ಮೈಸೂರಿನ ಮಸಾಜ್ ಸಲೂನ್‌ವೊಂದರ ಮಹಿಳಾ ಸಿಬ್ಬಂದಿಯ ಘನತೆಗೆ ಧಕ್ಕೆ ತಂದ ಆರೋಪ ಸಂಬಂಧ ನಟರಾದ ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್‌ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು : ಮೈಸೂರಿನ ಮಸಾಜ್ ಸಲೂನ್‌ವೊಂದರ ಮಹಿಳಾ ಸಿಬ್ಬಂದಿಯ ಘನತೆಗೆ ಧಕ್ಕೆ ತಂದ ಆರೋಪ ಸಂಬಂಧ ನಟರಾದ ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್‌ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಮೈಸೂರಿನ ಸರಸ್ವತಿಪುರಂ ಠಾಣಾ ಪೊಲೀಸರು 2017ರಲ್ಲಿ ದಾಖಲಿಸಿರುವ ಎಫ್‌ಐಆರ್‌ ಹಾಗೂ ಅದಕ್ಕೆ ಸಂಬಂಧಿಸಿದ 3ನೇ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್‌ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಸಾಧುಕೋಕಿಲ ಮತ್ತು ಮಂಡ್ಯ ರಮೇಶ್‌ ಅವರು 2019ರಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ನ್ಯಾಯಪೀಠ ಬುಧವಾರ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಪ್ರಕರಣವೇನು?:

ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಗುಮಾನಿ ಮೇರೆಗೆ 2017ರ ಡಿ.20ರಂದು ಮೈಸೂರಿನ ಸ್ವಾಮಿ ಆರ್ಕೆಡ್ ಕಟ್ಟಡದಲ್ಲಿದ್ದ ಲೈಕ್ ಟ್ರೆಂಡ್ ಫ್ಯಾಮಿಲಿ ಸಲೂನ್ ಮೇಲೆ ಸರಸ್ವತಿಪುರಂ ಠಾಣಾ ಪೊಲೀಸರು ದಾಳಿ ನಡೆಸಿದ್ದರು. ಆ ವೇಳೆ ಸಲೂನ್‌ನಲ್ಲಿ ಮಹಿಳಾ ಸಿಬ್ಬಂದಿ, ಸಲೂನ್ ಮಾಲೀಕ ರಾಜೇಶ್ ಇದ್ದರು.

ವಿಚಾರಣೆ ವೇಳೆ ‘ಸಲೂನ್‌ಗೆ ಭೇಟಿ ನೀಡುವ ಗ್ರಾಹಕರ ದೇಹದ ಎಲ್ಲಾ ಭಾಗಗಳಿಗೆ ಮಸಾಜ್ ಮಾಡುವಂತೆ ನನಗೆ ಮಾಲೀಕ ಹೇಳುತ್ತಿದ್ದರು. ನಟ ಸಾಧುಕೋಕಿಲ, ಮಂಡ್ಯ ರಮೇಶ್‌ ಸಹ ಸಲೂನ್‌ಗೆ ಬರುತ್ತಿದ್ದರು. ಅವರ ದೇಹದ ಎಲ್ಲಾ ಭಾಗಗಳು ಹಾಗೂ ಗುಪ್ತಾಂಗಕ್ಕೂ ನಾನು ಮಸಾಜ್ ಮಾಡಿದ್ದೆ’ ಎಂದು ಮಹಿಳಾ ಸಿಬ್ಬಂದಿ ಹೇಳಿದ್ದರು. ಇದನ್ನಾಧರಿಸಿ ಪೊಲೀಸರು ಸಾಧುಕೋಕಿಲ ಮತ್ತು ಮಂಡ್ಯ ರಮೇಶ್‌ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 ಅನ್ವಯ ಮಹಿಳೆ ಘನತೆಗೆ ಧಕ್ಕೆ ತಂದ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ ಸಾಧುಕೋಕಿಲ ಹಾಗೂ ಮಂಡ್ಯ ರಮೇಶ್‌ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದ್ದಾರೆ.

ಅರ್ಜಿದಾರರ ಪರ ವಕೀಲರು, ಸಲೂನ್‌ನ ಮಹಿಳಾ ಸಿಬ್ಬಂದಿ ಘನತೆಗೆ ಧಕ್ಕೆ ತಂದ ಆರೋಪ ಸಂಬಂಧ ಸಾಧು ಕೋಕಿಲ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ. ಅಧೀನ ನ್ಯಾಯಾಲಯದ ಮುಂದೆ ನೀಡಿದ ಈ ಹೇಳಿಕೆಯಲ್ಲಿ ಮಹಿಳೆ ಈ ಆರೋಪ ಮಾಡಿಲ್ಲ. ಆಕೆ ತಿಳಿಸಿದ್ದ ದಿನದಂದು ಅರ್ಜಿದಾರರು ಸಲೂನ್‌ಗೆ ಭೇಟಿಯೇ ನೀಡಿರಲಿಲ್ಲ. ಆದರೂ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಅರ್ಜಿದಾರರಿಗೆ ತೇಜೋವಧೆಯಾಗುತ್ತಿದೆ. ಹಾಗಾಗಿ, ಪ್ರಕರಣ ಹಾಗೂ ಆ ಕುರಿತ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ಮನವಿಯನ್ನು ಇದೀಗ ಹೈಕೋರ್ಟ್‌ ಪುರಸ್ಕರಿಸಿದೆ.