ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಡೀಸಿಗೆ ದೂರು

| Published : Dec 14 2024, 12:47 AM IST

ಸಾರಾಂಶ

ಗುಂಡ್ಲುಪೇಟೆ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ವರ್ಗಾವಣೆಗೊಂಡು ಮತ್ತೆ ಕೆಎಟಿಯಿಂದ ವರ್ಗಾವಣೆಗೆ ತಡೆ ತಂದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷ, ಸದಸ್ಯರು ಜಿಲ್ಲಾಧಿಕಾರಿಗೆ ಗುರುವಾರ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ ಪ್ರಸಂಗ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ವರ್ಗಾವಣೆಗೊಂಡು ಮತ್ತೆ ಕೆಎಟಿಯಿಂದ ವರ್ಗಾವಣೆಗೆ ತಡೆ ತಂದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷ, ಸದಸ್ಯರು ಜಿಲ್ಲಾಧಿಕಾರಿಗೆ ಗುರುವಾರ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ ಪ್ರಸಂಗ ನಡೆದಿದೆ.

ಜಿಲ್ಲಾಧಿಕಾರಿಯನ್ನು ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಪುರಸಭೆ ಸದಸ್ಯರಾದ ಗೌಡ್ರ ಮಧು, ಶ್ರೀನಿವಾಸ್‌ (ಕಣ್ಣಪ್ಪ), ಪಿ.ಶಶಿಧರ್‌, ರಾಜಗೋಪಾಲ, ಪುರಸಭೆ ಮಾಜಿ ಉಪಾಧ್ಯಕ್ಷ ಕಾರ್ಗಳ್ಳಿ ಸುರೇಶ್‌, ಮಾಜಿ ಸದಸ್ಯ ಬಸವರಾಜು, ಕಾಂಗ್ರೆಸ್‌ ಮುಖಂಡ ಮಂಜುನಾಥ್‌ ಭೇಟಿ ಮಾಡಿ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಭ್ರಷ್ಟಾಚಾರ ಮತ್ತು ದುರಾಡಳಿತ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಅವಧಿಯಲ್ಲಿ ಇ-ಸ್ವತ್ತು ಮಾಡಿಕೊಡಲು ಸಾರ್ವಜನಿಕರಿಂದ ಹಣದ ಬೇಡಿಕೆ ಇಟ್ಟು ದಿನನಿತ್ಯ ಅಲೆದಾಡಿಸಿದ್ದಾರೆ. ವಿಜಯನಾರಾಯಣಸ್ವಾಮಿ ದೇವಸ್ಥಾನದ ಸುತ್ತ 200 ಮೀಟರ್‌ ಯಾವುದೇ ಕಟ್ಟಡ ಹೊಸದಾಗಿ ಕಟ್ಟಬಾರದೆಂದು ನಿಯಮವಿದ್ದರೂ ಲಕ್ಷಾಂತರ ರು. ಹಣದಾಸೆಗಾಗಿ ಪುರಸಭೆಯಿಂದ ಲೈಸನ್ಸ್‌ ನೀಡದೆ ಇ-ಸ್ವತ್ತು ನೀಡಿದ್ದಾರೆ. ಹೊಸ ಲೇ ಔಟ್‌ ಕರಡು ನಕ್ಷೆಗೆ ಲಕ್ಷಾಂತರ ಹಣದ ಬೇಡಿಕೆ ಇಟ್ಟಿದ್ದಾರೆ. ಮೂರು ತಿಂಗಳಿನಿಂದ ಸಾಮಾನ್ಯ ಸಭೆ ನಡಾವಳಿ ಜಿಲ್ಲಾಧಿಕಾರಿಗೆ ಕೊಟ್ಟಿರುವುದಿಲ್ಲ. ಅಲ್ಲದೆ, 5 ಲಕ್ಷ ಬೇಡಿಕೆ ಇಟ್ಟ ಆಡೀಯೋ ಸಹ ವಿದೆ. ಇವರ ಅವಧಿಯಲ್ಲಿ ಒಂದು ದಿನ ಪೌರಕಾರ್ಮಿಕರ ಹಾಜರಾತಿ ಪಡೆದಿರುವುದಿಲ್ಲ. ಪಟ್ಟಣದಲ್ಲಿ ವಾಸವಿರುವುದಿಲ್ಲ. ₹2 ಕೋಟಿ ಅನುದಾನ ಪುರಸಭೆ ನೂತನ ಕಚೇರಿಗೆ ಮಂಜೂರಾಗಿದ್ದರೂ ಕ್ರಮ ವಹಿಸಿಲ್ಲ. ಕಾಮಗಾರಿ ಮುಗಿದಿದ್ದರೂ ಗುತ್ತಿಗೆದಾರರಿಂದ ಹಣಕ್ಕಾಗಿ ಬೇಡಿಕೆ ಇಟ್ಟು ಬಿಲ್‌ ಸಹಿ ಹಾಕುತ್ತಿಲ್ಲ.ಈ ಎಲ್ಲ ಅಂಶಗಳನ್ನು ಕೂಲಂಕುಶವಾಗಿ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಪುರಸಭೆ ಅಧ್ಯಕ್ಷ, ಸದಸ್ಯರು ಮನವಿ ಮಾಡಿ ಆಗ್ರಹಿಸಿದ್ದಾರೆ.13ಜಿಪಿಟಿ7

ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಭ್ರಷ್ಟಾಚಾರ ಮತ್ತು ದುರಾಡಳಿತ ನಡೆಸಿದ್ದಾರೆ ಎಂದು ಜಿಲ್ಲಾಧಿಕಾರಿಗೆ ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಸದಸ್ಯರು ದೂರು ಸಲ್ಲಿಸಿದರು.

ವರ್ಗಾವಣೆಗೆ ಕೆಎಟಿಯಿಂದ

ತಡೆ ತಂದ ಪುರಸಭೆ ಸಿಒ!

ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಅವಧಿಗಿಂತ ಮೊದಲು ವರ್ಗಾವಣೆಯಾಗಿದೆ ಎಂದು ಕೆಎಟಿ ಮೊರೆ ಹೋಗಿದ್ದು ಕೆಎಟಿ ವರ್ಗಾವಣೆಗೆ ತಡೆಯಾಜ್ಞೆ ನೀಡಿದೆ. ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ವರ್ಗಾವಣೆಗೊಂಡ ಸ್ಥಳಕ್ಕೆ ಎಸ್.ಶರವಣ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ವರ್ಗಾವಣೆ ಆದೇಶ ತಡೆ ಹಿಡಿಯಬೇಕು ಎಂದು ಮನವಿಗೆ ಕೆಎಟಿ ಸ್ಪಂದಿಸಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡುವ ಮೂಲಕ ಮತ್ತೆ ಕೆ.ಪಿ.ವಸಂತಕುಮಾರಿ ಇಲ್ಲಿನ ಪುರಸಭೆ ಮುಖ್ಯಾಧಿಕಾರಿಯಾಗಲಿದ್ದಾರೆ. ಇಲ್ಲಿನ ಪುರಸಭೆ ಕಚೇರಿಯಲ್ಲಿ ವರ್ಗಾವಣೆಗೊಂಡ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಕೆಎಟಿಯಿಂದ ತಡೆ ತಂದು ಕೆಲಸಕ್ಕೆ ಹಾಜರಾಗುವ ವೇಳೆಗೆ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಕಚೇರಿಯಲ್ಲಿ ಕುಳಿತಿದ್ದ ಕಾರಣ ಮತ್ತೊಂದು ಕುರ್ಚಿಯಲ್ಲಿ ವರ್ಗಾವಣೆಗೆ ತಡೆ ತಂದ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಕೂರುವ ಮೂಲಕ ಕಚೇರಿಯಲ್ಲಿ ಇಬ್ಬರು ಮೊಬೈಲ್‌ ನೋಡುತ್ತ ಕುಳಿತ ಪ್ರಸಂಗ ನಡೆದಿದೆ.

ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ, ಆ ಜಾಗಕ್ಕೆ ಎಸ್.ಶರವಣರನ್ನು ವರ್ಗಾಯಿಸಿ ಆದೇಶ ಹೊರಬಿದ್ದ ಮರು ದಿನವೇ ಎಸ್.ಶರವಣ ಅಧಿಕಾರ ವಹಿಸಿಕೊಂಡಿದ್ದರು. ವರ್ಗಾವಣೆಗೊಂಡ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಕೆಎಟಿ ಮೊರೆ ಹೋಗಿ ವರ್ಗಾವಣೆಗೆ ತಡೆ ತಂದು ಗುರುವಾರ ಕಚೇರಿಗೆ ಬಂದಾಗ ಪುರಸಭೆ ಮುಖ್ಯಾಧಿಕಾರಿ ಕಚೇರಿಗೆ ಬೀಗ ಬಿದ್ದಿತ್ತು. ಪುರಸಭೆ ಕಚೇರಿಯ ಕಂಪ್ಯೂಟರ್‌ ಆಪರೇಟರ್‌ ಕೊಠಡಿಯಲ್ಲಿ ಕುಳಿತು ಗುರುವಾರ ಸಂಜೆ ಕೆಎಟಿ ಆದೇಶದಂತೆ ವರದಿ ಮಾಡಿಕೊಂಡಿದ್ದರು.

ಪುರಸಭೆ ಕಚೇರಿಯಲ್ಲಿ ಇಬ್ಬರು ಮುಖ್ಯಾಧಿಕಾರಿಗಳು

ಶುಕ್ರವಾರ ಪುರಸಭೆ ಕಚೇರಿಗೆ ಬರುವ ವೇಳೆಗೆ ಇತ್ತೀಚಿಗೆ ವರ್ಗವಾಗಿ ಬಂದ ಎಸ್.ಶರವಣ ಕೆಲ ಪುರಸಭೆ ಸದಸ್ಯರೊಂದಿಗೆ ಕಚೇರಿಯ ಸೀಟಲ್ಲಿ ಕುಳಿತಿದ್ದರು. ಕೆಲ ಸಮಯದ ಬಳಿಕ ಕೆಎಟಿಯಿಂದ ವರ್ಗಾವಣೆಗೆ ತಡೆ ತಂದ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಕಚೇರಿಗೆ ಹೋದಾಗ ಆಶ್ಚರ್ಯ ಕಾದಿತ್ತು. ಕೆಎಟಿಯಿಂದ ತಡೆ ತಂದು, ವರದಿ ಮಾಡಿಕೊಂಡರೂ ಕೆಎಟಿ ಆದೇಶದವಿದ್ದರೂ ಪುರಸಭೆ ಮುಖ್ಯಾಧಿಕಾರಿ ಕುರ್ಚಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಕುಳಿತಿದ್ದ ಕಾರಣ ಮತ್ತೊಂದು ಕುರ್ಚಿಯಲ್ಲಿ ಕುಳಿತಿದ್ದಾರೆ.

ಆದರೆ ಇಬ್ಬರು ಪುರಸಭೆ ಮುಖ್ಯಾಧಿಕಾರಿಗಳು ತಮ್ಮ ತಮ್ಮ ಮೊಬೈಲ್‌ ನೋಡಿಕೊಂಡು ಕುರ್ಚಿಯಲ್ಲಿ ಕುಳಿತಿದ್ದರು. ಪುರಸಭೆ ಕೆಲಸಗಳಿಗೆ ಬಂದ ಹಲವು ಸಾರ್ವಜನಿಕರು ಪುರಸಭೆ ಕಚೇರಿಯಲ್ಲಿ ಇಬ್ಬರು ಮುಖ್ಯಾಧಿಕಾರಿಗಳು ಇರುವುದನ್ನು ಕಂಡು ಪುರಸಭೆಗೆ ಇಂಥಾ ಗತಿ ಬಂತಲ್ಲ ಎಂದು ಗೊಣಗಿಕೊಂಡು ತೆರಳಿದರು. ಪುರಸಭೆ ಮುಖ್ಯಾಧಿಕಾರಿ ಹುದ್ದೆಯಿಂದ ನನಗೆ ವರ್ಗಾವಣೆಯಾಗಿತ್ತು. ಕೆಎಟಿಯಿಂದ ತಡೆ ಸಿಕ್ಕಿದೆ. ಕೆಲಸಕ್ಕೆ ಬಂದಿದ್ದೇನೆ. ಸರ್ಕಾರ ಅಥವಾ ಇಲಾಖೆಯ ಮೇಲಾಧಿಕಾರಿಗಳ ಆದೇಶದಂತೆ ನಡೆದುಕೊಳ್ಳುತ್ತೇನೆ.

ಕೆ.ಪಿ.ವಸಂತಕುಮಾರಿ, ಮುಖ್ಯಾಧಿಕಾರಿ

ಕೆಎಟಿಯಿಂದ ತಡೆ ತಂದಿದ್ದಾರೆ ನಿಜ. ಆದರೆ ಆದೇಶದ ಪ್ರತಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಲ್ಲ. ತಡೆ ತಂದ ಸಿಒ ಅವರು ಜಿಲ್ಲಾಧಿಕಾರಿಗಳಿಂದ ಮೂವ್‌ ಮೆಂಟ್‌ ಆದೇಶ ತಂದಿಲ್ಲ. ಹಾಗಾಗಿ ನಾನು ಮುಂದುವರಿಯುತ್ತೇನೆ.

ಎಸ್. ಶರವಣ, ಮುಖ್ಯಾಧಿಕಾರಿ