ಸಾರಾಂಶ
ಒಂದು ದೇಶ ಒಂದೇ ಚುನಾವಣೆಯಿಂದ ಪ್ರಾದೇಶಿಕ ಪಕ್ಷವು ರಾಷ್ಟ್ರಹಿತದೊಂದಿಗೆ ಹಾಗೂ ರಾಷ್ಟ್ರೀಯ ಪಕ್ಷವು ಪ್ರಾದೇಶಿಕ ಹಿತೈಷಿಯಾಗಿ ಚಿಂತಿಸುವಂತೆ ಆಗಲಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.
ಬೆಂಗಳೂರು : ಒಂದು ದೇಶ ಒಂದೇ ಚುನಾವಣೆಯಿಂದ ಪ್ರಾದೇಶಿಕ ಪಕ್ಷವು ರಾಷ್ಟ್ರಹಿತದೊಂದಿಗೆ ಹಾಗೂ ರಾಷ್ಟ್ರೀಯ ಪಕ್ಷವು ಪ್ರಾದೇಶಿಕ ಹಿತೈಷಿಯಾಗಿ ಚಿಂತಿಸುವಂತೆ ಆಗಲಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.
ಶುಕ್ರವಾರ ಜಯನಗರದ ಜೈನ್ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಒಂದು ದೇಶ ಒಂದು ಚುನಾವಣೆ’ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಪಡಿಸುವ ಮತದಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತಾಗಬೇಕು ಎಂದು ಅವರು ಆಶಿಸಿದರು.
ಯುವಜನರು ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಮತದಾನದಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳಬೇಕಿದೆ. ಎಲ್ಲರೂ ಸಮಾನರು, ಪುರುಷ- ಮಹಿಳೆ ಸೇರಿ ಎಲ್ಲರಿಗೂ ಒಂದು ಮತದಾನದ ಹಕ್ಕಿದೆ ಎಂಬುದನ್ನು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲೇ ಜಾರಿಗೊಳಿಸಿದ ದೇಶ ನಮ್ಮದು ಎಂದು ವಿವರಿಸಿದರು.
ಹಿಂದೆ 1951-52ರಲ್ಲಿ ಮೊದಲ ಚುನಾವಣೆ ನಡೆದಿತ್ತು. ಏಳು ಹಂತಗಳಲ್ಲಿ ಅದು ನಡೆಯಿತು. 57ರಲ್ಲಿ 2ನೇ ಚುನಾವಣೆ ನಡೆಸಲಾಯಿತು. 1952, 57, 62, 67ರಲ್ಲಿ ರಾಜ್ಯ ವಿಧಾನಸಭೆಗಳು, ಸಂಸತ್ತಿಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು. 1970ರಲ್ಲಿ ಲೋಕಸಭೆಯನ್ನು ಒಂದು ವರ್ಷ ಮೊದಲೇ ವಿಸರ್ಜಿಸಲಾಯಿತು. ಕಮ್ಯುನಿಸ್ಟ್ ಪಕ್ಷದ ಆಡಳಿತ ಇದ್ದ ಕೇರಳ ರಾಜ್ಯದ ಆಡಳಿತದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಸಂವಿಧಾನಕ್ಕೆ ವಿರುದ್ಧವಾಗಿ ಆ ರಾಜ್ಯ ಸರಕಾರವನ್ನು ವಜಾ ಮಾಡಲಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸೇತರ ರಾಜ್ಯಗಳ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರು. ಹಿಂದೆ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಜನತಾ ಪಕ್ಷವೂ ಇದೇ ರೀತಿ ಮಾಡಿತ್ತು ಎಂದರು.
28 ರಾಜ್ಯಗಳು ಇರುವ ಭಾರತದಲ್ಲಿ ಚುನಾವಣೆ ಎಂಬುದು ಈಗ ನಿರಂತರ ಪ್ರಕ್ರಿಯೆ ಆಗಿದೆ. 45 ದಿನಗಳ ನೀತಿಸಂಹಿತೆ ಪ್ರಕ್ರಿಯೆ ಅಭಿವೃದ್ಧಿ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. 6 ತಿಂಗಳ ಕಾಲ ಮತದಾರರ ಪಟ್ಟಿ ಸಿದ್ಧಪಡಿಸುವಿಕೆ ನಡೆಯುತ್ತದೆ. ಒಂದು ಚುನಾವಣೆ ಸಂಬಂಧ ಒಂದು ರಾಜ್ಯ ಕನಿಷ್ಠ ಏಳೂವರೆ ತಿಂಗಳನ್ನು ಕಳೆದುಕೊಳ್ಳುತ್ತದೆ ಎಂದು ವಿವರಿಸಿದರು.
ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ, ಒಂದು ದೇಶ ಒಂದು ಚುನಾವಣೆ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ನವೀನ್ ಶಿವಪ್ರಕಾಶ್, ಅಶ್ವತ್ಥನಾರಾಯಣ್, ಜೈನ್ ವಿಶ್ವವಿದ್ಯಾಲಯದ ಉಪಾಧ್ಯಕ್ಷ ರವೀಂದ್ರ ಭಂಡಾರಿ, ಜಂಟಿ ಕಾರ್ಯದರ್ಶಿ ಸಂತೋಷ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮತ್ತು ಜೈನ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಜಿತೇಂದ್ರ ಮಿಶ್ರ ಉಪಸ್ಥಿತರಿದ್ದರು.
;Resize=(690,390))
)
)
;Resize=(128,128))
;Resize=(128,128))
;Resize=(128,128))