ಪ್ರಸನ್ನವದನರಾಗಿದ್ದೀರಿ ಶುಭಶಕುನ ಸಿಕ್ಕಿದ್ಯಾ? : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೆಣಕಿದ ಬಿಜೆಪಿಗರು

| N/A | Published : Mar 15 2025, 11:38 AM IST

DK Shivakumar
ಪ್ರಸನ್ನವದನರಾಗಿದ್ದೀರಿ ಶುಭಶಕುನ ಸಿಕ್ಕಿದ್ಯಾ? : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೆಣಕಿದ ಬಿಜೆಪಿಗರು
Share this Article
  • FB
  • TW
  • Linkdin
  • Email

ಸಾರಾಂಶ

 ಡಿ.ಕೆ.ಶಿವಕುಮಾರ್‌ ಅವರೇ ಏನಿವತ್ತು ಬಹಳ ಪ್ರಸನ್ನವದನರಾಗಿದ್ದೀರಿ, ನಿನ್ನೆ ತಾನೆ ಶಾಸಕರಿಗೆ ಔತಣಕೂಟ ನೀಡಿದ್ದೀರಿ. ಏನಾದ್ರೂ ಶುಭ ಶಕುನ ಸಿಕ್ಕಿದೆಯಾ? ನಮ್ಮ ಬಳಿಯೂ ಸ್ವಲ್ಪ ಆ ಆನಂದ ಹಂಚಿಕೊಳ್ಳಿ  ಎಂದು ಕೆಲ ಬಿಜೆಪಿ ಸದಸ್ಯರು ಕಿಚಾಯಿಸಿದ ಘಟನೆ ವಿಧಾನ ಪರಿಷತ್‌ನಲ್ಲಿ ನಡೆಯಿತು.

 ವಿಧಾನ ಪರಿಷತ್‌ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಏನಿವತ್ತು ಬಹಳ ಪ್ರಸನ್ನವದನರಾಗಿದ್ದೀರಿ, ನಿನ್ನೆ ತಾನೆ ಶಾಸಕರಿಗೆ ಔತಣಕೂಟ ನೀಡಿದ್ದೀರಿ. ಏನಾದ್ರೂ ಶುಭ ಶಕುನ ಸಿಕ್ಕಿದೆಯಾ? ನಮ್ಮ ಬಳಿಯೂ ಸ್ವಲ್ಪ ಆ ಆನಂದ ಹಂಚಿಕೊಳ್ಳಿ. ನಿಮ್ಮ ಗುರಿ ಯಾವಾಗ ತಲುಪೋದು ಎಂದು ಕೆಲ ಬಿಜೆಪಿ ಸದಸ್ಯರು ಕಿಚಾಯಿಸಿದ ಘಟನೆ ವಿಧಾನ ಪರಿಷತ್‌ನಲ್ಲಿ ನಡೆಯಿತು.

ಇದಕ್ಕೆ, ಡಿ.ಕೆ.ಶಿವಕುಮಾರ್‌ ಕೂಡ ಬಹಳ ನಗುಮೊಗದಿಂದಲೇ ನಾನು ರಾಜಕೀಯ ಪ್ರವೇಶಿಸಿದಾಗಿಂದಲೂ ಏರುಗತಿಯಲ್ಲೇ ಸಾಗುತ್ತಿದ್ದೇನೆ. ನಿಮ್ಮ ಸಹಕಾರ, ಹಾರೈಕೆ ಇರಲಿ ಎಂದು ಹೇಳುವ ಜೊತೆಗೆ, ನಿಮ್ಮಿಂದಲೇ ನಾನು ಮಧ್ಯೆ ಕೆಳಗೆ ಬಿದ್ದಿದ್ದು, ತಿಹಾರ್‌ ಜೈಲಿಗೂ ಕಳುಹಿಸಿದರಲ್ಲಪ್ಪಾ ಎಂದು ಕುಟುಕಿದರು.

ಶುಕ್ರವಾರ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಕೇಶವ ಪ್ರಸಾದ್, ಆಲಮಟ್ಟಿ ಸಂತ್ರಸ್ತರಿಗೆ ಒಂದೇ ಬಾರಿಗೆ ಪರಿಹಾರ ನೀಡುವ ಹಾಗೂ ಮಹಾರಾಷ್ಟ್ರ ತಗಾದೆ ಎತ್ತಿರುವ ವಿಚಾರದ ಬಗ್ಗೆ ಗಮನ ಸೆಳೆದರು. ಇದಕ್ಕೆ ಉತ್ತರ ನೀಡಿದ ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ.ಶಿವಕುಮಾರ್‌, ನೀವು ಪ್ರಶ್ನೆ ಜೊತೆಗೆ ಸಮಸ್ಯೆಯ ಆಳ-ಅಗಲ ಹಾಗೂ ಪರಿಹಾರವನ್ನೂ ಹೇಳಿದ್ದೀರಿ. ಎಲ್ಲವನ್ನೂ ಬಲ್ಲ ನಿಮಗೆ ಸರಿಯಾದ ಉತ್ತರ ಕೊಡಬೇಕು. ಕೆಲ ತಾಂತ್ರಿಕ ವಿಚಾರಗಳನ್ನು ಪ್ರಸ್ತಾಪಿಸಿದ್ದೀರಿ ಸೋಮವಾರ ವಿವರವಾದ ಉತ್ತರ ಕೊಡುತ್ತೇನೆ ಎಂದು ನಗುನಗುತ್ತಲೇ ಹೇಳಿದರು. ಇದಕ್ಕೂ ಮುನ್ನ ಕೆಲ ಪ್ರಶ್ನೆಗಳಿಗೂ ಬಹಳ ಶಾಂತವಾಗಿ ಹಾಗೂ ನಗುಮೊಗದಿಂದಲೇ ಉತ್ತರ ನೀಡಿದ್ದರು.

ಇದನ್ನು ಗಮನಿಸಿದ ಬಿಜೆಪಿಯ ಸಿ.ಟಿ.ರವಿ, ರವಿಕುಮಾರ್‌, ಜೆಡಿಎಸ್‌ನ ಶರವಣ ಮತ್ತಿತರರು, ಏನಿವತ್ತು ಅತ್ಯಂತ ಶಾಂತಚಿತ್ತದಿಂದ, ಪ್ರಸನ್ನವದನರಾಗಿ ಉತ್ತರ ನೀಡುತ್ತಿದ್ದೀರಿ. ಶಾಲು ಕೂಡ ಕಳೆ ಕೊಡುತ್ತಿದೆ. ನಿನ್ನೆ ಶಾಸಕರಿಗೆ ಔತಣಕೂಟ ನೀಡಿದ್ದೀರಿ, ಏನಾದರೂ ಶುಭಶಕುನ ಸಿಕ್ಕಿದೆಯಾ? ಎಂದು ಕಾಲೆಳೆದರು. ಇದಕ್ಕೆ ಡಿ.ಕೆ.ಶಿವಕುಮಾರ್‌, ‘ಸಂತೋಷಂ ಜನೇತ್‌ ಪ್ರಾಜ್ಞಾ ತದೈವ ಈಶ್ವರಂ ಪೂಜಾ’ ಅಂದರೆ ಜನರನ್ನು ಸಂತೋಷವಾಗಿಡುವುದೇ ಈಶ್ವರ ಸೇವೆ. ಅದಕ್ಕೆ ನಿಮ್ಮನ್ನ ಸಂತೋಷ ಪಡಿಸಿದರೆ ನಾನು ಸಂತೋಷ ಪಟ್ಟಂಗೆ. ಆ ಪ್ರಯತ್ನದಲ್ಲಿ ನಾನಿದ್ದೇನೆ ಎಂದರು.

ಇದಕ್ಕೆ ರವಿಕುಮಾರ್‌, ನಿಮ್ಮ ಗುರಿ ಮುಟ್ಟುವುದು ಯಾವಾಗ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಗಾಧಿ ವಿಚಾರ ಕೆಣಕಿದರು. ಅದಕ್ಕೆ ಡಿ.ಕೆ.ಶಿವಕುಮಾರ್‌, ನಾನು 1984ರಲ್ಲಿ ವಿಧಾನಸಭೆ ಪ್ರವೇಶಿಸಿದೆ ಅಲ್ಲಿಂದ ಏರುಗತಿಯಲ್ಲೇ ಸಾಗುತ್ತಿದ್ದೇನೆ. ನಿಮ್ಮ ಸಹಕಾರ, ಆರೈಕೆ ಒಂದಿರಲಿ. ನಿಮ್ಮ ಕಾಟದಿಂದಲೇ ಹಿಂದೆ ಕೊಂಚ ಕೆಳಗೆ ಬಂದಿದ್ದು, ತಿಹಾರ್‌ ಜೈಲಿಗೆಲ್ಲಾ ಕಳುಹಿಸಿದರಲ್ಲಪ್ಪಾ ಎಂದು ನಗುತ್ತಲೇ ಕಾಲೆಳೆದು ಕುಳಿತರು.