ಕೆ.ಆರ್‌. ನಗರ ತಾ. ವಿವಿಧೆಡೆ ಆಂಜನೇಯಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆ

| Published : Dec 14 2024, 12:47 AM IST

ಕೆ.ಆರ್‌. ನಗರ ತಾ. ವಿವಿಧೆಡೆ ಆಂಜನೇಯಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಹನುಮ ಜಯಂತಿಯ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡುವುದರ ಜತೆಗೆ ದೇವಾಲಯವನ್ನು ಬಗೆ ಬಗೆಯ ಹೂವುಗಳಿಂದ ಅಲಂಕಾರ

ಕನ್ನಡಪ್ರಭ ವಾರ್ತೆ ಕೆ.ಆರ್‌. ನಗರ

ಹನುಮ ಜಯಂತಿಯ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.

ಪಟ್ಟಣದ ಹೊರ ವಲಯದ ಹಳೆ ಎಡತೊರೆಯ ಕಾವೇರಿ ನದಿ ದಂಡೆಯಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ 15ನೇ ವರ್ಷದ ವಾರ್ಷಿಕೋತ್ಸವ ಮತ್ತು ಹನುಮ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆಯಿಂದಲೆ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಹೋಮ ಹವನ ನಡೆಸಿ ಮಹಾ ಮಂಗಳಾರತಿ ಮಾಡಿ ಭಕ್ತರಿಗೆ ಸಿಹಿ ಮತ್ತು ಪ್ರಸಾದ ವಿತರಿಸಲಾಯಿತು.

ಹನುಮ ಜಯಂತಿಯ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡುವುದರ ಜತೆಗೆ ದೇವಾಲಯವನ್ನು ಬಗೆ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಸಾವಿರಾರು ಭಕ್ತರು ಬೆಳಗ್ಗೆಯಿಂದ ಸಂಜೆವರೆಗೆ ದೇವಾಲಯಕ್ಕೆ ಭೇಟಿ ನೀಡಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು.

ದೇವಾಲಯ ಸಮಿತಿಯ ಪದಾಧಿಕಾರಿಗಳಾದ ರಮೇಶ್, ಗಣೇಶ್, ಕೆ.ಎಸ್. ನಾಗೇಶ್, ಕೆ.ಪಿ. ಚಂದ್ರಶೇಖರ್, ಆರ್. ರಮೇಶ್, ನವೀನ್, ಅಮರ್, ಅರುಣ್, ನಿಂಗಪ್ಪ, ಸಾರ್ವಜನಿಕ ಹನುಮ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಯು. ಕೃಷ್ಣಭಟ್, ಅರ್ಚಕರಾದ ಶ್ರೀಪತಿ, ರಾಮಪ್ರಸಾದ್ ಇದ್ದರು.

ಬಜಾರ್ ರಸ್ತೆಯಲ್ಲಿ- ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಭಜರಂಗಿ ವೃತ್ತದಲ್ಲಿ ಸಾರ್ವಜನಿಕ ಹನುಮ ಜಯಂತಿ ಆಚರಣಾ ಸಮಿತಿ ವತಿಯಿಂದ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನೆ ಮಾಡಲಾಯಿತು.

ಮುಂಜಾನೆ ಹೋಮ ಹವನದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಆನಂತರ ಶ್ರೀರಾಮ ದೇವರ ಪದ ತಳದಲ್ಲಿ ಬೃಹತ್ ಹನುಮ ಮೂರ್ತಿಯನ್ನು ಭಕ್ತರ ಜಯಘೋಷಗಳೊಂದಿಗೆ ಪ್ರತಿಷ್ಠಾಪಿಸಿ ಮಹಾ ಮಂಗಳಾರತಿ ಮಾಡಲಾಯಿತು.

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಸಾರ್ವಜನಿಕ ಹನುಮ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ಯು. ಕೃಷ್ಣಭಟ್, ಖಜಾಂಚಿ ಟಿ.ಎನ್. ಕೃಷ್ಣಮೂರ್ತಿ, ಸಂಚಾಲಕ ಕೆ.ವಿ. ನಂಜುಂಡ, ವ್ಯವಸ್ಥಾಪಕ ಪವನ್ ಶಿವಾಜಿ ಇದ್ದರು.

ಕೆಸ್ತೂರು ಕೊಪ್ಪಲಿನಲ್ಲಿ- ತಾಲೂಕಿನ ಕೆಸ್ತೂರು ಕೊಪ್ಪಲಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಸಾವಿರಾರು ಮಂದಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಪ್ರಸಾದ ವಿತರಿಸಲಾಯಿತು.

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ, ಮೂಡಲಬೀಡು ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಹನುಮ ಜಯಂತಿಯ ಸಡಗರ ಮನೆ ಮಾಡಿತ್ತು.