ಸಾರಾಂಶ
ನಗರದ ಅರಮನೆ ಮೈದಾನದಲ್ಲಿ ಭಾನುವಾರದವರೆಗೆ ನಡೆಯಲಿರುವ ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಶುಕ್ರವಾರ ವಿದ್ಯುಕ್ತ ಚಾಲನೆ ದೊರೆಯಿತು.
ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿ ಭಾನುವಾರದವರೆಗೆ ನಡೆಯಲಿರುವ ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಶುಕ್ರವಾರ ವಿದ್ಯುಕ್ತ ಚಾಲನೆ ದೊರೆಯಿತು. ಹವ್ಯಕರ ಹಬ್ಬಕ್ಕೆ ಮೊದಲ ದಿನವೇ ಕಿಕ್ಕಿರಿದ ಸಂಖ್ಯೆಯಲ್ಲಿ ಸೇರಿದ್ದ ಸಮುದಾಯದ ಜನ ತಮ್ಮ ವಿಶಿಷ್ಠ ಸಂಸ್ಕೃತಿಯ ಅನಾವರಣಕ್ಕೆ ಸಾಕ್ಷಿಯಾದರು.
ಅಖಿಲ ಹವ್ಯಕ ಮಹಾಸಭಾದಿಂದ ಆಯೋಜಿಸಲಾಗಿರುವ ಈ ಹಬ್ಬಕ್ಕೆ ಎಲ್ಲ ಸಮುದಾಯದವರಿಗೂ ಆಹ್ವಾನ ನೀಡಿದ್ದು ಹವ್ಯಕರ ಆರೋಗ್ಯಪೂರ್ಣ ಭೋಜನ, ತಿಂಡಿ, ತಿನಿಸು ಸವಿಯಲು ಹಾಗೂ ಪ್ರತಿಭೆ, ಕಲೆ, ಸಂಸ್ಕೃತಿ ವೀಕ್ಷಿಸಲು ವಿವಿಧ ಸಮುದಾಯಗಳ ಗಣ್ಯರು, ಜನರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಸೇರಿ ವಿವಿಧ ಸಂತಶ್ರೇಷ್ಠರ ಸಾನ್ನಿಧ್ಯ ಹಾಗೂ ಕೇಂದ್ರ ಆಹಾರ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೇರಿ ದೇಶ-ವಿದೇಶಗಳ ಗಣ್ಯಮಾನ್ಯರು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ತರಲಾದ ಜ್ಯೋತಿಯಿಂದ ದೀಪ ಬೆಳಗುವ ಮೂಲಕ ಸಮ್ಮೇಳನ ಉದ್ಘಾಟನೆಗೊಂಡಿತು.
ತಮ್ಮ ಸಮುದಾಯದ ಹಬ್ಬಕ್ಕೆ ಬೆಂಗಳೂರು ಮಾತ್ರವಲ್ಲದೆ ಶಿರಸಿ, ಸಿದ್ದಾಪುರ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಮೊದಲಾದ ಭಾಗಗಳಿಂದ ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಿನವಿಡೀ ಪಾಲ್ಗೊಂಡರು. ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ, ಅದಕ್ಕೆ ಸ್ವಾಮೀಜಿಗಳು ಹಾಗೂ ಗಣ್ಯರಿಂದ ಪರಿಹಾರಾತ್ಮಕ ಸಲಹೆಗಳು ಹರಿದುಬಂದವು.
ಸಹಸ್ರ ಚಂದ್ರದರ್ಶನ
ಹವ್ಯಕ ಮಹಾಸಭೆ ಪ್ರಾರಂಭಗೊಂಡು 81 ವರ್ಷ 4 ತಿಂಗಳು ಪೂರೈಸಿದ್ದು, ಇದಕ್ಕೆ ಸಹಸ್ರ ಚಂದ್ರದರ್ಶನ ಎಂದು ಕರೆಯಲಾಗುತ್ತದೆ. ಅದರ ಅಡಿಯಲ್ಲೇ ಸಮ್ಮೇಳನ ಆಯೋಜಿಸಲಾಗಿದೆ. ಅಲ್ಲದೆ, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದ ಶ್ರೀ ರಾಮ ಕ್ಷೇತ್ರದಿಂದ ತರಲಾಗಿದ್ದ ಜ್ಯೋತಿಯಿಂದ ಸಮ್ಮೇಳನದ ಉದ್ಘಾಟನಾ ಜ್ಯೋತಿ ಬೆಳಗಿಸಿದ್ದು ವಿಶೇಷ.
ಪ್ರತಿ ವಿಭಾಗದಲ್ಲೂ 81 ಪ್ರಶಸ್ತಿ ಪ್ರದಾನ
ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹವ್ಯಕ ಸಮುದಾಯಕ್ಕೆ ಸೇರಿದ 81 ಮಂದಿಗೆ ಹವ್ಯಕ ಸಾಧಕರತ್ನ ಪ್ರಶಸ್ತಿ ಹಾಗೂ ಸಮಾಜದ 81 ಉತ್ತಮ ರೈತರಿಗೆ ಹವ್ಯಕ ಕೃಷಿರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹವ್ಯಕರ ಜನಸಂಖ್ಯೆ ಕುಸಿಯುತ್ತಿರುವುದರಿಂದ ಸಮುದಾಯದ ಪ್ರತಿ ದಂಪತಿ ಕನಿಷ್ಠ ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಅದರಲ್ಲಿ ಮೂರನೆಯ ಮಗುವಿನ ಅಥವಾ ಇನ್ನೂ ಹೆಚ್ಚಿನ ಮಕ್ಕಳು ಜನಿಸಿದರೆ ಅವರ ಹೊಣೆಯನ್ನು ರಾಮಚಂದ್ರಾಪುರ ಮಠ ವಹಿಸಿಕೊಳ್ಳಲಿದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನೀಡಿದ ಅಭಯ ಆಶೀರ್ವಾದ ಸಮುದಾಯದ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಬಳಿಕ ‘21ನೇ ಶತಮಾನದ ಹವ್ಯಕರು’ ಕುರಿತ ಗೋಷ್ಠಿಗಳಲ್ಲಿ ವಿದ್ವಾನ್ ಉಮಾಕಾಂತ ಭಟ್ ಕೆರೆಕೈ ಮತ್ತು ಡಾ.ರಾಮಕೃಷ್ಣ ಭಟ್ ಕೂಟೇಲು ಅವರು ಕ್ರಮವಾಗಿ ಹವ್ಯಕ ಸಂಸ್ಕೃತಿಯ ಸಂರಕ್ಷಣೆ ಮತ್ತು ಹವ್ಯಕ ಪರಂಪರೆಯ ವೈಜ್ಞಾನಿಕತೆ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಸಮಾಜಕ್ಕೆ ಹವ್ಯಕರ ಸಾರ್ವಕಾಲಿಕ ಕೊಡುಗೆಗಳು, ಆಹಾರ ಪದ್ಧತಿಯ ಶ್ರೇಷ್ಠತೆ, ಭಾಷಾ ವೈಶಿಷ್ಟ್ಯ, ಕಲಾ ಸಿರಿವಂತಿಕೆ, ಹವ್ಯಕರ ಬದುಕು ಮತ್ತು ಭವಿಷ್ಯ ವಿಷಯಗಳ ಕುರಿತು ಡಾ.ಸೀಮಾ ಭಟ್, ಡಾ.ಪಾದೇಕಲ್ಲು ವಿಷ್ಣು ಭಟ್, ಮೋಹನ್ ಹೆಗಡೆ ಹೆರವಟ್ಟಾ, ಅಭಿಧಾನಿ ಗಣೇಶ ಹೆಗಡೆ ಸೇರಿ ಸಮುದಾಯದ ಅನೇಕ ಗಣ್ಯರು ಬೆಳಕು ಚೆಲ್ಲಿದರು.
ಅಮೆರಿಕದಿಂದ ಬಂದಿದ್ದ ಉಷಾದೇವಿ ಕುಳೂರು ಅವರು, ಜಗದಗಲ ವ್ಯಾಪಿಸಿರುವ ಹವ್ಯಕರು ಕುರಿತು ಮಾತನಾಡಿದರು. ಹವ್ಯಕರು ಇಂದು ಜಗತ್ತಿನ ಅನೇಕ ಪ್ರಮುಖ ರಾಷ್ಟ್ರಗಳಲ್ಲಿ ನೆಲೆಯೂರಿದ್ದಾರೆ. ಹವ್ಯಕರ ಪಾಂಡಿತ್ಯ, ಬುದ್ಧಿವಂತಿಕೆ ಜಗತ್ತಿನಾದ್ಯಂತ ಪರಸರಿಸುತ್ತಿದೆ ಎಂದರು. ಇದಕ್ಕೂ ಮುನ್ನ ನಟ ರಮೇಶ್ ಅರವಿಂದ್ ಅವರು ಮಾಡಿದ ದಿಕ್ಸೂಚಿ ಭಾಷಣ ಗಮನ ಸೆಳೆಯಿತು. ಅಖಿಲ ಹವ್ಯಕ ಮಹಾಸಭಾಗೆ 81 ವರ್ಷ ತುಂಬಿದ ಅಂಗವಾಗಿ ಇದೇ ವೇಳೆ 81 ಕೃಷಿಕರಿಗೆ ‘ಹವ್ಯಕ ಕೃಷಿರತ್ನ’ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಲಾಯಿತು.
ಸಂಜೆ ಜನಪ್ರಿಯ ಹವ್ಯಕ ಕಲಾವಿದರು ಕನ್ನಡದ ಪ್ರಪ್ರಥಮ ನಾಟಕ ‘ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ’ ಪ್ರಸ್ತುಪಡಿಸಿದರು. ನಂತರ ಖ್ಯಾತ ಹವ್ಯಕ ಸಂಗೀತ ಕಲಾವಿದರು ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಗಾಯನ ನಡೆಸಿಕೊಟ್ಟರು. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರ ಗೌರವಾಧ್ಯಕ್ಷತೆ, ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಅವರ ಸಾರಥ್ಯದ ಸಮ್ಮೇಳನದಲ್ಲಿ ಮೊದಲ ದಿನದ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು.