FIR filed against Siddhartha Law College management

-ಕಲಬುರಗಿಯ ಸಿದ್ದಾರ್ಥ ಲಾ ಕಾಲೇಜಿನಲ್ಲಿ ಪರೀಕ್ಷಾ ಅಕ್ರಮ ಪ್ರಕರಣದ ವಿಚಾರ

---

ಕನ್ನಡಪ್ರಭ ವಾರ್ತೆ ಕಲಬುರಗಿ

ಪೀಪಲ್ಸ್‌ ಎಜುಕೇಶನ್‌ ಸೊಸೈಟಿಯಡಿ ಸಿದ್ದಾರ್ಥ ಕಾನೂನು ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ಹಗರಣ ನಡೆದಿರುವ ಬಗ್ಗೆ ವ್ಯಾಪಾಕ ಸುದ್ದಿಯಾಗಿದ್ದು, ಕಾಲೇಜು ಆಡಳಿತ ಮಂಡಳಿಯ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಬೇಕು, ಹಗರಣದ ಆಳ, ಅಗಲ ಸ್ಪಷ್ಟವಾಗಲು ತನಿಖೆಗೆ ಮುಂದಾಗಬೇಕು ಎಂದು ಶಿವಸೇನಾ ರಾಜ್ಯಾಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪರೀಕ್ಷಾ ಅಕ್ರಮದಲ್ಲಿ ಸಿಬ್ಬಂದಿ ಮಾತ್ರವಲ್ಲ ಆಡಳಿತ ಮಂಡಳಿಯವರದ್ದೂ ಕೈವಾಡ ಇದೆ, ಅಕ್ರಮವಾಗಿ ಪರೀಕ್ಷೆ ಬರೆಸಿ ಕಾನೂನು ಪದವಿ ಕೊಡಿಸುವುದು, ನಂತರ ಶಿಫಾರಸ್ಸು ಮಾಡಿ ಅವರನ್ನು ನ್ಯಾಯಾಧೀಶರಾಗಿಸುವವರೆಗೂ ಆಡಳಿತ ಮಂಡಳಿಯ ಹಸ್ತಕ್ಷೇಪ ಇದೆ ಮೊದಲು ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದರು.

ತಮ್ಮ ಕರ್ಮಕಾಂಡಗಳೆಲ್ಲವನ್ನೂ ಕೋರ್ಟ್‌ ಮೂಲಕ ಮುಚ್ಚಿ ಹಾಕಿಸುವ ಕುತಂತ್ರ ಇವರು ಮಾಡುತ್ತಲೇ ಬಂದಿದ್ದಾರೆ. ಸಚಿವ ಪ್ರೀಯಾಂಕ್ ಖರ್ಗೆ ಅವರು, ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬಿಜೆಪಿ ವಿರುದ್ಧ, ಅಂದಿನ ಗೃಹ ಸಚಿವರ ವಿರುದ್ಧ ಪುಂಕಾನುಪುಂಕವಾಗಿ ಮಾತನಾಡಿದ್ದರು. ಈಗ ಅವರೇ ಸದಸ್ಯರಾಗಿರುವ ಸಂಸ್ಥೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದ್ದರೂ ಏಕೆ ಮಾತನಾಡುತ್ತಿಲ್ಲ ಎಂದು ಪ್ರಸ್ನಿಸಿದರು.

ಪ್ರೀಯಾಂಕ್ ಖರ್ಗೆ ಅವರೇ, ನಿಮ್ಮ ಸಂಸ್ಥೆಯ ಈ ಹಗರಣದ ಬಗ್ಗೆ ತುಟಿ ಬಿಚ್ಚಿ ಮಾತನಾಡಿ, ಸರ್ಕಾರವೇ ಈ ಸಂಸ್ಥೆಯ ವಿರುದ್ಧ ಸ್ವಯಂ ಪ್ರೇರಿತವಾಗಿ ಕೇಸ್‌ ದಾಖಲಿಸಿಕೊಳ್ಳಬೇಕು. ಈ ಅಕ್ರಮದ ಹಿಂದೆ ಯಾರಿದ್ದಾರೆ ಅವರೆಲ್ಲರನ್ನೂ ಬಂಧಿಸಬೇಕು ಎಂದೂ ಆಂದೋಲಾ ಶ್ರೀಗಳು ಆಗ್ರಹಿಸಿದರು.

ಈ ಪ್ರಕರಣದ ಕುರಿತಂತೆ ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದ ಕುಲಪತಿಯವರಿಗೆ ದೂರು ಕೊಟ್ಟಿದ್ದೇವೆ. ಅವರಿಂದಲೂ ಯಾವುದೇ ಕ್ರಮ ಆಗದಿದ್ದರೆ ನಾವೇ ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ ಎಂದು ಶಿವಸೇನೆ ರಾಜ್ಯಾಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮಿಜಿ ಸ್ಪಷ್ಟಪಡಿಸಿದರು........ಬಾಕ್ಸ್‌......

ತನಿಖೆಗೆ ಎಬಿವಿಪಿ ಆಗ್ರಹ

ಸಿದ್ದಾರ್ಥ ಕಾನೂನು ಕಾಲೇಜಿನಲ್ಲಿ ನಡೆದ ಪರೀಕ್ಷೆ ಅಭಾವಿಪ ಕಲಬುರಗಿ ಘಟಕದಿಂದ ಅಪರ ಜಿಲ್ಲಾಧಿಕಾರಿಗಳು ಕಲಬುರಗಿ ಮುಖಾಂತರ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿಗಳಿಗೆ ದೂರು ಸಲ್ಲಿಸಿರುವ ಸಂಘಟನೆ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಪರೀಕ್ಷೆಯ ವೇಳೆ ಮೊದಲ ಪುಟ ಹೊರತುಪಡಿಸಿ ಉಳಿದ ಎಲ್ಲಾ ಪುಟಗಳು ಆದಲು ಬದಲು ಆಗಿರುವುದು ಸುದ್ದಿಯಾಗಿದೆ. ಕಾನೂನು ವಿವಿ ನಡೆಸುವ ಪರೀಕ್ಷೆಯ ಗುಣಮಟ್ಟದ ಮೇಲೆ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಶ್ನೆ ಕಾಡುತ್ತಿದೆ. ವಿವಿ ಸೂಕ್ತ ತನಿಖೆ ನಡೆಸಿ ಪರೀಕ್ಷೆಯ ಅಕ್ರಮದಲ್ಲಿ ಕಾಲೇಜಿನ ಮಾತ್ರ ಕೈವಾಡವಿದೆ ಅಥವಾ ವಿವಿ ಕೈವಾಡವಿದೆಯೋ ಎಂದು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದೆ.

ಕಾನೂನು ಕಲಿಸಬೇಕಾದ ಸಂಸ್ಥೆಯೇ ಕಾನೂನು ಉಲ್ಲಂಘಿಸಿದಂತಾಗಿದೆ. ಆದ್ದರಿಂದ ವಿವಿ ಪರೀಕ್ಷೆಯ ಗುಣಮಟ್ಟದ ಬಗ್ಗೆ ವಿವಿ ಗಂಭೀರವಾಗಿ ಪರಿಗಣಿಸಿ ಉನ್ನತ ತನಿಖೆ ಮಾಡಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ. ಈ ಪ್ರಕರಣದಲ್ಲಿ ಭಾಗಿಯಾದ ಸಿದ್ದಾರ್ಥ ಕಾಲೇಜಿನ ಮೇಲೆ ಯಾವ ಕ್ರಮ ಕೈಗೊಂಡಿದ್ದಿರಿ ಎಂದು ಸ್ಪಷ್ಟಪಡಿಸಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ಕಾಲೇಜಿನ ಅನುಮತಿ ರದ್ದು ಪಡಿಸಬೇಕೆಂದು ಎಬಿವಿಪಿಯ ಕಾರ್ಯದರ್ಶಿ ಶರಣು ಪೂಜಾರಿ, ಜಿಲ್ಲಾ ಸಂಚಾಲಕ ಮಂಜುನಾಥ ಕೊನ್ನೂರ, ವಿಭಾಗ ಕಾನೂನು ಸಂಚಾಲಕರಾದ ಜಗಳಪ್ಪ ಅನಿಕೇರಿ, ಪ್ರಾಂತ ಫಾರ್ಮ ವಿಷನ್ ಸಂಚಾಲಕ ಬಸವರಾಜ ಗುರುಗುಂಟಿ, ಅನಿಕೇತ ಸಾಕ್ರೆ, ಅಕ್ಷಯ ಕುಮಾರ, ಕಾಶಿನಾಥ್, ಮಲ್ಲಿಕಾರ್ಜುನ ,ಬಸವರಾಜ , ಮಯೂರ ಪೂಜಾರಿ, ಪವನ ಕುಮಾರ, ಸತೀಶ ರಾಥೋಡ , ಶಾಂತೇಶ ಚಕ್ಕಡಿ, ಹಾಗೂ ವಿವಿಧ ಕಾಲೇಜಿನ ಕಾನೂನು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಫೋಟೋ- ಎಬಿವಿಪಿ ಪ್ರೊಟೆಸ್ಟ್‌

ಫೋಟೋ-

ಆಂದೋಲಾ ಸ್ವಾಮೀಜಿ