ರಾಮನಗರ ಪೊಲೀಸರಿಂದ 19 ಲಕ್ಷ ಮೌಲ್ಯದ ಮಾದಕ ವಸ್ತು ವಶ

| Published : May 22 2025, 01:00 AM IST

ಸಾರಾಂಶ

ಪೊಲೀಸರು ಕಾರ್ಯಾಚರಣೆ ನಡೆಸಿ ಗೋವಿಂದರಾಜು ಮತ್ತು ದಿಲೀಪ್ ನನ್ನು ವಶಕ್ಕೆ ಪಡೆದು ಶೋಧ ನಡೆಸಿದಾಗ ಸುಮಾರು 4 ಲಕ್ಷ 26 ಸಾವಿರ ರು. ಮೌಲ್ಯದ 4 ಕೆಜಿ 260 ಗ್ರಾಂ ತೂಕದ ಮಾದಕ ವಸ್ತುವನ್ನು ವಶ ಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಕೋಡಿಹಳ್ಳಿ ಠಾಣೆ ಪೊಲೀಸರು 19 ಲಕ್ಷ ರು. ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಗೋವಿಂದರಾಜು ಹಾಗೂ ಕನಕಪುರ ತಾಲೂಕು ಕೋಡಿಹಳ್ಳಿ ಹೋಬಳಿ ತಿಮ್ಮನದೊಡ್ಡಿ ಗ್ರಾಮದ ದಿಲೀಪ್, ನಾಗರಾಜು ಬಂಧಿತರು.

ತಮಿಳುನಾಡು ಭಾಗದಿಂದ ಮಾದಕ ವಸ್ತುಗಳನ್ನು ತಂದು ಹುಣಸನಹಳ್ಳಿ ಮತ್ತು ತಿಮ್ಮನದೊಡ್ಡಿ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಕನಕಪುರ ಗ್ರಾಮಾಂತರ ವೃತ್ತ ಹಾಗೂ ಕೋಡಿಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸಾರ್ವಜನಿಕರಿಂದ ದೂರು ಬಂದಿದೆ.

ಈ ದೂರನ್ನು ಆಧರಿಸಿ ಪುಟ್ಟದಾಸುದೊಡ್ಡಿ ಗ್ರಾಮದ ಬಳಿಯಿರುವ ಶ್ರೀ ಹುಲಿನಾಗಣ್ಣ ಸ್ವಾಮಿ ದೇವಸ್ಥಾನ ಬಳಿ ತೆರಳಿ ಪೊಲೀಸರು ನೋಡಿದಾಗ ಇಬ್ಬರು ಮಾದಕ ವಸ್ತುವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಖಚಿತಗೊಂಡಿದೆ.ಪೊಲೀಸರು ಕಾರ್ಯಾಚರಣೆ ನಡೆಸಿ ಗೋವಿಂದರಾಜು ಮತ್ತು ದಿಲೀಪ್ ನನ್ನು ವಶಕ್ಕೆ ಪಡೆದು ಶೋಧ ನಡೆಸಿದಾಗ ಸುಮಾರು 4 ಲಕ್ಷ 26 ಸಾವಿರ ರು. ಮೌಲ್ಯದ 4 ಕೆಜಿ 260 ಗ್ರಾಂ ತೂಕದ ಮಾದಕ ವಸ್ತುವನ್ನು ವಶ ಪಡಿಸಿಕೊಂಡಿದ್ದಾರೆ. ಗೋವಿಂದರಾಜು ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದರೆ, ದಿಲೀಪ್ ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಅಭಿರಕ್ಷೆಗೆ ಪಡೆದು ನಂತರ ವಿಚಾರಣೆ ಮುಂದುವರೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ , ಚನ್ನಪಟ್ಟಣ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರಿ ಹಾಗೂ ಕನಕಪುರ ವೃತ್ತದ ವೃತ್ತ ನಿರೀಕ್ಷಕ ಎಸ್.ವಿಕಾಶ್ ರವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ಕೈಗೊಂಡ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಕುಮಾರ್ ರವರು ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದರು.ಇಬ್ಬರು ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಮತ್ತೊಬ್ಬ ಆರೋಪಿ ನಾಗರಾಜುನನ್ನು ದಸ್ತಗಿರಿ ಮಾಡಿ ಆತ ಮಾರಾಟ ಮಾಡಲು ಸಂಗ್ರಹಿಸಿದ್ದ ಸುಮಾರು 14 ಕೆಜಿ 894 ಗ್ರಾಂ ತೂಕದ ವಿವಿಧ ಮಾದರಿ ಮಾದಕ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. ಒಟ್ಟಾರೆ ಪೊಲೀಸರು 19 ಲಕ್ಷ ರುಪಾಯಿ ಮೌಲ್ಯದ 18ಕೆಜಿ 704 ಗ್ರಾಂ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಂತಾಗಿದೆ. ಇದರಲ್ಲಿ 60 ಸಾವಿರ ರು. ಮೌಲ್ಯದ 05 ಗ್ರಾಂ ತೂಕದ 06 ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಅಥವಾ ecstasy ಪಿಲ್ಸ್ ಚರಸ್ ಕೂಡ ಸೇರಿದೆ.ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಹಾಗೂ ಗಾಂಜಾ ಸೊಪ್ಪು ಮತ್ತು ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಅಥವಾ ecstasy ಪಿಲ್ಸ್ ಚರಸ್ ಅನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ್ದ ತನಿಖಾಧಿಕಾರಿ ವೃತ್ತ ನಿರೀಕ್ಷಕ ವಿಕಾಸ್ , ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಕುಮಾರ್, ಸಿಬ್ಬಂದಿಯವರಾದ ಧನಂಜಯ, ಕೈಲಾಸ, ಕುಮಾರ್ , ಗಿರೀಶ್, ಅರುಣ್ ಕುಮಾರ್, ರಾಜೇಶ್, ಟಿ.ಎನ್. ಉಪೇಂದ್ರ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.ಈ ಸಂಬಂಧ ಕೋಡಿಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.-------- 21ಕೆಆರ್ ಎಂಎನ್ 1,2,3,4.ಜೆಪಿಜಿ1.ಕನಕಪುರ ಗ್ರಾಮಾಂತರ ವೃತ್ತ ಹಾಗೂ ಕೋಡಿಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶ ಪಡಿಸಿಕೊಂಡಿರುವ ಮಾದಕ ವಸ್ತುಗಳು

2,3,4.ಬಂಧಿತ ಆರೋಪಿಗಳು