ಬೆಳಗಾವಿ-ಮನಗೂರು ಎಕ್ಸ್‌ಪ್ರೆಸ್ ರೈಲು ರದ್ದು; ಕ್ರಿಯಾ ಸಮಿತಿ ಪ್ರತಿಭಟನೆ

| Published : Dec 14 2024, 12:47 AM IST

ಬೆಳಗಾವಿ-ಮನಗೂರು ಎಕ್ಸ್‌ಪ್ರೆಸ್ ರೈಲು ರದ್ದು; ಕ್ರಿಯಾ ಸಮಿತಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಮನಗೂರು ರೈಲು ವಿಶೇಷ ರೈಲಾಗಿ ನಾಲ್ಕು ದಿನ ಮಾತ್ರ ಸಂಚರಿಸದೆ ದಿನನಿತ್ಯದ ಕಾಯಂ ರೈಲಾಗಿ ಸಂಚರಿಸುವಂತೆ ರೈಲ್ವೆ ಇಲಾಖೆ ಆದೇಶ ನೀಡಬೇಕು.

ಬಳ್ಳಾರಿ: ಬೆಳಗಾವಿ- ಮನುಗೂರು ಎಕ್ಸ್‌ಪ್ರೆಸ್‌ ರೈಲನ್ನು ರದ್ದುಪಡಿಸುವ ರೈಲ್ವೆ ಇಲಾಖೆ ನಿರ್ಧಾರವನ್ನು ಖಂಡಿಸಿ ನಗರದ ರೈಲ್ವೆ ನಿಲ್ದಾಣದ ಎದುರು ರೈಲ್ವೆ ಕ್ರಿಯಾ ಸಮಿತಿಯ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಹಿಂದೆ ಸಂಚರಿಸುತ್ತಿದ್ದ ಕೊಲ್ಲಾಪುರ- ಮನಗೂರು ಎಕ್ಸ್‌ಪ್ರೆಸ್‌ ರೈಲು ರೈಲ್ವೆ ಬಜೆಟ್‌ ನಲ್ಲಿ ಮಂಜೂರಾಗಿ ಲೋಕಸಭೆಯಲ್ಲಿ ಅನುಮೋದನೆ ಪಡೆದ ರೈಲಾಗಿದ್ದು ಈ ರೈಲನ್ನು ರದ್ದುಪಡಿಸುವ ಅಧಿಕಾರ ರೈಲ್ವೆ ಇಲಾಖೆಗೆ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಮನಗೂರು ರೈಲು ವಿಶೇಷ ರೈಲಾಗಿ ನಾಲ್ಕು ದಿನ ಮಾತ್ರ ಸಂಚರಿಸದೆ ದಿನನಿತ್ಯದ ಕಾಯಂ ರೈಲಾಗಿ ಸಂಚರಿಸುವಂತೆ ರೈಲ್ವೆ ಇಲಾಖೆ ಆದೇಶ ನೀಡಬೇಕು.

ಬಳ್ಳಾರಿಯಿಂದ ತಿರುಪತಿಗೆ ಸಂಚರಿಸುತ್ತಿದ್ದ ಕದಿರಿದೇವನಪಲ್ಲಿ ರೈಲು ಕಳೆದು ಒಂದು ವರ್ಷದಿಂದ ಗುಂತಕಲ್ ನಿಂದ ಸಂಚರಿಸುತ್ತಿದೆ. ಯಥಾವತ್ತಾಗಿ ಈ ರೈಲು ಬಳ್ಳಾರಿಯಿಂದ ಸಂಚರಿಸುವಂತಾಗಬೇಕು. ಕಳೆದ ಆರು ತಿಂಗಳಿಂದ ನಿಲುಗಡೆ ಆಗಿರುವ ಚೆನ್ನೈ -ಬಳ್ಳಾರಿ- ಶಿವಮೊಗ್ಗ - ಎಕ್ಸ್‌ಪ್ರೆಸ್ ರೈಲನ್ನು ಪುನರ್ ಆರಂಭಿಸಬೇಕು. ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲು ಅಥವಾ ಒಂದೇ ಭಾರತ ರೈಲು ಆರಂಭಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಮಹೇಶ್ವರಸ್ವಾಮಿ ಒತ್ತಾಯಿಸಿದರು.

ರೈಲ್ವೆ ಮಂತ್ರಿಗಳು, ರೈಲ್ವೆ ಬೋರ್ಡ್ ಅಧ್ಯಕ್ಷರು ಹಾಗೂ ನೈರುತ್ಯ ವಲಯದ ಅಧಿಕಾರಿಗಳಿಗೆ ಬರೆದ ಮನವಿಪತ್ರವನ್ನು ಬಳ್ಳಾರಿ ರೈಲ್ವೇ ಸ್ಟೇಷನ್ ವ್ಯವಸ್ಥಾಪಕ ಶಿವಶಂಕರ ರೆಡ್ಡಿ ಅವರಿಗೆ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಮುಖಂಡರು ಸಲ್ಲಿಸಿದರಲ್ಲದೆ, ಮುನುಗೂರು ಹಾಗೂ ಇತರ ರೈಲುಗಳು ಆರಂಭವಾಗದಿದ್ದಲ್ಲಿ ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಬೆಳಗಾವಿ ರೈಲ್ವೆ ನಿಲ್ದಾಣದ ಮುಂದೆ ಸತ್ಯಗ್ರಹ ಹಮ್ಮಿಕೊಳ್ಳುವುದು. ರೈಲ್ವೆ ಇಲಾಖೆ ಈ ಭಾಗದ ಪ್ರಯಾಣಿಕರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದು, ಇದನ್ನು ಸರಿಪಡಿಸಿಕೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಹೋರಾಟ ಸಮಿತಿಯ ವಿ.ಎಸ್.ಪ್ರಭಯ್ಯಸ್ವಾಮಿ, ಎರಿಸ್ವಾಮಿ, ಗೋಪಾಲಕೃಷ್ಣ, ಹೇಮರೆಡ್ಡಿ, ಗಂಗಾವತಿ ವೀರೇಶ್, ಸೋಂತ ಗಿರಿಧರ್, ಸುಮಾರೆಡ್ಡಿ, ಪುಷ್ಪಾ ಚಂದ್ರಶೇಖರ್, ಹೊನ್ನನಗೌಡ ಸೇರಿದಂತೆ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಸದಸ್ಯರು ಹಾಗೂ ನಗರದ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬೆಳಗಾವಿ ಮನುಗೂರು ಎಕ್ಸ್‌ಪ್ರೆಸ್‌ ರೈಲ ನ್ನು ರದ್ದುಪಡಿಸುವ ರೈಲ್ವೆ ಇಲಾಖೆಯ ನಿಲುವು ಖಂಡಿಸಿ ಬಳ್ಳಾರಿಯ ರೈಲ್ವೆ ನಿಲ್ದಾಣದ ಎದುರು ರೈಲ್ವೆ ಕ್ರಿಯಾ ಸಮಿತಿಯ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ, ರೈಲ್ವೆ ಅಧಿಕಾರಿಗೆ ಮನವಿ ಸಲ್ಲಿಸಿದರು.