ಸಾರಾಂಶ
ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಶೀಘ್ರದಲ್ಲಿಯೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸಮನ್ಸ್ ಜಾರಿಗೊಳಿಸುವ ಸಾಧ್ಯತೆ ಇದೆ.
ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಶೀಘ್ರದಲ್ಲಿಯೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸಮನ್ಸ್ ಜಾರಿಗೊಳಿಸುವ ಸಾಧ್ಯತೆ ಇದೆ.
ಸಚಿವ ಪರಮೇಶ್ವರ್ ಅವರ ಒಡೆತನ ಶೈಕ್ಷಣಿಕ ಸಂಸ್ಥೆಗಳ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಮೇಲ್ನೋಟಕ್ಕೆ ಅಕ್ರಮ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯ ಇರುವ ಕಾರಣ ಪರಮೇಶ್ವರ್ ಅವರಿಗೆ ಸಮನ್ಸ್ ಜಾರಿಗೊಳಿಸುವ ಸಾಧ್ಯತೆ ಇದೆ.
ತುಮಕೂರಿನ ಎಸ್‌ಎಸ್‌ಐಟಿ ಎಂಜಿನಿಯರಿಂಗ್ ಕಾಲೇಜು, ಹಗ್ಗೆರೆ ಮತ್ತು ಟಿ.ಬೇಗೂರು ಬಳಿ ಇರುವ ಮೆಡಿಕಲ್ ಕಾಲೇಜಿನ ಮೇಲೆ ಕಾರ್ಯಾಚರಣೆ ನಡೆಸಿ ಹಣಕಾಸು ವಹಿವಾಟಿನ ಕುರಿತು ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಆರ್ಥಿಕ ವ್ಯವಹಾರದಲ್ಲಿ ಸಮರ್ಪಕವಾದ ಮಾಹಿತಿ ಇಲ್ಲದಿರುವುದು ಕಂಡುಬಂದಿದ್ದವು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲು ಇ.ಡಿ. ಅಧಿಕಾರಿಗಳು ಮುಂದಾಗಿದ್ದಾರೆ.
ಈ ನಡುವೆ, ಅಕ್ರಮ ಚಿನ್ನ ಸಾಗಣೆ ಆರೋಪದ ಮೇರೆಗೆ ಬಂಧನಕ್ಕೊಳಗಾಗಿರುವ ನಟಿ ರನ್ಯಾರಾವ್ ಜತೆ ನಂಟು ಇರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ದಾಳಿ ವೇಳೆ ಶೈಕ್ಷಣಿಕ ಟ್ರಸ್ಟ್ ಹಣ ಬೇರೆಡೆಗೆ ವರ್ಗಾಯಿಸಿ ರನ್ಯಾರಾವ್ ಕ್ರೆಡಿಟ್ ಕಾರ್ಡ್ ಬಿಲ್‌ಗೆ 40 ಲಕ್ಷ ರು. ಪಾವತಿಸಿರುವುದು ಗೊತ್ತಾಗಿದೆ. ಆದರೆ, ಇದನ್ನು ಖಚಿತಪಡಿಸಲು ಯಾವುದೇ ನಿಖರ ದಾಖಲೆಗಳು ಕಂಡು ಬಂದಿಲ್ಲ. ಹೀಗಾಗಿ ಈ ಬಗ್ಗೆ ದಾಖಲೆಗಳ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಈ ಬಗ್ಗೆಯೂ ವಿಚಾರಣೆ ನಡೆಸಲು ಪರಮೇಶ್ವರ್ ಅವರನ್ನು ಕರೆಯುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ಪರಮೇಶ್ವರ್ ಅವರಿಗೆ ತೆರಿಗೆ ವಿನಾಯಿತಿ ಪಡೆದಿರುವ ಟ್ರಸ್ಟ್‌ಗಳು ನಟಿಯ ಕ್ರೆಡಿಟ್ ಕಾರ್ಡ್ ಬಿಲ್ ಗಳು ಮತ್ತು ಅವರ ಇತರ ಖರ್ಚುಗಳಿಗೆ 40 ಲಕ್ಷ ರು. ಭರಿಸಿರುವುದು ಕಂಡುಬಂದಿದೆ. ಇದು ಕಾನೂನುಬಾಹಿರವೆಂದು ತೋರುತ್ತದೆ, ಟ್ರಸ್ಟ್ ಹಣವನ್ನು ಟ್ರಸ್ಟಿಗಳು ಅಥವಾ ಅವರ ಸ್ನೇಹಿತರ ವೈಯಕ್ತಿಕ ವೆಚ್ಚಗಳಿಗೆ ಬಳಸದೆ ದತ್ತಿ ಸಂಸ್ಥೆಯ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು ಎಂದು ಪರಿಗಣಿಸಲಾಗಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸಮನ್ಸ್ ಜಾರಿ ಮಾಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.