ಸಾರಾಂಶ
ಬೆಂಗಳೂರಿನಲ್ಲಿ ನನ್ನ ಮನೆ ಹಾಗೂ ಚಲನಚಿತ್ರ ನಟ ದರ್ಶನ್ ಅವರ ಮನೆ ಸಮೀಪದಲ್ಲಿಯೇ ಇದೆ. ಈ ಹಿಂದೆ ದರ್ಶನ್ ಅವರ ಜನ್ಮದಿನಾಚರಣೆ ವೇಳೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿದ್ದರು.
ಗದಗ : ಬೆಂಗಳೂರಿನಲ್ಲಿ ನನ್ನ ಮನೆ ಹಾಗೂ ಚಲನಚಿತ್ರ ನಟ ದರ್ಶನ್ ಅವರ ಮನೆ ಸಮೀಪದಲ್ಲಿಯೇ ಇದೆ. ಈ ಹಿಂದೆ ದರ್ಶನ್ ಅವರ ಜನ್ಮದಿನಾಚರಣೆ ವೇಳೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿದ್ದರು. ಅವರು ಸಿಡಿಸಿದ ಪಟಾಕಿ ಶಬ್ದದಿಂದಾಗಿ ನನ್ನ ಶ್ರವಣಶಕ್ತಿಯೇ ಹೋಗಿದೆ ಎಂದು ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ತೋಂಟದಾರ್ಯ ಮಠದಲ್ಲಿ ಸೋಮವಾರ ನಡೆದ ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೋತ್ಸವದಲ್ಲಿ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿರುವ ನಮ್ಮ ಮನೆಯ ಪಕ್ಕದಲ್ಲಿ ಚಲನಚಿತ್ರ ನಟ ದರ್ಶನ್ ಅವರ ಮನೆಯೂ ಇದೆ. ಆ ಪುಣ್ಯಾತ್ಮನ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಮನೆ ಮುಂದೆ ಸಾವಿರಾರು ಜನರು ಸೇರುತ್ತಾರೆ. ಪಟಾಕಿ ಸಿಡಿಸಿ, ಸಂಭ್ರಮದಿಂದ ಅವರ ಜನ್ಮ ದಿನಾಚರಣೆ ಆಚರಿಸುತ್ತಾರೆ.
ಜನ್ಮದಿನ ಸಂಭ್ರಮಾಚರಣೆಗೆ ಅವರ ಅಭಿಮಾನಿಗಳು ಸಿಡಿಸಿದ ಸಿಡಿಮದ್ದಿನಿಂದಾಗಿ ನನ್ನ ಶ್ರವಣಶಕ್ತಿಯೇ ಹೋಗಿದೆ. ಇದರಿಂದಾಗಿ ನೀವು ಏನು ಹೇಳುತ್ತೀರೋ ಅದನ್ನು ಕೇಳಿಸಿಕೊಳ್ಳುವ ಭಾಗ್ಯವನ್ನೇ ಕಳೆದುಕೊಂಡಿದ್ದೇನೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.