ಸಾರಾಂಶ
ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಎಸ್.ಷಡಾಕ್ಷರಿ ಪುನರಾಯ್ಕೆಯಾಗಿದ್ದಾರೆ.
ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಎಸ್.ಷಡಾಕ್ಷರಿ ಪುನರಾಯ್ಕೆಯಾಗಿದ್ದಾರೆ.
ಶುಕ್ರವಾರ ಕಬ್ಬನ್ ಉದ್ಯಾನವನದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ 2024-2029 ನೇ ಸಾಲಿನ ಚುನಾವಣೆಗೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಅಂತಿಮವಾಗಿ ಶಿವಮೊಗ್ಗ ಮೂಲದ ಷಡಾಕ್ಷರಿ ಅವರು 507 ಮತಗಳನ್ನು ಪಡೆಯುವ ಮೂಲಕ 2ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಪಿ.ಕೃಷ್ಣೇಗೌಡ ಅವರು 442 ಮತಗಳನ್ನು ಪಡೆದರೆ, ಷಡಾಕ್ಷರಿ ಕೃಷ್ಣೇಗೌಡ ಅವರಿಗಿಂತ 65 ಅಧಿಕ ಮತಗಳನ್ನು ಪಡೆದು ವಿಜೇತರಾದರು. ರಾಜ್ಯ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿ.ವಿ.ಶಿವರುದ್ರಯ್ಯ 485 ಮತ ಪಡೆದು ಜಯಗಳಿಸಿದ್ದು, ನಾಗರಾಜ ಆರ್.ಜುಮ್ಮನವರ 467 ಮತ ಪಡೆದು ಪರಾಭವಗೊಂಡರು. ಸಂಘದ ರಾಜ್ಯ ಚುನಾವಣಾಧಿಕಾರಿಯಾಗಿದ್ದ ಎ.ಹನುಮನರಸಯ್ಯ ಅವರು ಫಲಿತಾಂಶ ಘೋಷಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಸಂಘದ ಸದಸ್ಯತ್ವ ನೋಂದಣಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದು, ಇದಕ್ಕೆ ತಡೆಯಾಜ್ಞೆ ಸಿಕ್ಕಿತ್ತು. ಬಳಿಕ ಸರ್ಕಾರ ಆಡಳಿತಾಧಿಕಾರಿ ನೇಮಿಸಿದ್ದು ಇದಕ್ಕೂ ಹೈಕೋರ್ಟ್ ತಡೆಯಾಜ್ಞೆ ನೀಡಲಾಗಿತ್ತು. ಆ ನಂತರ ಚುನಾವಣೆ ಪ್ರಕ್ರಿಯೆ ನಡೆದಿತ್ತು. ಷಡಾಕ್ಷರಿ ಅವರನ್ನು ಪರಾಭವಗೊಳಿಸಲು ಬಹಳಷ್ಟು ಯತ್ನಗಳು ನಡೆದಿದ್ದರೂ ಇದೆಲ್ಲವನ್ನೂ ಮೀರಿ ಅವರು ಪುನರಾಯ್ಕೆಯಾಗಿದ್ದಾರೆ.
ಒತ್ತಡ, ಆಮಿಷಗಳಿಗೆ ಬಲಿಯಾಗದೆ ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ಮತದಾರರ ನಂಬಿಕೆ ಉಳಿಸಿಕೊಂಡು ಹೋಗುತ್ತೇನೆ. ನಾನು ಮಾಡಿದ ಕೆಲಸಗಳಿಗೆ ಜಯ ಸಂದಿದೆ. ಸರ್ಕಾರಿ ನೌಕರರ ಹಿತಕ್ಕಾಗಿ ಹಿಂದೆಯೂ ಶ್ರಮಿಸಿದ್ದೆ. ಮುಂದೆಯೂ ಶ್ರಮಿಸುತ್ತೇನೆ.
- ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ
ಸಂಘಟನೆಗೆ ಸಂದ ಜಯ: ಷಡಾಕ್ಷರಿ
ಮತದಾರರು ಒತ್ತಡ, ಆಮಿಷಗಳಿಗೆ ಬಲಿಯಾಗದೆ ಮತ ಚಲಾಯಿಸಿದ್ದಾರೆ. ನನ್ನ ಗೆಲುವು ಸಂಘಟನೆಗೆ ಸಂದ ಜಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಪ್ರತಿಕ್ರಿಯಿಸಿದ್ದಾರೆ.
‘ಕನ್ನಡ ಪ್ರಭ’ದೊಂದಿಗೆ ಮಾತನಾಡಿ, ಸಂಘದ ಅಧ್ಯಕ್ಷನಾಗಿ ಮಾಡಿದ ಸಂಘಟನೆ ಕೈಹಿಡಿದಿದೆ. ಒತ್ತಡ, ಆಮಿಷಗಳಿಗೆ ಬಲಿಯಾಗದೆ ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ಮತದಾರರ ನಂಬಿಕೆ ಉಳಿಸಿಕೊಂಡು ಹೋಗುತ್ತೇನೆ. ನಾನು ಮಾಡಿದ ಕೆಲಸಗಳಿಗೆ ಜಯ ಸಂದಿದೆ. ಸರ್ಕಾರಿ ನೌಕರರ ಹಿತಕ್ಕಾಗಿ ಹಿಂದೆಯೂ ಶ್ರಮಿಸಿದ್ದೆ. ಮುಂದೆಯೂ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.