ಅಪಾಯಕಾರಿ ಸ್ಥಿತಿಯಲ್ಲಿದೆ ಬೇಂದ್ರೆ ಭವನ!

| Published : Jan 21 2025, 12:33 AM IST

ಸಾರಾಂಶ

ಬೇಂದ್ರೆ ಭವನದೊಳಗೆ ಹೋದರೆ ಸಭಾಭವನ, ಬೇಂದ್ರೆ ಹೆಸರಿನ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಕಚೇರಿ, ಬೇಂದ್ರೆ ಗ್ರಂಥಾಲಯ, ಬೇಂದ್ರೆ ದರ್ಶನ-ಪ್ರದರ್ಶನ ಹೊರತುಪಡಿಸಿ ಏನಿಲ್ಲ. ಸುಮಾರು 20 ವರ್ಷಗಳಿಂದ ಈ ಭವನ ಸುಣ್ಣ-ಬಣ್ಣ ಕಂಡಿಲ್ಲ. ಬೇಂದ್ರೆ ದರ್ಶನ-ಪ್ರದರ್ಶನ ಇರುವ ಮೇಲ್ಮಹಡಿ ಮಳೆಗಾಲದಲ್ಲಿ ಸೋರುತ್ತದೆ.

ಬಸವರಾಜ ಹಿರೇಮಠ

ಧಾರವಾಡ:

ಕನ್ನಡ ನಾಡಿನ ಸಾಂಸ್ಕೃತಿಕ ಆಸ್ತಿಯಾಗಿರುವ ಕವಿ ದ.ರಾ. ಬೇಂದ್ರೆ ಹೆಸರಿನಲ್ಲಿ ಸ್ಥಾಪನೆಯಾಗಿರುವ, ಬೇಂದ್ರೆ ಕುರಿತಾದ ಸಾಹಿತ್ಯ, ಸಂಶೋಧನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರಶಸ್ತಿ ಪ್ರದಾನ, ಬೇಂದ್ರೆ ದರ್ಶನ-ಪ್ರದರ್ಶನ ಮತ್ತು ಸಭಾಂಗಣ ಒಳಗೊಂಡಿರುವ ಬೇಂದ್ರೆ ಭವನ ರಾಜ್ಯ ಸರ್ಕಾರದ ತೀವ್ರ ನಿರ್ಲಕ್ಷಕ್ಕೆ ಒಳಗಾಗಿದೆ.

ಸಾಧನಕೇರಿಯಲ್ಲಿರುವ ಬೇಂದ್ರೆ ಅವರ ಮನೆ ಹಾಗೂ ಅದರ ಪಕ್ಕದಲ್ಲಿರುವ ಬೇಂದ್ರೆ ಭವನ ಸಾಹಿತ್ಯಾಸಕ್ತರಿಗೆ ಪುಣ್ಯಭೂಮಿ. ಸ್ವತಃ ಬೇಂದ್ರೆ ಅವರು ಬಾರೋ ಸಾಧನಕೇರಿಗೆ ಎಂದು ತಮ್ಮ ಕಾವ್ಯದ ಮೂಲಕ ಸಾಹಿತ್ಯಾಸಕ್ತರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಹೀಗಾಗಿ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಹಾಗೂ ಬೇಂದ್ರೆ ಅಭಿಮಾನಿಗಳು ಬೇಂದ್ರೆ ಅವರನ್ನು ತಿಳಿಯಲು ನಿತ್ಯ ಬೇಂದ್ರೆ ಭವನಕ್ಕೆ ಬಂದು ಹೋಗುತ್ತಾರೆ. ಆದರೆ, ಭವನದಲ್ಲಿ ಬೇಂದ್ರೆ ಅವರ ಭಾವಚಿತ್ರ ನೋಡಿ ನಸುನಕ್ಕು ಹೋಗಬಹುದೇ ಹೊರತು ಬೇಂದ್ರೆ ಸಾಹಿತ್ಯದ ಆಕರ್ಷಣೆ ಇಲ್ಲಿ ಏನೂ ಇಲ್ಲ.

ಬೇಂದ್ರೆ ಭವನದೊಳಗೆ ಹೋದರೆ ಸಭಾಭವನ, ಬೇಂದ್ರೆ ಹೆಸರಿನ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಕಚೇರಿ, ಬೇಂದ್ರೆ ಗ್ರಂಥಾಲಯ, ಬೇಂದ್ರೆ ದರ್ಶನ-ಪ್ರದರ್ಶನ ಹೊರತುಪಡಿಸಿ ಏನಿಲ್ಲ. ಸುಮಾರು 20 ವರ್ಷಗಳಿಂದ ಈ ಭವನ ಸುಣ್ಣ-ಬಣ್ಣ ಕಂಡಿಲ್ಲ. ಬೇಂದ್ರೆ ದರ್ಶನ-ಪ್ರದರ್ಶನ ಇರುವ ಮೇಲ್ಮಹಡಿ ಮಳೆಗಾಲದಲ್ಲಿ ಸೋರುತ್ತದೆ. ಸುತ್ತಲೂ ತಡೆಗೋಡೆಗಳು ಕಿತ್ತು ಹೋಗಿದ್ದು, ಗೋಡೆಗಳು ಬೇಂದ್ರೆ ಅವರ ಮನೆ ಮೇಲೆ ಬಿದ್ದರೂ ಅಚ್ಚರಿ ಏನಿಲ್ಲ. ಗೋಡೆಯಲ್ಲಿ ಚಿಕ್ಕಪುಟ್ಟ ಗಿಡಗಳು ಬೆಳೆಯುತ್ತಿವೆ. ಒಟ್ಟಾರೆ ನಿರ್ವಹಣೆ ಇಲ್ಲದೇ ಈ ಭವನ ದುಸ್ಥಿತಿಯಲ್ಲಿದೆ.

ವಾರ್ಷಿಕ ₹ 9 ಲಕ್ಷ ಅನುದಾನ ಪಡೆಯುವ ಟ್ರಸ್ಟ್‌ ವಾರ್ಷಿಕ ₹ 1 ಲಕ್ಷ ಮೊತ್ತದ ಪ್ರಶಸ್ತಿ ಮೊತ್ತ ಸೇರಿದಂತೆ ಪ್ರಶಸ್ತಿ ಕಾರ್ಯಕ್ರಮ ಹಾಗೂ ಸಿಬ್ಬಂದಿ ಸಂಬಳಕ್ಕೆ ಈ ಅನುದಾನ ಸಾಕಾಗುತ್ತಿಲ್ಲ. ಭವನದಲ್ಲಿರುವ ಸಭಾಭವನ ಹಾಗೂ ಬೇಂದ್ರೆ ಪುಸ್ತಕಗಳಿಂದ ಬರುವ ಅಲ್ಪ ಮೊತ್ತದ ಹಣದಿಂದ ಟ್ರಸ್ಟ್ ನಡೆಸುತ್ತಿದ್ದು ಭವನದ ನಿರ್ವಹಣೆಯಾಗುತ್ತಿಲ್ಲ. ಇವರ ಸಮಕಾಲೀನ ಕವಿ ಕುವೆಂಪು ಅವರ ಸ್ಮಾರಕ ನಿರ್ಮಾಣದ ಮಾದರಿಯಲ್ಲಿ ಬೇಂದ್ರೆ ಅವರಿಗೂ ಸರ್ಕಾರ ಮಾನ್ಯತೆ ನೀಡಬೇಕಿತ್ತು ಎಂದು ಬೇಂದ್ರೆ ಅಭಿಮಾನಿಗಳು ಸರ್ಕಾರಕ್ಕೆ ಆಗ್ರಹಿಸುತ್ತಲೇ ಹತ್ತಾರು ವರ್ಷಗಳು ಕಳೆದು ಹೋದವು. ರಾಜ್ಯ ಸರ್ಕಾರ ಮಾತ್ರ ಬೇಂದ್ರೆ ನಿರ್ಲಕ್ಷಿಸುತ್ತಲೇ ಬಂದಿದೆ.

ಬೇಂದ್ರೆ ಕುರಿತಾದ ಸಾಹಿತ್ಯ, ಸಂಶೋಧನೆಗೋಸ್ಕರ ಟ್ರಸ್ಟ್‌ ಹಲವು ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಯೋಜಿಸುತ್ತಿದೆ. ಆದರೆ, ವಾರ್ಷಿಕ ₹ 9 ಲಕ್ಷ ಟ್ರಸ್ಟ್ ಕಾರ್ಯಚಟುವಟಿಕೆ ಹಾಗೂ ಬೇಂದ್ರೆ ಭವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೇಂದ್ರೆ ಭವನದ ಅಭಿವೃದ್ಧಿಗೋಸ್ಕರ ₹ 2 ಕೋಟಿ ವೆಚ್ಚದ ಯೋಜನೆ ರೂಪಿಸಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು. ರಾಜ್ಯ ಸರ್ಕಾರದ ಅನುದಾನದ ಕೊರತೆ ಮಧ್ಯೆಯೂ ಟ್ರಸ್ಟ್‌ ಬೇಂದ್ರೆ ಬದುಕು-ಬರಹಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ, ಪ್ರಶಸ್ತಿ ಪ್ರದಾನ, ಸಂಶೋಧನಾ ಕೇಂದ್ರ, ಬೇಂದ್ರೆ ಗ್ರಂಥಾಲಯ, ಬೇಂದ್ರೆ ದರ್ಶನ-ಪ್ರದರ್ಶನ ನಿರ್ವಹಿಸುತ್ತಿದೆ. ಆದರೆ, ಈ ಚಟುವಟಿಕೆಗಳಿಗೆ ಆಧಾರವಾಗಿರುವ ಬೇಂದ್ರೆ ಭವನ ನಿರ್ವಹಣೆ ತೊಂದರೆಯಾಗಿದೆ. ಜ. 31ಕ್ಕೆ ಬೇಂದ್ರೆ ಅವರ ಜನ್ಮದಿನವಿದ್ದು, ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಬೇಂದ್ರೆ ಭವನಕ್ಕೆ ವಾರ್ಷಿಕವಾಗಿ ಶಾಶ್ವತ ಅನುದಾನ ಒದಗಿಸಬೇಕು ಎಂದು ಬೇಂದ್ರೆ ಟ್ರಸ್ಟ್‌ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಹೇಳಿದರು.