‘ಭರವಸೆಯ ಹೆಜ್ಜೆಗಳು’ ಕೃತಿ ಲೋಕಾರ್ಪಣೆ

| Published : May 18 2024, 12:32 AM IST

ಸಾರಾಂಶ

ಹೊಸಸಂಜೆ ಪ್ರಕಾಶನದ 32ನೇ ಪ್ರಕಟಣೆ, ಶಿಕ್ಷಕಿ, ಲೇಖಕಿ ಪ್ರಜ್ವಲಾ ಶೆಣೈ ಅವರ ‘ಭರವಸೆಯ ಹೆಜ್ಜೆಗಳು’ ಕೃತಿ ಲೋಕಾರ್ಪಣೆ ಸಮಾರಂಭ ನಡೆಯಿತು. ಪ್ರಭಾವತಿ ಭಕ್ತ ಕೃತಿ ಬಿಡುಗಡೆಗೊಳಿಸಿ, ಲೇಖಕಿಗೆ ಶುಭಹಾರೈಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳಶಬ್ದಾಡಂಬರವಿಲ್ಲದ ಸಹಜ ನಿರೂಪಣೆಯ ಬರವಣಿಗೆ ಹೆಚ್ಚು ಅಪ್ಯಾಯಮಾನವಾಗಿ ಮನಸ್ಸನ್ನು ಗೆಲ್ಲುತ್ತದೆ. ವ್ಯಾವಹಾರಿಕ ಚಿಂತನೆಯಿಂದ ದೂರವಿದ್ದು, ಭಾಷೆ ವಿಷಯ ಶೈಲಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಸಾಹಿತ್ಯ ಶಾಶ್ವತವಾಗಿ ಉಳಿಯುತ್ತದೆ ಎಂದು ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಹೇಳಿದರು.

ಅವರು ಕಾರ್ಕಳ ಹೋಟೆಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ಹೊಸಸಂಜೆ ಪ್ರಕಾಶನದ 32ನೇ ಪ್ರಕಟಣೆ, ಶಿಕ್ಷಕಿ, ಲೇಖಕಿ ಪ್ರಜ್ವಲಾ ಶೆಣೈ ಅವರ ‘ಭರವಸೆಯ ಹೆಜ್ಜೆಗಳು’ ಕೃತಿ ಲೋಕಾರ್ಪಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಪ್ರಭಾವತಿ ಭಕ್ತ ಕೃತಿ ಬಿಡುಗಡೆಗೊಳಿಸಿ, ಲೇಖಕಿಗೆ ಶುಭಹಾರೈಸಿದರು.

ನಿವೃತ್ತ ಶಿಕ್ಷಕ ಗಣಪತಿ ಪೈ ಮುದ್ರಾಡಿ ಮಾತನಾಡಿ, ಬದುಕಿನ ಕಷ್ಟಕಾರ್ಪಣ್ಯ, ನೋವು ಸಂಕಟ ಸ್ವತಃ ಅನುಭವಿಸಿ ಮೂಡಿಬಂದ ಬರಹ ಜನಸಾಮಾನ್ಯರ ಮನಃಪಟಲದಲ್ಲಿ ಅಚ್ಚಳಿಯದೆ ನಿಲ್ಲುತ್ತದೆ ಎಂದರು.ಪ್ರಜ್ವಲಾ ಶೆಣೈ ಪ್ರಾಸ್ತಾವಿಕ ಮಾತನಾಡಿ, ಜೀವನದ ಹತಾಶೆ, ನಿರಾಸೆಗಳನ್ನು ಮೆಟ್ಟಿ ನಿಲ್ಲುವ ಛಲ ಮೈಗೂಡಿಸಿಕೊಂಡು ಅವೆಲ್ಲವನ್ನು ಬರಹರೂಪದಲ್ಲಿ ಕಟ್ಟಿಕೊಡುವ ಕಲೆ ಸಿದ್ಧಿಸಿಕೊಂಡರೆ ಉತ್ತಮ ಲೇಖಕರಾಗಿ ರೂಪುಗೊಳ್ಳಬಹುದು ಎಂದರು.

ಉದ್ಯಮಿ ಹರೀಶ ಶೆಣೈ, ಪ್ರಕಾಶಕ ಆರ್. ದೇವರಾಯ ಪ್ರಭು ಉಪಸ್ಥಿತರಿದ್ದರು.ಪ್ರತ್ಯುಷಾ ಶೆಣೈ ಸ್ವಾಗತಿಸಿದರು. ವಿಶ್ವಕುಮಾರ್ ಭಟ್ ಮುಂಡ್ಕೂರು ಕಾರ್ಯಕ್ರಮ ನಿರ್ವಹಿಸಿದರು.