ಸಾರಾಂಶ
ಸೂಕ್ತ ಮೀಟರಿಂಗ್ ವ್ಯವಸ್ಥೆ ಹಾಗೂ ಹಣ ಪಾವತಿ ಮಾಡದ ಎಸ್ಕಾಂಗಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.
ಬೆಂಗಳೂರು : ಕಟ್ಟಡಗಳ ಮೇಲ್ಛಾವಣಿ ಮೇಲೆ ಅಳವಡಿಸುವ ‘ಸೋಲಾರ್ ರೂಫ್ ಟಾಪ್ ಫೋಟೋವೋಲ್ಟಿಕ್ ವ್ಯವಸ್ಥೆಗಳಿಂದ’ (ಎಸ್‌ಆರ್‌ಟಿಪಿವಿ) ಗ್ರಿಡ್‌ಗೆ ವಿದ್ಯುತ್ ಪಡೆಯಲು ಸೂಕ್ತ ಮೀಟರಿಂಗ್ ವ್ಯವಸ್ಥೆ ಹಾಗೂ ಹಣ ಪಾವತಿ ಮಾಡದ ಎಸ್ಕಾಂಗಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.
ಅಲ್ಲದೆ, ಎಲ್ಲಾ ಎಸ್ಕಾಂಗಳು ತಮ್ಮ ಜತೆ ವಿದ್ಯುತ್ ಖರೀದಿ ಒಪ್ಪಂದ (ಪಿಪಿಎ) ಮಾಡಿಕೊಂಡು ಕಟ್ಟಡಗಳ ಮೇಲ್ಛಾವಣಿ ಮೇಲೆ ಅಳವಡಿಸಿರುವ ‘ಎಸ್‌ಆರ್‌ಟಿಪಿವಿ’ ವ್ಯವಸ್ಥೆಗಳಿಗೆ ಗ್ರಾಸ್ ಮೀಟರಿಂಗ್ ವ್ಯವಸ್ಥೆ ಮಾಡಬೇಕು. ಜತೆಗೆ ಗ್ರಿಡ್‌ಗೆ ಪಡೆದ ವಿದ್ಯುತ್‌ಗೆ 30 ದಿನದಲ್ಲಿ ಹಣ ಪಾವತಿಸಬೇಕು. ಇಲ್ಲದಿದ್ದರೆ ದಂಡದ ಜತೆಗೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಕೆಇಆರ್‌ಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ತನ್ಮೂಲಕ ಗ್ರಾಹಕರು ವಿದ್ಯುತ್ ಬಿಲ್ ಪಾವತಿ ವಿಳಂಬ ಮಾಡಿದರೆ ದಂಡ ವಿಧಿಸುತ್ತಿದ್ದ ಎಸ್ಕಾಂಗಳಿಗೆ ಕೆಇಆರ್‌ಸಿಯು ಉಲ್ಟಾ ದಂಡ ಪ್ರಯೋಗ ಮಾಡಿದೆ. ಕಟ್ಟಡಗಳ ಮೇಲ್ಛಾವಣಿ ಮೇಲೆ ಅಳವಡಿಸಿರುವ ಸೋಲಾರ್ ವ್ಯವಸ್ಥೆಯಿಂದ ಗ್ರಿಡ್‌ಗೆ ಪಡೆಯುವ ವಿದ್ಯುತ್‌ನ ಹಣವನ್ನು 30 ದಿನದಲ್ಲಿ ಪಾವತಿಸಬೇಕು. ಇಲ್ಲದಿದ್ದರೆ ದಂಡ ಪಾವತಿಸಬೇಕು ಎಂದು ಸ್ಪಷ್ಟಪಡಿಸಿದೆ.
ಏನಿದು ಸಮಸ್ಯೆ?:
ಇಂಧನ ಇಲಾಖೆಯು ಕೆಇಆರ್‌ಸಿಯ 2016 ನಿಯಮಗಳ ಅಡಿ ವಸತಿ, ವಾಣಿಜ್ಯ, ಕಾರ್ಖಾನೆ ಮತ್ತಿತರ ಕಟ್ಟಡಗಳ ಮೇಲ್ಛಾವಣಿ ಮೇಲೆ ಎಸ್‌ಆರ್‌ಟಿಪಿವಿ ಅಳವಡಿಸಿ ಗ್ರಿಡ್‌ಗೆ ವಿದ್ಯುತ್ ಪೂರೈಸಲು ಅವಕಾಶ ಮಾಡಿಕೊಟ್ಟಿತ್ತು.
2022 ಜು.18ರಂದು ಕೆಇಆರ್‌ಸಿಯು, ಎಸ್ಆರ್‌ಟಿಪಿವಿಗಳಿಂದ ಗ್ರಿಡ್‌ಗೆ ಪೂರೈಕೆ ಮಾಡುವ ವಿದ್ಯುತ್‌ಗೆ ನೆಟ್ ಮೀಟರಿಂಗ್ ಹಾಗೂ ಗ್ರಾಸ್ ಮೀಟರಿಂಗ್ ವ್ಯವಸ್ಥೆ ಮಾಡಬೇಕು. ನೆಟ್ ಮೀಟರಿಂಗ್ ಅಡಿ ಎಸ್‌ಆರ್‌ಟಿಪಿವಿ ವ್ಯವಸ್ಥೆ ಮಾಡಿಕೊಂಡಿರುವ ವ್ಯಕ್ತಿ ತಾನು ವಿದ್ಯುತ್ ಬಳಕೆ ಮಾಡಿಕೊಂಡು ಉಳಿದ ವಿದ್ಯುತ್‌ನ್ನು ಗ್ರಿಡ್‌ಗೆ ಪೂರೈಸಬಹುದು. ಇನ್ನು ಗ್ರಾಸ್ ಮೀಟರಿಂಗ್ ಅಡಿ ಉತ್ಪಾದನೆಯಾಗುವ ಪೂರ್ತಿ ವಿದ್ಯುತ್‌ನ್ನು ಗ್ರಿಡ್‌ಗೆ ಪೂರೈಸಬೇಕು. ನೇರವಾಗಿ ಸ್ವಂತಕ್ಕೆ ಬಳಸಿಕೊಳ್ಳಲು ಅವಕಾಶವಿರುವುದಿಲ್ಲ. ಈ ಮೀಟರಿಂಗ್ ವ್ಯವಸ್ಥೆ ಬದಲಿಸಿಕೊಳ್ಳಲು ಸಹ ಅವಕಾಶ ನೀಡಬೇಕು ಎಂದು ಎಸ್ಕಾಂಗಳಿಗೆ ಆದೇಶಿಸಿತ್ತು.
ಕೆಇಆರ್‌ಸಿ ಆದೇಶ ಪಾಲಿಸದ ಎಸ್ಕಾಂಗಳು:
ಆದರೆ 2023ರ ಜೂ.23 ರಂದು ಬೆಸ್ಕಾಂ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಕೆಇಆರ್‌ಸಿ ಆದೇಶ ಉಲ್ಲಂಘನೆ ಮಾಡಲಾಗಿದೆ ಎಂದು ಕೆಇಆರ್‌ಸಿ ಮುಂದೆ ದೂರು ದಾಖಲಾಗಿತ್ತು.
ಬೆಸ್ಕಾಂ ನೆಟ್ ಮೀಟರಿಂಗ್‌ನಿಂದ ಗ್ರಾಸ್ ಮೀಟರಿಂಗ್‌ಗೆ ಬಿಲ್ಲಿಂಗ್ ಮಾರ್ಪಾಡು ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತಿಲ್ಲ. ಮೀಟರಿಂಗ್ ವ್ಯವಸ್ಥೆ ಹಾಗೂ ಹಣ ಪಾವತಿಯಲ್ಲಿ ಸಮಸ್ಯೆ ಸೃಷ್ಟಿಸಲಾಗುತ್ತಿದೆ ಎಂದು ದೂರುದಾರರು ತಿಳಿಸಿದ್ದರು. ಈ ವೇಳೆ ಪರಿಶೀಲಿಸಿದಾಗ ಎಲ್ಲಾ ಎಸ್ಕಾಂಗಳು ಕೆಇಆರ್‌ಸಿ ಆದೇಶ ಉಲ್ಲಂಘನೆ ಮಾಡುತ್ತಿರುವುದು ಸ್ಪಷ್ಟಗೊಂಡಿದೆ.
ಹೀಗಾಗಿ ಹೊಸದಾಗಿ ಆದೇಶ ಹೊರಡಿಸಿರುವ ಕೆಇಆರ್‌ಸಿ, ಎಸ್‌ಆರ್‌ಟಿಪಿವಿ ಗ್ರಾಹಕರು ನೆಟ್ ಮೀಟರಿಂಗ್‌ನಿಂದ ಗ್ರಾಸ್ ಮೀಟರಿಂಗ್‌ಗೆ ಬದಲಾವಣೆ ಬಯಸಿದರೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಇದಕ್ಕಾಗಿ ಸಪ್ಲಿಮೆಂಟಲ್ ಪವರ್ ಪರ್ಚೇಸ್ ಅಗ್ರಿಮೆಂಟ್ (ಎಸ್ಪಿಪಿಎ) ಮಾಡಬೇಕು. ಗ್ರಾಹಕರು ಗ್ರಿಡ್‌ಗೆ ಪೂರೈಸಿದ ವಿದ್ಯುತ್‌ಗೆ ಪ್ರತಿ ತಿಂಗಳು ಮೀಟರ್ ರೀಡಿಂಗ್ ಮಾಡಿ ಬಿಲ್ ನೀಡಬೇಕು. ಇದಕ್ಕಾಗಿ ಮೀಟರಿಂಗ್, ವೈರಿಂಗ್ ಎಲ್ಲಾ ವ್ಯವಸ್ಥೆ ಮಾಡಿಕೊಡಬೇಕು.
30 ದಿನಗಳೊಳಗೆ ಗ್ರಿಡ್‌ಗೆ ಪೂರೈಸಿದ ವಿದ್ಯುತ್‌ನ ಬಿಲ್‌ನ್ನು ಎಸ್ಕಾಂಗಳು ಪಾವತಿಸಬೇಕು. ಎಸ್ಕಾಂಗಳು ಹಣ ಪಾವತಿ ವಿಳಂಬ ಮಾಡಿದರೆ ನಿಯಮಾನುಸಾರ ಬಡ್ಡಿ ಸಹಿತ ದಂಡ ಪಾವತಿಸಬೇಕು ಎಂದು ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ಈ ಆದೇಶ ಅನುಷ್ಠಾನದಲ್ಲಿ ಯಾವುದೇ ಲೋಪಗಳು ಉಂಟಾದರೆ ಆಯೋಗವು ವಿದ್ಯುತ್ ಕಾಯ್ದೆ-2003ರ ನಿಯಮಗಳ ಅಡಿ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದೆ.
ಏನಿದು ಎಸ್‌ಆರ್‌ಟಿಪಿವಿ ವ್ಯವಸ್ಥೆ?
ರಾಜ್ಯ ಸರ್ಕಾರವು ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022-27ರ ಅಡಿ 2022ರಲ್ಲಿ ಎಸ್ಕಾಂಗಳಿಗೆ ತನ್ನ ಎಲ್ಲಾ ಗ್ರಾಹಕರಿಗೆ ವಸತಿ, ವಾಣಿಜ್ಯ, ಕೈಗಾರಿಕಾ, ಶೈಕ್ಷಣಿಕ ಸಂಸ್ಥೆಗಳು ಇತ್ಯಾದಿಗಳಿಗೆ ಗ್ರಿಡ್ ಸಂಪರ್ಕಿತ ಮೇಲ್ಛಾವಣಿ ಸೌರ ಘಟಕ ಸ್ಥಾಪನೆಗಾಗಿ ಎಸ್‌ಆರ್‌ಟಿಪಿವಿ ವ್ಯವಸ್ಥೆಯಡಿ ಅವಕಾಶ ಕಲ್ಪಿಸಿದೆ. ಇದಕ್ಕೆ ಕೆಇಆರ್‌ಸಿ ಕಾಲಕಾಲಕ್ಕೆ ನಿಗದಿಪಡಿಸಿದ ಶುಲ್ಕಗಳ ಪ್ರಕಾರ 25 ವರ್ಷಗಳ ಅವಧಿಗೆ ವಿದ್ಯುತ್ ಖರೀದಿ ಒಪ್ಪಂದವನ್ನು ಮಾಡಿಕೊಂಡು ಘಟಕ ಅಳವಡಿಸಿಕೊಳ್ಳಬಹುದು.