ತಮ್ಮ ವಿರುದ್ಧ ದಾಖಲಿಸಿರುವ ಎರಡು ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ರಾಜೀವ್‌ ಗೌಡ ಪ್ರತ್ಯೇಕವಾಗಿ ಸಲ್ಲಿಸಿದ್ದ ಪ್ರತ್ಯೇಕ ಎರಡು ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಗುರುವಾರ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರವೊಂದರ ಬ್ಯಾನರ್‌ ಮತ್ತು ಕಟೌಟ್‌ಗಳನ್ನು ತೆರವುಗೊಳಿಸಿದ ವಿಚಾರಕ್ಕೆ ಶಿಡ್ಲಘಟ್ಟ ಪೌರಾಯುಕ್ತೆ ಜಿ.ಅಮೃತಾ ಹಾಗೂ ಸ್ಥಳೀಯ ಜೆಡಿಎಸ್‌ ಶಾಸಕ ಬಿ.ಎನ್‌.ರವಿಕುಮಾರ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆಯೊಡ್ಡಿದ ಆರೋಪ ಸಂಬಂಧ ಕಾಂಗ್ರೆಸ್‌ ಮುಖಂಡ ಬಿ.ವಿ.ರಾಜೀವ್‌ ಗೌಡ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳನ್ನು ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಪ್ರಕರಣ ಸಂಬಂಧ ಜಿ.ಅಮೃತಾ ಮತ್ತು ಶಾಸಕ ಬಿ.ಎನ್‌.ರವಿಕುಮಾರ್‌ ನೀಡಿದ್ದ ದೂರು ಆಧರಿಸಿ ತಮ್ಮ ವಿರುದ್ಧ ದಾಖಲಿಸಿರುವ ಎರಡು ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ರಾಜೀವ್‌ ಗೌಡ ಪ್ರತ್ಯೇಕವಾಗಿ ಸಲ್ಲಿಸಿದ್ದ ಪ್ರತ್ಯೇಕ ಎರಡು ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಗುರುವಾರ ಆದೇಶಿಸಿದೆ. ಇದರಿಂದ ರಾಜೀವ್‌ ಗೌಡಗೆ ಬಂಧನ ಭೀತಿ ಎದುರಾಗಿದೆ.

ರಾಜೀವ್‌ ಗೌಡ ಬಳಸಿರುವ ಭಾಷೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ನ್ಯಾಯಪೀಠ, ದೂರುದಾರೆ ಪೌರಾಯಕ್ತೆ ಅಮೃತಾ ಕೇವಲ ಸಾರ್ವಜನಿಕ ಸೇವಕಿಯಲ್ಲ. ಅವರೊಬ್ಬ ಘನತೆಯುಳ್ಳ ಮಹಿಳೆ. ಅಮೃತಾ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಯಾವುದೇ ಪುರುಷ, ನಾಕರಿತೆ ಮತ್ತು ಕಾನೂನಿನ ಸಹಿಷ್ಣುತೆಯ ಮಿತಿ ಮೀರಿ ಆಕ್ರಮಣಕಾರಿ ಭಾಷೆಯಲ್ಲಿ ಮಾತನಾಡುವುದು ದಂಡನೀಯ ಅಪರಾಧ ಎಂದು ಪೀಠ ನುಡಿದಿದೆ.

ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸಿದ ಸಾರ್ವಜನಿಕ ಸೇವಕಿಯರನ್ನು ಯಾರೂ ಬೆದರಿಸಬಾರದು ಅಥವಾ ನಿಂದಿಸಬಾರದು. ರಾಜೀವ್‌ ಗೌಡ ಕರೆ ಮಾಡಿ ಅಮೃತಾ ಅವರ ಜೊತೆ ನಡೆಸಿರುವ ಸಂಭಾಷಣೆ ಗಮನಿದರೆ, ಈತ ಮಹಿಳೆ ಮತ್ತು ಸಾರ್ವಜನಿಕ ಸೇವಕರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿರುವುದು ಸುಲಭವಾಗಿ ದೃಢಪಡುತ್ತದೆ ಎಂದು ನುಡಿದಿದೆ.

ಚಲನಚಿತ್ರ ಪ್ರಚಾರಕ್ಕಾಗಿ ಅಥವಾ ಇನ್ಯಾವುದೇ ಕಾರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ವಿವೇಚನೆಯಿಲ್ಲದೆ ಬ್ಯಾನರ್‌- ಫ್ಲೆಕ್ಸ್‌ಗಳು ಕಟ್ಟುವುದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತದೆ. ಸಂಚಾರಕ್ಕೆ ಅಡ್ಡಿಯುಂಟು ಮಾಡಿ ಅಪಾಯ ತಂದೊಡ್ಡುತ್ತವೆ. ರಾಜ್ಯದೆಲ್ಲೆಡೆ ಬೇಕಾಬಿಟ್ಟಿ ಬ್ಯಾನರ್‌, ಬಂಟಿಂಗ್ಸ್‌, ಫ್ಲೆಕ್ಸ್‌ಗಳನ್ನು ನೇತು ಹಾಕಲಾಗುತ್ತಿದೆ. ಈ ಕೃತ್ಯಗಳನ್ನು ಎಸಗುವವರ ವಿರುದ್ಧ ಕ್ರಮ ಕೈಗೊಳ್ಳುವುದೇ ಅಪರೂಪವಾಗಿ ಬಿಟ್ಟಿದೆ. ಆದ್ದರಿಂದ, ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕರ್ನಾಟಕ ಸಾರ್ವಜನಿಕ ಸ್ಥಳಗಳ ವಿರೂಪಗೊಳಿಸುವಿಕೆ ತಡೆಗಟ್ಟುವ ಕಾಯ್ದೆ-1981ರ ಅಡಿಯಲ್ಲಿ ಅನಧಿಕೃತವಾಗಿ ಬ್ಯಾನರ್‌, ಫ್ಲೆಕ್ಸ್ ಹಾಕುವ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಲು ಇದು ಸಕಾಲ ಎಂದು ಪೀಠ ಆದೇಶದಲ್ಲಿ ತಾಕೀತು ಮಾಡಿದೆ.