ಆರೋಗ್ಯದ ಬಗ್ಗೆ ಗಮನಹರಿಸುವ ಜವಾಬ್ದಾರಿ ರೂಢಿಸಿಕೊಳ್ಳಿ

| Published : Mar 17 2025, 12:32 AM IST

ಸಾರಾಂಶ

ಹೆಚ್ಚು ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಲ್ಲಿ ಸಮಾಜಕ್ಕೆ ಮಹಿಳೆಯರಿಂದ ಮತ್ತಷ್ಟು ಉತ್ತಮ ಕೊಡುಗೆ ಸಾಧ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಮಹಿಳೆಯರು ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಗಮನಹರಿಸುವ ಜವಾಬ್ದಾರಿ ರೂಢಿಸಿಕೊಳ್ಳಬೇಕು ಎಂದು ಸುಯೋಗ್‌ ಆಸ್ಪತ್ರೆಯ ಅಧ್ಯಕ್ಷ ಹಾಗೂ ವೈದ್ಯಕೀಯ ಸಾಹಿತಿ ಡಾ.ಎಸ್.ಪಿ. ಯೋಗಣ್ಣ ತಿಳಿಸಿದರು.

ರಾಮಕೃಷ್ಣನಗರದ ಜಯಲಕ್ಷ್ಮೀದೇವಿ ಪಿಯು ಕಾಲೇಜಿನ ಋತ್ವಿಕ್‌ ವೇದಿಕೆಯಲ್ಲಿ ಸಖಿ ಫೌಂಡೇಶನ್‌ ಮತ್ತು ಸೂರ್ಯ ಚಾರಿಟಬಲ್‌ ಟ್ರಸ್ಟ್‌ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಖಿ ಸಂಭ್ರಮ- ಸ್ಪೂರ್ತಿ ಸಖಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹೆಚ್ಚು ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಲ್ಲಿ ಸಮಾಜಕ್ಕೆ ಮಹಿಳೆಯರಿಂದ ಮತ್ತಷ್ಟು ಉತ್ತಮ ಕೊಡುಗೆ ಸಾಧ್ಯ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ಶ್ರೀಗಂಧ ವಲಯ ಪ್ರಮುಖ್‌ ಡಾ.ವಿ. ರಂಗನಾಥ್‌ ಮಾತನಾಡಿ, ಮಹಿಳೆಯು ತಮ್ಮ ಕೆಲಸ ಕಾರ್ಯಗಳ ನಡುವೆ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮತ್ತಷ್ಟು ಕ್ರಿಯಾಶೀಲ ವ್ಯಕ್ತಿತ್ವ ಅವರದಾಗುತ್ತದೆ. ಮಹಿಳೆಯರು ಸಂಯಮಶೀಲರಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಹೇಳಿದರು.

ಟ್ರಸ್ಟ್‌ ಸಂಸ್ಥಾಪನಾ ಕಾರ್ಯದರ್ಶಿ ಗಾಯತ್ರಿ ಸುಂದರೇಶ್‌ ಮಾತನಾಡಿ, ಅನೇಕ ಮಹಿಳೆಯರು ಸಾಧನೆಯ ಮೆಟ್ಟಿಲನ್ನೇರಿದ್ದರು ಹೊರ ಪ್ರಪಂಚಕ್ಕೆ ತಮ್ಮ ಸಾಧನೆಯ ಬಗ್ಗೆ ತೋರಿಸಿಕೊಳ್ಳುವಲ್ಲಿ ಹಿಂಜರಿಯುತ್ತಾರೆ. ಅಂತಹ ಸಾಧಕ ಸಖಿಯರನ್ನು ಗುರುತಿಸಿ ಗೌರವಿಸುವ ಜವಾಬ್ದಾರಿ ನಮ್ಮಂತಹ ಸಂಘ ಸಂಸ್ಥೆಗಳ ಮೇಲಿದೆ ಎಂದರು.

ಪ್ರಶಸ್ತಿ ಪ್ರದಾನ

ಇದೇ ವೇಳೆ ಸಾಮಾಜಿಕ ಸೇವೆ ಹಾಗೂ ಉದ್ಯಮ ಕ್ಷೇತ್ರದ ಅನಿತಾ ರೀಟಾ, ರಂಗಭೂಮಿ ಮತ್ತು ಚೆಂಡೆ ಕಲಾವಿದರಾದ ಅರುಣ್ ಕುಮಾರ್‌ ಹಾಗೂ ಸಾಹಿತಿ ಬಿ.ಆರ್. ನಾಗರತ್ನ ಅವರಿಗೆ ಸ್ಪೂರ್ತಿ ಸಖಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ವೇಳೆ ಮಹಿಳೆಯರಿಗಾಗಿ ಆಯೋಜಿಸಿದ್ದ ದೇಸಿ ಪಾನೀಯ ಸ್ಪರ್ಧೆಯಲ್ಲಿ ಭಾಗ್ಯ ಪ್ರಭಾಕರ್‌, ಸರೋಜಾ ಮತ್ತು ಆಶಾ, ಬಜ್ಜಿ ತಯಾರಿಕಾ ಸ್ಪರ್ಧೆಯಲ್ಲಿ ಉಷಾರಾವ್‌, ವರ್ಷಾ, ವಿಜಯಲಕ್ಷ್ಮಿ, ಗಾದೆಗಳು ಮತ್ತು ಒಗಟುಗಳಿಗೆ ಸಂಬಂಧಿಸಿದ ಕನ್ನಡ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಸುಮಾ, ಲೀಲಾವತಿ, ಆರ್. ಗಾಯತ್ರಿ, ತೇಜಸ್ವಿನಿ ಮತ್ತು ಜಯಮಾಲ, ಕನ್ನಡ ಹಳೆಯ ಚಲನಚಿತ್ರಗೀತಗಾಯನ ಸ್ಪರ್ಧೆಯಲ್ಲಿ ಸುದರ್ಶಿನಿ, ಜಯಮಾಲಾ, ಸುಮಾ ಸೋಮಶೇಖರ್‌ ಬಹುಮಾನ ಪಡೆದರು. ಪನ್ನಗಾ, ಸರೋಜಾ ಗಣೇಶ್‌, ಪ್ರತಿಭಾ ಶ್ರೀನಿವಾಸ್‌ ಅವರು ಗೌರವ ಸ್ಥಾನ ಗಳಿಸಿದರು. ದೋಸ್ತಿ ನಂಬರ್‌ ಸ್ಪರ್ಧೆಯಲ್ಲಿ ಜ್ಯೋತಿ, ಅಕ್ಷತಾ, ರಿಶಿತಾ, ಸವಿತಾ ಅವರು ಉತ್ತಮ ಸ್ಥಾನ ಗಳಿಸಿದರು.

ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಇದ್ದರು.