ಕನ್ನಡ ಕಥಾ ಸಾಹಿತ್ಯಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅನನ್ಯ: ಡಾ.ಚಿಲ್ಕರಾಗಿ

| Published : Nov 24 2025, 03:00 AM IST

ಕನ್ನಡ ಕಥಾ ಸಾಹಿತ್ಯಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅನನ್ಯ: ಡಾ.ಚಿಲ್ಕರಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ವಡ್ಡಾರಾಧನೆಯೆನ್ನುವ ಕನ್ನಡದ ಮೊದಲ ಗದ್ಯಕೃತಿಯನ್ನು ಕನ್ನಡ ಕಥಾ ಸಾಹಿತ್ಯಕ್ಕೆ ನೀಡಿದ ಹೆಗ್ಗಳಿಕೆ ಅಖಂಡ ಬಳ್ಳಾರಿ ಜಿಲ್ಲೆಗೆ ಸಲ್ಲುತ್ತದೆ

ಬಳ್ಳಾರಿ: ವಡ್ಡಾರಾಧನೆಯೆನ್ನುವ ಕನ್ನಡದ ಮೊದಲ ಗದ್ಯಕೃತಿಯನ್ನು ಕನ್ನಡ ಕಥಾ ಸಾಹಿತ್ಯಕ್ಕೆ ನೀಡಿದ ಹೆಗ್ಗಳಿಕೆ ಅಖಂಡ ಬಳ್ಳಾರಿ ಜಿಲ್ಲೆಗೆ ಸಲ್ಲುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಸಿ.ಬಿ. ಚಿಲ್ಕರಾಗಿ ತಿಳಿಸಿದರು.ತಾಲೂಕಿನ ಮೋಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯ ಚಕೋರ- ಸಾಹಿತ್ಯ ವಿಚಾರ ವೇದಿಕೆಯಿಂದ ಆಯೋಜಿಸಿದ್ದ ‘ಕತೆಗಾರರೊಂದಿಗೆ ಮಾತುಕತೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೈಶಿಷ್ಟ್ಯ ಕತೆಗಳ ಮೂಲಕ ಹೆಸರಾದ ಕುಂ.ವೀರಭದ್ರಪ್ಪ, ವಸುಧೇಂದ್ರ, ಕೇಶವ ಮಳಗಿ ಮೋಕ ಭಾಗದ ಕುಂಬಾರ ಭುವನೇಶ್ ಸೇರಿದಂತೆ ಅನೇಕ ಕತೆಗಾರರನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ಈ ನೆಲ ನೀಡಿದ್ದು, ಭಾಷೆ, ವಸ್ತು, ತಂತ್ರ ಮೊದಲಾದ ನೆಲೆಯಲ್ಲಿ ಇಲ್ಲಿನ ಕತೆಗಾರರ ಕತೆಗಳು ಕನ್ನಡ ಕಥಾ ಸಾಹಿತ್ಯಕ್ಕೆ ಮಹತ್ವದ ಸಂದೇಶವನ್ನು ನೀಡಿವೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕತೆಗಾರ ಮೋಕ ಭುವನೇಶ್ ಮಾತನಾಡಿ, ನಾನು ಮೂಲತಃ ವ್ಯಾಪಾರಿ. ನನ್ನ ಕಿರಾಣಿ ಅಂಗಡಿಗೆ ಬರುವ ಗ್ರಾಹಕರೇ ನನ್ನ ಕತೆಗಳ ನಾಯಕರಾಗಿದ್ದು, ನನ್ನ ಜೀವನಾನುಭವವೇ ಕತೆಗಳ ರಚನೆಗೆ ಸ್ಫೂರ್ತಿಯಾಗಿದೆ. ಸ್ಥಳೀಯ ಭಾಷೆಯ ಮೂಲಕ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ತುಂಬುವುದು ನನ್ನ ಕತೆಗಳ ಆಶಯವಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರೋಜಾ ಪಾಟೀಲ್, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮವು ತುಂಬಾ ವಿಶೇಷವಾದುದು. ಸಾಹಿತ್ಯದಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಸಾಹಿತ್ಯ ಪುಸ್ತಕಗಳನ್ನು ಓದಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕ ಮಾತನಾಡಿದ ಚಕೋರ- ಸಾಹಿತ್ಯ ವಿಚಾರ ವೇದಿಕೆಯ ಬಳ್ಳಾರಿ ಜಿಲ್ಲಾ ಸಂಚಾಲಕ ಡಾ.ತಿಪ್ಪೇರುದ್ರ , ಚಕೋರ ವೇದಿಕೆಯು, ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಕವಿಗೋಷ್ಠಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕನ್ನಡಿಗರ ಸಾಹಿತ್ಯ ವಿಚಾರಗಳ ಅಭಿವ್ಯಕ್ತಿಗೆ ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಜಿ.ಕಲಾವತಿ ಸ್ವಾಗತಿಸಿದರು, ಡಾ. ಸೋಮಶೇಖರ ವಂದಿಸಿದರು. ಚಕೋರ ವೇದಿಕೆಯ ಜಿಲ್ಲಾ ಸಂಚಾಲಕರಾದ ಅಬ್ದುಲ್ ಹೈ ತೋರಣಗಲ್ಲು, ಅಧ್ಯಾಪಕರಾದ ಪ್ರವೀಣಕುಮಾರ್, ಬಸವರಾಜ, ಬೋರಯ್ಯ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕತೆಗಾರ ಕುಂ.ಭುವನೇಶ್ ಅವರು ವಿದ್ಯಾರ್ಥಿಗಳೊಂದಿಗೆ ತಮ್ಮ ಕತೆಗಳ ಸಂವಾದ ನಡೆಸಿದರು.