ಸಾರಾಂಶ
ಬೆಂಗಳೂರು : ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ಯಾಗಿ ಮರುನಾಮಕರಣ ಮಾಡಿ ಹಾಗೂ ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿ ರಾಜ್ಯ ಸರ್ಕಾರ ಶುಕ್ರವಾರ ಅಧಿಕೃತ ಆದೇಶ ಮಾಡಿದೆ. ಇದರೊಂದಿಗೆ ಇನ್ನು ಮುಂದೆ ರಾಮನಗರ ಜಿಲ್ಲೆ ಇತಿಹಾಸ ಪುಟ ಸೇರಿದಂತಾಗಿದೆ.
ಕೇಂದ್ರ ಸರ್ಕಾರದ ಗೃಹ ಇಲಾಖೆಯ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕಂದಾಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ 2024ರ ಜುಲೈನಲ್ಲಿ ನಡೆದ ಸಂಪುಟ ಸಭೆಯಲ್ಲೇ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಬಗ್ಗೆ ನಿರ್ಣಯ ಕೈಗೊಂಡು, ಇದಕ್ಕೆ ನಿರಾಕ್ಷೇಪಣಾ ಪತ್ರ ನೀಡಲು ಕೋರಿ ಕೇಂದ್ರ ಸರ್ಕಾರವನ್ನು ಕೋರಿತ್ತು. ಆದರೆ ಕೇಂದ್ರ ಗೃಹ ಇಲಾಖೆಯು ಈ ಪ್ರಸ್ತಾವನೆ ತಿರಸ್ಕರಿಸಿ ಯಥಾಸ್ಥಿತಿ ಉಳಿಸಿಕೊಳ್ಳಲು ಸೂಚಿಸಿತ್ತು. ಆದರೂ, ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಭೂಮಿ, ಭೂ ಕಂದಾಯ, ಜಿಲ್ಲೆಗಳ ಮರುನಾಮಕರಣ ವಿಷಯಗಳು ಸಂವಿಧಾನಾತ್ಮಕವಾಗಿ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು. ಹಾಗಾಗಿ ಕೇಂದ್ರದ ಒಪ್ಪಿಗೆ ಬೇಕಿಲ್ಲ ಎಂದು ಮರು ನಾಮಕರಣಕ್ಕೆ ನಿರ್ಣಯ ಕೈಗೊಳ್ಳಲಾಗಿತ್ತು.