ನಗರ ಪ್ರವಾಹ ತಡೆಯಲು ಸಿಎಂ ಸಿದ್ದರಾಮಯ್ಯ ನೀಡಿದ ನಿರ್ದೇಶನ ಜಾರಿಗೆ ಆದೇಶ

| N/A | Published : May 24 2025, 08:38 AM IST

Karnataka Chief Minister Siddaramaiah (File Photo/ANI)
ನಗರ ಪ್ರವಾಹ ತಡೆಯಲು ಸಿಎಂ ಸಿದ್ದರಾಮಯ್ಯ ನೀಡಿದ ನಿರ್ದೇಶನ ಜಾರಿಗೆ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರ ಪ್ರದಕ್ಷಿಣೆ ವೇಳೆ ನೀಡಿದ್ದ ನಿರ್ದೇಶನಗಳ ಅನ್ವಯ ಬೆಂಗಳೂರಿನಲ್ಲಿ ಮತ್ತೆ ಮಳೆ ಹಾನಿ, ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಕಟ್ಟಾಜ್ಞೆ ಮಾಡಿದ್ದಾರೆ.

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರ ಪ್ರದಕ್ಷಿಣೆ ವೇಳೆ ನೀಡಿದ್ದ ನಿರ್ದೇಶನಗಳ ಅನ್ವಯ ಬೆಂಗಳೂರಿನಲ್ಲಿ ಮತ್ತೆ ಮಳೆ ಹಾನಿ, ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಶುಕ್ರವಾರ ಅಂತರ್‌ ಇಲಾಖಾ ಸಮನ್ವಯ ಸಮಿತಿ ಸಭೆ ನಡೆಸಿ ಅಧಿಕಾರಿಗಳಿಗೆ ಕಟ್ಟಾಜ್ಞೆ ಮಾಡಿದ್ದಾರೆ.

ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಸಮಯದಲ್ಲಿ ಉದ್ಭವಿಸುತ್ತಿರುವ ಸಮಸ್ಯೆಗಳ ಪರಿಹರಿಸಲು ವಿವಿಧ ಇಲಾಖೆ/ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸಲು ತಮ್ಮ ಅಧ್ಯಕ್ಷತೆಯಲ್ಲಿ ರಚಿಸಿರುವ ಅಂತರ ಇಲಾಖಾ ಸಮನ್ವಯ ಸಮಿತಿಯ ಸಭೆ ನಡೆಸಿದ ಮುಖ್ಯಕಾರ್ಯದರ್ಶಿ ಅವರು ಕೆಲ ಇಲಾಖಾ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮಕ್ಕೂ ಸೂಚಿಸಿದ್ದಾರೆ.

ಪ್ರಮುಖವಾಗಿ ಒಳಚರಂಡಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದರೂ ಇದುವರೆಗೂ ಕ್ರಮ ಕೈಗೊಳ್ಳದ ಬೆಂಗಳೂರು ಜಲಮಂಡಳಿಯ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಲಾಗಿದೆ. ಮಳೆ ನೀರು ಬಿಡಬ್ಲ್ಯುಎಸ್‌ಎಸ್‌ಬಿಯ ಒಳಚರಂಡಿಗಳಿಗೆ ಸೇರದಂತೆ ಕೂಡಲೇ ಕ್ರಮ ಕೈಗೊಂಡು ವರದಿ ಸಲ್ಲಿಸಲು ಅಭಿಯಂತರಿಗೆ ನಿರ್ದೇಶನ ನೀಡಿದ್ದಾರೆ. ಇನ್ನು ಮುಂದೆ ನಗರದಲ್ಲಿ ಯಾವುದೇ ಇಲಾಖೆಯು ರಸ್ತೆ ಅಗೆದರೆ ಬಿಬಿಎಂಪಿ ವತಿಯಿಂದ ಸಂಬಂಧಪಟ್ಟ ಇಲಾಖೆಗಳಿಂದ ಅನುದಾನ ಪಡೆದು ರಸ್ತೆ ದುರಸ್ತಿ ಕೈಗೊಳ್ಳಲು ಹೊಸ ಸುತ್ತೋಲೆ/ಆದೇಶ ಹೊರಡಿಸಲು ಸೂಚಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಅನೇಕ ಕೆರೆಗಳಿಗೆ ನೀರು ಹರಿಯದೇ ಸಮಸ್ಯೆಯಾಗುತ್ತಿದೆ. ಅಂತಹ ಕೆರೆ ಒತ್ತುವರಿಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಸಮನ್ವಯದಲ್ಲಿ ತೆರವುಗೊಳಿಸಲು ಕ್ರಮ ವಹಿಸುವಂತೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಣ್ಣ ನೀರಾವರಿ ಇಲಾಖೆಯ ಅಭಿಯಂತರರಿಗೆ ಕಟ್ಟಾಜ್ಞೆ ಮಾಡಲಾಗಿದೆ.

ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ

ವಿಪ್ಪತ್ತು ನಿರ್ವಹಣೆ ಕಾಯ್ದೆಯಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಗೆ ಎಲ್ಲಾ ಇಲಾಖೆಗಳು ಸಹಾರ ನೀಡುವ ಮೂಲಕ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಮೂರು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುತಿಸಲಾದ 28 ಕಡೆಗಳಲ್ಲಿ ಪ್ರವಾಹ ಮತ್ತು ನೀರು ತಡೆಯುವ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಲಾಗಿತ್ತು. ಆದರೆ, ಇಲ್ಲಿಯವರೆಗೂ ಕೇವಲ 4 ಕಡೆ ಯೋಜನೆಗಳನ್ನು ರೂಪಿಸಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರಾಧಿಕಾರದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅವರಿಗೆ ಮುಖ್ಯಕಾರ್ಯದರ್ಶಿ ಅವರು ಸಭೆಯಲ್ಲಿ ಸೂಚಿಸಿದರು. ರಸ್ತೆ ಅಗಲೀಕರಣ ಸಂಬಂಧ ಬಿಬಿಎಂಪಿಯು ಅರಣ್ಯ ಇಲಾಖೆಗೆ ಪರವೇಶ ಪೋರ್ಟಲ್‌ನಲ್ಲಿ ಅಗತ್ಯವಿರುವ ಮಾಹಿತಿ ಒದಗಿಸುವಂತೆ ಮತ್ತು ತುರ್ತು ಅನುಮೋದನೆ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಯಿತು.

ಉಳಿದಂತೆ ಪಣತ್ತೂರು ರೈಲ್ವೆ ಅಂಡರ್‌ ಪಾಸ್‌ ಕಾಮಗಾರಿಗೆ ಸಂಬಂಧಿಸಿದಂತೆ ಕೆ-ರೈಡ್‌ ಮತ್ತು ಬಿಬಿಎಂಪಿ ಮುಖ್ಯ ಇಂಜಿನಿಯರ್‌ ಅವರು ಕೂಡಲೇ ಒಳಚರಂಡಿ ತೆಗೆದು ನಿಂತಿರುವ ಕೊಳಚೆ ಮಣ್ಣನ್ನು ತೆಗೆಯಲು ಕ್ರಮ ಕೈಗೊಳ್ಳಬೇಕು. ಜಂಟಿ ಪೊಲೀಸ್‌ ಆಯುಕ್ತರು(ಸಂಚಾರ) ಏ.15ರಂದು ನಗರ ವ್ಯಾಪ್ತಿಯಲ್ಲಿ 647 ರಸ್ತೆಗುಂಡಿಗಳ ಮಾಹಿತಿಯನ್ನು ಬಿಬಿಎಂಪಿಗೆ ನೀಡಿದ್ದು ಅವುಗಳನ್ನು ಏಳು ದಿನಗಳೊಳಗೆ ಕ್ರಮ ವಹಿಸಲು ಪಾಲಿಕೆ ಮುಖ್ಯ ಇಂಜಿನಿಯರ್‌ಗೆ ಸೂಚನೆ. ವೈಂಡ್‌ ಟನಲ್‌ ಜಮಕ್ಷನ್‌ ಅಂಡರ್‌ ಪಾಸ್‌ ಕಾಮಗಾರಿಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್‌ ಆಯುಕ್ತರು ಬಿಬಿಎಂಪಿಗೆ ಕೂಡಲೇ ಅಗತ್ಯ ಅನುಮತಿ ನೀಡಿ ಕಾಮಗಾರಿ ಪೂರ್ಣಗೊಳಿಸಲು ಕ್ರಮಕ್ಕೆ ನಿರ್ದೇಶನ. ಕೆ-ರೈಡ್‌ನ ಆರ್‌ಒಬಿ/ಆರ್‌ಯುಬಿ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಬಿಬಿಎಂಪಿಗೆ ಟಿಡಿಆರ್‌ ನೀಡುವ ಮೂಲಕ ನಡೆಸುವಂತೆ ಸೂಚಿಸಲಾಗಿದೆ. ಕೆ-ರೈಡ್‌ನ ಕಗ್ಗದಾಸಪುರ ರೈಲ್ವೇ ಗೇಟ್‌ ಕಾಮಗಾರಿಗೆ ಸಂಬಂಧಿಸಿದಂತೆ ಮೂಲಸೌಕರ್ಯ ಅಭಿವೃದ್ಧ ಇಲಾಖೆ ಕಾರ್ಯದರ್ಶಿಯವರು ಡಿಆರ್‌ಡಿಒ ಅವರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಬೇಕು. ವಿಶ್ವಬ್ಯಾಂಕ್‌ ಯೋಜನೆಗೆ ಉಸ್ತುವಾರಿ ಸಮಿತಿಯ ಅನುಮತಿಯನ್ನು ಅರಣ್ಯ ಇಲಾಖೆಯಿಂದ ಜೂನ್‌ 3ರೊಳಗೆ ಪಡೆಯಲು ಮುಖ್ಯಕಾರ್ಯದರ್ಶಿ ಅವರು ಸೂಚನೆ ನೀಡಿದ್ದಾರೆ.

 

Read more Articles on