ಸಾರಾಂಶ
ಮೈಸೂರಿನಲ್ಲಿ ನಡೆದ ಜಂಟಿ ಸಭೆಯಲ್ಲಿ ಒಡಂಬಡಿಕೆಗೆ ಸಹಿ ಹಾಕಿದ ಎರಡು ಜಿಲ್ಲೆಗಳ ಸಂಸ್ಥೆಗಳ ಅಧ್ಯಕ್ಷರು
ಕನ್ನಡಪ್ರಭ ವಾರ್ತೆ ಬಳ್ಳಾರಿವಾಣಿಜ್ಯ ಮತ್ತು ಕೈಗಾರಿಕೆಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಪರಸ್ಪರ ಸಹಕಾರ ನೀಡಲು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಮೈಸೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜೊತೆಯಲ್ಲಿ ಜಂಟಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಹಾಗೂ ಮೈಸೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜ್ ಮೈಸೂರಿನಲ್ಲಿ ನಡೆದ ಜಂಟಿ ಸಭೆಯಲ್ಲಿ ಒಡಂಬಡಿಕೆಗೆ ಸಹಿ ಮಾಡಿದ್ದಾರೆ.ಇದೇ ವೇಳೆ ಮಾತನಾಡಿದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಕೇವಲ ವ್ಯಾಪಾರ–ವಾಣಿಜ್ಯಕ್ಕೆ ಸೀಮಿತವಾಗದೇ ಯುವಶಕ್ತಿಗೆ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾಗಿ ಸ್ಕಿಲ್ ಡೆವಲಪ್‌ಮೆಂಟ್, ದೇಶದ ಬೆನ್ನೆಲುಬಾಗಿರುವ ರೈತರಿಗೆ ಉಚಿತವಾಗಿ ರೈತಣ್ಣನ ಊಟ, ರೈತಣ್ಣನ ಕ್ಲಿನಿಕ್ ಮತ್ತು ರೈತಣ್ಣನ ಹಾಸಿಗೆ ಜನಪ್ರಿಯ ಸೇವಾ ಯೋಜನೆಗಳನ್ನು ನಿರ್ವಹಿಸುತ್ತಿದೆ. ಈ ಯೋಜನೆಗಳಿಗೆ ಸಮಾಜದ ಎಲ್ಲಾ ವರ್ಗಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿಗಾಗಿ ಮೈಸೂರು ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಒಡಂಬಡಿಕೆಗೆ ಸಹಿ ಹಾಕಿರುವುದು, ಸೇವಾ ಕ್ಷೇತ್ರದಲ್ಲೂ ಹೊಸ ಅವಕಾಶಗಳಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸಲಿದೆ ಎಂದರು.
ಮೈಸೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜೊತೆ ಒಡಂಬಡಿಕೆ ಮಾಡಿಕೊಳ್ಳುತ್ತಿರುವುದು ಎರೆಡೂ ಜಿಲ್ಲೆಗಳ ಉದ್ಯಮವಲಯದಲ್ಲಿ ಹೊಸತನಕ್ಕೆ ಅವಕಾಶ ಒದಗಿಸಿದೆ. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ರೈತಣ್ಣನ ಊಟದಿಂದ ಸ್ಫೂರ್ತಿ ಪಡೆದು ₹10ಕ್ಕೆ ನಮ್ಮ ಸಂಸ್ಥೆ ಎಪಿಎಂಸಿಯಲ್ಲಿ ಎಲ್ಲರಿಗೂ ಮಧ್ಯಾಹ್ನದ ಊಟ ನೀಡುವ ಸೇವೆ ಪ್ರಾರಂಭಿಸಿದ್ದೇವೆ. ಬಳ್ಳಾರಿ ಸಂಸ್ಥೆಯು ಅನೇಕ ವಿಷಯಗಳಲ್ಲಿ ನಾಡಿಗೆ ಮಾದರಿಯಾಗಿದೆ ಎಂದರು.ಮೈಸೂರು ಜಿಲ್ಲಾ ಹೋಟಲ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ, ಮೈಸೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ನಾರಾಯಣಗೌಡ ಮಾತನಾಡಿ, ಮೈಸೂರಿನಲ್ಲಿ 34 ಪ್ರವಾಸಿ ಸ್ಥಳಗಳಿದ್ದು, 25ಕ್ಕೂ ಹೆಚ್ಚು ಸ್ಟಾರ್ ಹೋಟೆಲ್‌ಗಳು, 450ಕ್ಕೂ ಹೆಚ್ಚು ಲಾಡ್ಜ್‌ಗಳು, ರೆಸ್ಟೋರೆಂಟುಗಳು ಇದ್ದು, ಪ್ರತ್ಯಕ್ಷ-ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚಿನ ಜನರು ಹೋಟೆಲ್ ಉದ್ಯಮದಲ್ಲಿ ಪಾಲ್ಗೊಂಡಿದ್ದಾರೆ. ಪ್ರವಾಸೋದ್ಯಮವೇ ಜಿಲ್ಲೆಯ ಜೀವಾಳ. ಮೈಸೂರು ಮತ್ತು ಬಳ್ಳಾರಿ ಸಂಸ್ಥೆಗಳ ಒಡಂಬಡಿಕೆಯು ಪರಸ್ಪರರಲ್ಲಿ ಹೊಸ ಅವಕಾಶಗಳ ಸೃಷ್ಟಿಗೆ ಅವಕಾಶ ನೀಡಲಿದೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಕೇವಲ ಕಬ್ಬಿಣ ಮತ್ತು ಮ್ಯಾಂಗನೀಸ್ ಉದ್ಯಮಗಳು ಅಲ್ಲದೇ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ. ಪ್ರವಾಸೋದ್ಯಮದಲ್ಲಿ ವಿಶ್ವ ಗಮನ ಸೆಳೆದಿರುವ ಮೈಸೂರು-ಬಳ್ಳಾರಿ ಜಿಲ್ಲಾ ಉದ್ಯಮಿಗಳಿಗೆ ಒಡಂಬಡಿಕೆಯು ಅಭಿವೃದ್ಧಿಗೆ ಸಾಕಷ್ಟು ಪೂರಕವಾಗಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ತಿಳಿಸಿದರು.ಎರಡು ಸಂಸ್ಥೆಗಳ ವಿವಿಧ ಉಪ ಸಮಿತಿಗಳ ಚೇರ್ಮೆನ್‌ಗಳು ಕೈಗಾರಿಕೆ, ವಾಣಿಜ್ಯ, ಸೇವಾ ವಲಯ ಮತ್ತು ಇನ್ನಿತರೆ ವಿಚಾರಗಳ ಕುರಿತು ವಿಚಾರಗಳನ್ನು ವಿನಿಯಮ ಮಾಡಿಕೊಂಡರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅವ್ವಾರು ಮಂಜುನಾಥ್, ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಸೊಂತ ಗಿರಿಧರ, ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು, ಜಂಟಿ ಕಾರ್ಯದರ್ಶಿ ವಿ. ರಾಮಚಂದ್ರ, ಮೈಸೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಹಾಗೂ ಎರೆಡೂ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಸಭೆಯಲ್ಲಿದ್ದರು.