ಬ್ಯಾಡಗಿ: ಸುಮಾರು ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ಪಟ್ಟಣದ ನೆಹರು ನಗರದಲ್ಲಿರುವ ಐತಿಹಾಸಿಕ ಸೋಮೇಶ್ವರ ದೇವಸ್ಥಾನವನ್ನು ಭವ್ಯವಾಗಿ ಮರು ನಿರ್ಮಾಣ ಮಾಡಲಾಗುವುದು ಎಂದು ಮಾಜಿ ಶಾಸಕ ಹಾಗೂ ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಹೇಳಿದರು.

ಪಟ್ಟಣದ ನೆಹರು ನಗರದಲ್ಲಿರುವ ಶಿಥಿಲಾವಸ್ಥೆಗೆ ತಲುಪಿದ್ದ ಸೋಮೇಶ್ವರ ದೇವಸ್ಥಾನವನ್ನು ಕೆಡವಿ ನೂತನವಾಗಿ ನಿರ್ಮಿಸಲು ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನೆಹರು ನಗರದ ಸೋಮೇಶ್ವರ ದೇವಸ್ಥಾನವು ಹಲವು ದಶಕಗಳ ಇತಿಹಾಸ ಹೊಂದಿದ್ದು, ಭಕ್ತರ ಆರಾಧನಾ ಕೇಂದ್ರವಾಗಿ ಪ್ರಸಿದ್ಧಿಯಾಗಿದೆ. ಕಾಲಕ್ರಮೇಣ ದೇವಸ್ಥಾನದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಭಕ್ತರ ಸುರಕ್ಷತೆಯನ್ನು ಗಮನ ದಲ್ಲಿಟ್ಟುಕೊಂಡು ಹಾಗೂ ಸ್ಥಳೀಯ ನಿವಾಸಿಗಳ ಅಭಿಪ್ರಾಯ ಸಂಗ್ರಹಿಸಿ ನೂತನ ದೇವಸ್ಥಾನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ನೂತನ ದೇವಸ್ಥಾನವನ್ನು ಸಾಂಪ್ರದಾಯಿಕ ಶೈಲಿಯಲ್ಲಿ, ಭವ್ಯ ಹಾಗೂ ಸುಂದರವಾಗಿ ನಿರ್ಮಿಸಲಾಗುವುದು. ಭಕ್ತರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಮುಂದಿನ ಪೀಳಿಗೆಗೂ ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ, ದೇವಸ್ಥಾನವು ಕೇವಲ ಪೂಜಾ ಸ್ಥಳವಲ್ಲ, ಸಮಾಜವನ್ನು ಒಗ್ಗೂಡಿಸುವ ಆಧ್ಯಾತ್ಮಿಕ ಕೇಂದ್ರವಾಗಿದೆ. ಎಲ್ಲ ಭಕ್ತರು ಸೇವಾ ಮನೋಭಾವದಿಂದ ಹಾಗೂ ಸಮರ್ಪಣಾ ಭಾವದಿಂದ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವೀರಯ್ಯ ಹಿರೇಮಠ, ದೇವಸ್ಥಾನ ಸಮಿತಿಯ ಗೌರವ ಅಧ್ಯಕ್ಷ ಸೋಮಶೇಖರ ಪಾಟೀಲ, ಅನಿಲ್ ದ್ಯಾವಕ್ಕಳವರ, ಪರಪ್ಪ ಯಕಲಾಸಪುರ, ರಾಮಣ್ಣ ಉಕ್ಕುಂದ, ಸಂತೋಷ್ ಮೂಲಿಮನಿ, ಆನಂದ ದ್ಯಾವಕ್ಕಳವರ, ಚಂದ್ರಶೇಖರ ಬಿದರಿ, ಸೋಮಣ್ಣ ಸಂಕಣ್ಣನವರ, ಬಸವರಾಜ ಯಲಿ, ಶಿವಯೋಗಿ ಹೊಸಮನಿ, ಮಾಲತೇಶ್ ಅರಳಿಮಟ್ಟಿ, ರಾಜು ಸಂಕಣ್ಣನವರ, ರವಿರಾಜ ಮುರನಾಳ, ಶಂಭುಲಿAಗಪ್ಪ ಮೂಲಿಮನಿ, ಅಮೋಘ ಎಲಿ, ವೀರೇಶ್ ಮತ್ತಿಹಳ್ಳಿ, ಶಂಬಣ್ಣ ಅಂಗಡಿ, ಸೇರಿದಂತೆ ಅನೇಕ ಭಕ್ತರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.