ಮುಖ್ಯಮಂತ್ರಿ ಸ್ಥಾನ, ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷರ ಬದಲಾವಣೆ ಸೇರಿ ಇನ್ನಿತರ ವಿಚಾರದ ಕುರಿತು ತಮ್ಮ ವಿರುದ್ಧ ಬಹಿರಂಗ ಮುನಿಸು ಪ್ರದರ್ಶಿಸಿದ್ದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರೊಂದಿಗೆ ಡಿ.ಕೆ.ಶಿವಕುಮಾರ್‌ ಅವರು ಕಲಾಪ ನಡೆಯುತ್ತಿರುವಾಗಲೇ ಅರ್ಧ ಗಂಟೆಗೂ ಹೆಚ್ಚಿನ ಕಾಲ ಚರ್ಚೆ ನಡೆಸಿದರು.

 ವಿಧಾನಸಭೆ : ಮುಖ್ಯಮಂತ್ರಿ ಸ್ಥಾನ, ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷರ ಬದಲಾವಣೆ ಸೇರಿ ಇನ್ನಿತರ ವಿಚಾರದ ಕುರಿತು ತಮ್ಮ ವಿರುದ್ಧ ಬಹಿರಂಗ ಮುನಿಸು ಪ್ರದರ್ಶಿಸಿದ್ದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರೊಂದಿಗೆ ಡಿ.ಕೆ.ಶಿವಕುಮಾರ್‌ ಅವರು ಕಲಾಪ ನಡೆಯುತ್ತಿರುವಾಗಲೇ ಅರ್ಧ ಗಂಟೆಗೂ ಹೆಚ್ಚಿನ ಕಾಲ ಚರ್ಚೆ ನಡೆಸಿದರು.

ಕಳೆದ ಮಂಗಳವಾರ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚಿಸಲು ಬಂದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗದೇ ತೆರಳಿದ್ದ ಕೆ.ಎನ್‌.ರಾಜಣ್ಣ ಬಹಿರಂಗವಾಗಿ ಮುನಿಸು ಹೊರಹಾಕಿದ್ದರು. ಈ ಮುನಿಸನ್ನು ಶಮನ ಮಾಡುವ ಕೆಲಸ ಮಾಡಿರುವ ಶಿವಕುಮಾರ್‌ ಗುರುವಾರ ಕಲಾಪ ನಡೆಯುತ್ತಿರುವಾಗಲೇ, ರಾಜಣ್ಣ ಆಸನದ ಬಳಿ ತೆರಳಿ ಅರ್ಧ ಗಂಟೆಗೂ ಹೆಚ್ಚಿನ ಕಾಲ ಚರ್ಚಿಸಿದರು. ಇವರಿಬ್ಬರ ಮಾತುಕತೆ ವೇಳೆ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಕೂಡ ಹಾಜರಿದ್ದದ್ದು ವಿಶೇಷವಾಗಿತ್ತು.

ಕಿವಿಗೊಡದ ಡಿಸಿಎಂ: ರಾಜಣ್ಣ ಜತೆಗೆ ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುತ್ತಿದ್ದ ಆರ್‌.ಅಶೋಕ್‌ ಅವರು ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದರು. ಬೆಂಗಳೂರು ನಗರ ರಸ್ತೆ ಗುಂಡಿಯಿಂದ ತುಂಬಿಹೋಗಿದೆ. ಬ್ರ್ಯಾಂಡ್‌ ಬೆಂಗಳೂರನ್ನು ಬ್ಯಾಡ್‌ ಬೆಂಗಳೂರು, ಗಾರ್ಬೇಜ್‌ ಬೆಂಗಳೂರು ಮಾಡಿದ್ದಾರೆ. ಹಾಗೆಯೇ, ಚಿತ್ರರಂಗದವರ ವಿರುದ್ಧ ಡಿ.ಕೆ. ಶಿವಕುಮಾರ್‌ ಹೇಳಿಕೆ ಸರಿಯಿಲ್ಲ ಎಂಬ ಕುರಿತು ಮಾತನಾಡಿದರು.

ಆದರೆ, ಅದ್ಯಾವುದನ್ನೂ ಕೇಳಿಸಿಕೊಳ್ಳದ ಅಥವಾ ಅದರ ಬಗ್ಗೆ ಗಮನಕೊಡದ ಡಿ.ಕೆ.ಶಿವಕುಮಾರ್‌, ರಾಜಣ್ಣ ಮತ್ತು ಲಕ್ಷ್ಮಣ ಸವದಿ ಜತೆಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು.