ಅಡಕೆ ಬೆಳೆ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದಿಂದ ಪರಿಹಾರ - ಆತಂಕ ಪಡುವ ಅಗತ್ಯ ಇಲ್ಲ : ಜೋಶಿ

| Published : Dec 28 2024, 09:46 AM IST

Prahlad Joshi

ಸಾರಾಂಶ

ಹವ್ಯಕ ಸಮಾಜದವರ ಮೂಲ ಕೃಷಿಯಾದ ಅಡಕೆ ಉತ್ಪನ್ನದ ಕುರಿತು ಯಾವುದೇ ರೀತಿಯ ವಿರೋಧಾಭಿಪ್ರಾಯಗಳು ವ್ಯಕ್ತವಾದರೂ ಕೇಂದ್ರ ಸರ್ಕಾರ ಅದರ ಬಗ್ಗೆ ಚಿಂತಿಸದೆ, ಅಡಕೆ ಬೆಳೆ ಪರವಾಗಿರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭರವಸೆ ನೀಡಿದ್ದಾರೆ.

ಬೆಂಗಳೂರು : ಹವ್ಯಕ ಸಮಾಜದವರ ಮೂಲ ಕೃಷಿಯಾದ ಅಡಕೆ ಉತ್ಪನ್ನದ ಕುರಿತು ಯಾವುದೇ ರೀತಿಯ ವಿರೋಧಾಭಿಪ್ರಾಯಗಳು ವ್ಯಕ್ತವಾದರೂ ಕೇಂದ್ರ ಸರ್ಕಾರ ಅದರ ಬಗ್ಗೆ ಚಿಂತಿಸದೆ, ಅಡಕೆ ಬೆಳೆ ಪರವಾಗಿರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭರವಸೆ ನೀಡಿದ್ದಾರೆ.

ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 3 ದಿನಗಳ ‘ತೃತೀಯ ವಿಶ್ವ ಹವ್ಯಕ ಸಮ್ಮೇಳನ’ಕ್ಕೆ ಚಾಲನೆ ನೀಡಿ ಮಾತನಾಡಿ, ಅಡಕೆ ಹವ್ಯಕ ಸಮುದಾಯದ ಮೂಲ ಕೃಷಿ. ಮದುವೆಯಿಂದ ಶ್ರಾದ್ಧದವರೆಗೆ ಅಡಕೆ ಅತ್ಯಗತ್ಯ. ಆದರೆ, ಅಡಕೆ ಕುರಿತು ಅನೇಕ ರೀತಿಯ ವರದಿಗಳು ಬಂದಿವೆ. ಎಷ್ಟೇ ವರದಿಗಳು ಬಂದರೂ ಅಡಕೆ ಬೆಳೆಗಾರರು ಯಾವುದೇ ರೀತಿಯಲ್ಲೂ ಭಯಪಡುವ ಅವಶ್ಯಕತೆಯಿಲ್ಲ. ಏನೇ ಸಮಸ್ಯೆಗಳು ಎದುರಾದರೂ ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ಪರವಾಗಿರಲಿದೆ ಎಂದು ತಿಳಿಸಿದರು.

ಹಿಂದೂ ಧರ್ಮದಲ್ಲಿ ಜಾತಿ ಆಧಾರಿತ ಗುಣಗಳಿವೆ. ಆದರೆ, ಅದೆಲ್ಲವನ್ನೂ ಮೀರಿ ಹವ್ಯಕ ಸೇರಿ ಬ್ರಾಹ್ಮಣ ಸಮುದಾಯ ಸಮಾಜವನ್ನು ಒಗ್ಗೂಡಿಸಿ ಸಾಗುವ ಕೆಲಸ ಮಾಡುತ್ತಿದೆ. ರಾಮಾಯಣದಲ್ಲಿ ರಾಮ ನಾಯಕನಾಗಿದ್ದರೆ, ವಾಲ್ಮೀಕಿ ಅದನ್ನು ರಚಿಸಿದ. ಅವರಿಬ್ಬರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಲ್ಲ. ಆದರೆ, ಬ್ರಾಹ್ಮಣನಾದ ರಾವಣ ಖಳನಾಯಕನಾಗಿದ್ದಾನೆ. ಹೀಗಾಗಿ ರಾಮನನ್ನು ನಾವು ಪೂಜಿಸುತ್ತೇವೆ. ಸಮಾಜದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಬ್ರಾಹ್ಮಣ ಸಮುದಾಯ ಮಹತ್ವದ ಪಾತ್ರವಹಿಸುತ್ತಿದೆ. ಬ್ರಾಹ್ಮಣರು ಸಾಂಪ್ರದಾಯಿಕ ವೃತ್ತಿಯನ್ನಷ್ಟೇ ಮಾಡದೆ, ಉದ್ಯಮಿಗಳಾಗುವತ್ತ ಗಮನಹರಿಸಬೇಕು. ಹವ್ಯಕ ಸಮಾಜವು ಶಿಸ್ತು ಬದ್ಧ ಸಮಾಜ. ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿ, ಪ್ರಮುಖ ಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.