ದೇವಾಂಗ ಸಮುದಾಯವೂ ಸೇರಿ ರಾಜ್ಯದ ಎಲ್ಲ ಹಿಂದುಳಿದ ಜಾತಿಗಳ ಸಂಘಗಳಿಗೂ ಸರ್ಕಾರದಿಂದ ಉಚಿತ ಜಮೀನು ನೀಡಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ‘ದೇವಾಂಗ ಸಂಘದ ಶತಮಾನೋತ್ಸವ’ ಸಮಾರಂಭ
ಬೆಂಗಳೂರು : ದೇವಾಂಗ ಸಮುದಾಯವೂ ಸೇರಿ ರಾಜ್ಯದ ಎಲ್ಲ ಹಿಂದುಳಿದ ಜಾತಿಗಳ ಸಂಘಗಳಿಗೂ ಸರ್ಕಾರದಿಂದ ಉಚಿತ ಜಮೀನು ನೀಡಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ದೇವಾಂಗ ಸಂಘ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ದೇವಾಂಗ ಸಂಘದ ಶತಮಾನೋತ್ಸವ’ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಿಂದುಳಿದ ಜಾತಿ ಸಂಘಟನೆಗಳಿಗೆ ತಲಾ ಕನಿಷ್ಠ ಎರಡರಿಂದ, ಎರಡೂವರೆ ಎಕರೆ ಜಮೀನು ನೀಡಲು ಅವಕಾಶವಿದೆ. ಈ ವಿಚಾರ ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆಗೆ ಬಂದಾಗ ಚರ್ಚಿಸಿ ದೇವಾಂಗ ಸಮಾಜದ ಸಂಘಟನೆ ಸೇರಿ ಎಲ್ಲ ಹಿಂದುಳಿದ ಜಾತಿ ಸಂಘಟನೆಗಳಿಗೂ ಸರ್ಕಾರದಿಂದ ಉಚಿತವಾಗಿ ಜಮೀನು ನೀಡಲಾಗುವುದು ಎಂದು ತಿಳಿಸಿದರು.
ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ:
ನೇಕಾರ ಸಮುದಾಯದ ಬೇಡಿಕೆಯಂತೆ ಸರ್ಕಾರದ ಅವಧಿಯಲ್ಲೇ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ ಅವರು, 2004-05ರಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ, ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಮತ್ತು ಈಗ ನೇಕಾರರ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದೇವೆ.
ಈಗ ಸಮುದಾಯದಿಂದ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸುವ ಬೇಡಿಕೆ
ಈಗ ಸಮುದಾಯದಿಂದ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸುವ ಬೇಡಿಕೆಯಿದ್ದು, ನಮ್ಮ ಸರ್ಕಾರದ ಅವಧಿಯಲ್ಲೇ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಮುದಾಯದ ಹಾಸ್ಟೆಲ್ ನಿರ್ಮಾಣಕ್ಕೂ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುವುದು. ನೇಕಾರ ಸಮಾಜ ಉಪಕಾರ ಮಾಡಿದವರ ಜೊತೆ ನಿಲ್ಲಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಂಪಿ ಹೇಮಕೂಠ ಮಹಾಸಂಸ್ಥಾನದ ದೇವಾಂಗ ಜಗದ್ಗುರು ದಯಾನಂದಪುರಿ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ, ಮಾಜಿ ಸಚಿವ ಉಮಾಶ್ರೀ, ದೇವಾಂಗ ಸಂಘದ ಅಧ್ಯಕ್ಷ ಜಿ.ರಮೇಶ್, ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು.
