮ ಬೆಳವಣಿಗೆ ರೂಢಿಸಿಕೊಳ್ಳಲು ಪಠ್ಯಕ್ಕೆ ಅಗತ್ಯವಾದ ಹಲವಾರು ಸಂಗತಿಗಳು ಮತ್ತು ಒಳ್ಳೆಯ ಉಪನ್ಯಾಸಗಳು ಸಿಗುತ್ತವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಬೆಲ್ಲವನ್ನು ಅತಿಯಾಗಿ ತಿಂದಷ್ಟು ಅಜೀರ್ಣತೆ ಹೆಚ್ಚಾಗುತ್ತದೆ. ಮೊಬೈಲ್ ಎಂಬುದು ಬೆಲ್ಲದಂತಹ ಒಂದು ಉಪಕರಣ. ಅದನ್ನು ಎಷ್ಟು ಬೇಕೋ ಅಷ್ಟು ಮಾತ್ರ ಉಪಯೋಗಿಸಬೇಕು. ಅತಿಯಾಗಿ ಬಳಕೆ ಮಾಡಿದರೆ ಅದರಿಂದ ಉಂಟಾಗುವ ಪರಿಣಾಮಗಳು ವಿಪರೀತ ಎಂದು ಹಿರಿಯ ಸಾಹಿತಿ ನಾ.ಸು.ನಾಗೇಶ ಅಭಿಪ್ರಾಯಪಟ್ಟರು.

ತಾಲೂಕಿನ ಕರಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಾಗಮಂಗಲ ಕನ್ನಡ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸಲು ಮೊಬೈಲ್ ಬಿಡಿ ಪುಸ್ತಕ ಹಿಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮೊಬೈಲ್ ಬಿಡಿ ಎನ್ನುವ ಹಿರಿಯರು ತಾವು ಮೊಬೈಲ್ ಬಳಕೆಯನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಿದ್ದೇವೆ. ಮೊಬೈಲ್ ಬಿಡುವ ಅಗತ್ಯವೇನಿದೆ ಎಂಬುದನ್ನು ಯೋಚಿಸಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಎಂಬುದು ಅತ್ಯಂತ ಉಪಯುಕ್ತವಾದ ಉಪಕರಣ. ಜೀವನದಲ್ಲಿ ಒಳ್ಳೆಯ ಸಚ್ಚಾರಿತ್ಯರಾಗಿ ಉತ್ತಮ ಬೆಳವಣಿಗೆ ರೂಢಿಸಿಕೊಳ್ಳಲು ಪಠ್ಯಕ್ಕೆ ಅಗತ್ಯವಾದ ಹಲವಾರು ಸಂಗತಿಗಳು ಮತ್ತು ಒಳ್ಳೆಯ ಉಪನ್ಯಾಸಗಳು ಸಿಗುತ್ತವೆ. ಅದೇ ರೀತಿ ನಮ್ಮಲ್ಲಿ ದುರಾಸೆಗಳು ಬೆಳೆಯಲು, ಸಮಾಜ ಕಂಟಕರಾಗಲು ಏನೆಲ್ಲಾ ಬೇಕೋ ಅವೆಲ್ಲವನ್ನು ಮೊಬೈಲ್ ಕೊಡುತ್ತದೆ. ಹಾಗಾಗಿ ಬೆಲ್ಲದಂತ ಉಪಕರಣವಾಗಿರುವ ಮೊಬೈಲ್‌ನ್ನು ಒಂದು ತಂತ್ರಜ್ಞಾನವಾಗಿ, ಜ್ಞಾನವಾಗಿ, ಅವಶ್ಯಕ ವಿದ್ಯೆಗಾಗಿ ಮಾತ್ರ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪಠ್ಯ ಕ್ರಮದ ಹೊರತಾಗಿ ಬೇರ್ಯಾವ ಅವಕಾಶಗಳು ಸಾಲುವುದಿಲ್ಲ. ಮಕ್ಕಳ ಮೇಲೆ ಪಠ್ಯದ ಒತ್ತಡ ಅಷ್ಟಿರುತ್ತದೆ. ವಿದ್ಯಾರ್ಥಿ ದಿಸೆಯಲ್ಲಿ ಎಷ್ಟು ಒತ್ತಡವಿರುತ್ತದೆಯೋ ಅವೆಲ್ಲವನ್ನೂ ಬಳಸಿಕೊಂಡರೆ ಶೈಕ್ಷಣಿಕ ಪ್ರಗತಿ ಸಾಧಿಸಲು ಅವಕಾಶಗಳು ಸಿಗುತ್ತವೆ. ವಿದ್ಯಾರ್ಥಿಗಳ ಜೀವನದಲ್ಲಿ ಪ್ರೌಢಶಾಲಾ ಹಂತ ಬಹಳ ಮುಖ್ಯ. ಈ ಹಂತದಲ್ಲಿ ಪಠ್ಯಪುಸ್ತಕಗಳನ್ನು ಪೂರ್ಣವಾಗಿ ಓದಿ ಗ್ರಹಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಎನ್.ಸಿ.ಶಿವಕುಮಾರ್ ಮಾತನಾಡಿದರು. ಕರಡಹಳ್ಳಿ ಗ್ರಾಮದ ಮುಖಂಡ ಕೆ.ಜೆ.ಹರೀಶ್, ಕನ್ನಡ ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಉಮಾ, ಸದಸ್ಯ ಚನ್ನಕೇಶವ, ಪತ್ರಕರ್ತ ಕೆ.ಸೀತಾರಾಮು, ಶಿಕ್ಷಕರಾದ ಅಫ್ಷಾನ್‌ಫಿರ್ದೋಸ್, ಜಾಕಿರ್‌ಪಾಷ, ದೇವಿಕಾ, ಪುಷ್ಪ, ಸಂಗೀತ, ಹರೀಶ್ ಮತ್ತು ವಿದ್ಯಾರ್ಥಿಗಳು ಇದ್ದರು.