ಸವಣೂರು ತಾಲೂಕಿನ ಮಾರುತಿಪುರ ಗ್ರಾಮದಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿದ್ದರೂ ಸಹಿತ ಇದುವರೆಗೆ ಪಟ್ಟಾ ವಿತರಿಸದಿರುವುದು ಹಾಗೂ ಸರ್ಕಾರದ ಯಾವುದೇ ಸೌಲಭ್ಯಗಳು ತಲುಪದಿರುವುದನ್ನು ಖಂಡಿಸಿ ಗ್ರಾಮಸ್ಥರು ಸೋಮವಾರ ಹಮ್ಮಿಕೊಂಡಿದ್ದ ಎಸ್‌ಐಆರ್ ಪ್ರಕ್ರಿಯೆಯನ್ನು ಬಹಿಷ್ಕಾರ ಕೈಗೊಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸವಣೂರು: ತಾಲೂಕಿನ ಮಾರುತಿಪುರ ಗ್ರಾಮದಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿದ್ದರೂ ಸಹಿತ ಇದುವರೆಗೆ ಪಟ್ಟಾ ವಿತರಿಸದಿರುವುದು ಹಾಗೂ ಸರ್ಕಾರದ ಯಾವುದೇ ಸೌಲಭ್ಯಗಳು ತಲುಪದಿರುವುದನ್ನು ಖಂಡಿಸಿ ಗ್ರಾಮಸ್ಥರು ಸೋಮವಾರ ಹಮ್ಮಿಕೊಂಡಿದ್ದ ಎಸ್‌ಐಆರ್ ಪ್ರಕ್ರಿಯೆಯನ್ನು ಬಹಿಷ್ಕಾರ ಕೈಗೊಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ 304 ಎಕರೆ ಜಮೀನನ್ನು ಗ್ರಾಮಸ್ಥರು ನೂರಾರು ವರ್ಷಗಳಿಂದ ಸ್ವತಃ ಉಳುಮೆ ಮಾಡಿಕೊಂಡು ಬಂದಿದ್ದರೂ ಸಹಿತ ಉತಾರಗಳ ಕಾಲಂ 9ರಲ್ಲಿ ನವಜೀವನ ಕಲೆಕ್ಟಿವ್ ಕೋ-ಆಪ್ ಫಾರ್ಮಿಂಗ್ ಸಂಸ್ಥೆಯ ಚೇರ್ಮನ್ ಹೆಸರಿನಲ್ಲಿ ಇದ್ದು, ಮಾಲೀಕರ ಹೆಸರು ಕಾಲಂ 11 ಮತ್ತು 12ರಲ್ಲಿ ಬಂದಿರುವುದರಿಂದ ಸಾಗುವಳಿದಾರ ರೈತರಿಗೆ ಸರ್ಕಾರದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರು ಆಗ್ರಹಿಸಿದರು. ತಮ್ಮ ವಿವಿಧ ಬೇಡಿಕೆಗಳು ಈಡೇರುವವರೆಗೂ ಯಾವುದೇ ಕಾರಣಕ್ಕೂ ಮತದಾರರ ಪರಿಷ್ಕರಣೆ ಪ್ರಕ್ರಿಯೆಗೆ ಸಹಕರಿಸುವುದಿಲ್ಲ ಎಂದು ಪಟ್ಟು ಹಿಡಿದು ಗ್ರಾಮದಲ್ಲಿ ಪ್ರತಿಭಟನೆಗೆ ಮುಂದಾದರು.ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತಹಸೀಲ್ದಾರ್ ರವಿಕುಮಾರ್ ಕೊರವರ ಹಾಗೂ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಅವರು, ಪ್ರತಿಭಟನಾನಿರತ ಗ್ರಾಮಸ್ಥರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಮನವೊಲಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಪಟ್ಟು ಬಿಡದ ಗ್ರಾಮಸ್ಥರು ಅಧಿಕಾರಿಗಳ ಮನವಿಗೆ ಸೊಪ್ಪು ಹಾಕಲಿಲ್ಲ. ಇದರಿಂದ ಅಧಿಕಾರಿಗಳು ತಮ್ಮ ಕಚೇರಿಗಳಿಗೆ ಮರಳಿ ದೂರವಾಣಿ ಮೂಲಕ ಸ್ಥಳದಲ್ಲಿ ನಡೆದ ವಿಷಯಗಳನ್ನು ಹಿರಿಯ ಅಧಿಕಾರಿಗಳಿಗೆ ವಿವರಿಸಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ಗ್ರಾಮಸ್ಥರೊಂದಿಗೆ ಮಾತನಾಡಿ, ನಿಮ್ಮ ಹಕ್ಕನ್ನು ನೀವೇ ಕಳೆದುಕೊಳ್ಳುತ್ತಿದ್ದೀರಿ, ಕೂಡಲೇ ಎಸ್.ಐ.ಆರ್.ನಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಸರ್ಕಾರ ಗ್ರಾಮವನ್ನು ಕಂದಾಯ ಗ್ರಾಮ ಎಂದು ಘೋಷಿಸುವಾಗ, ಮತದಾರರ ಹಕ್ಕು ಇಲ್ಲದಿರುವುದನ್ನು ಗಮನಿಸಿ ಈ ವಾಸ ಸ್ಥಳದಲ್ಲಿ ಸುಮಾರು 75 ವರ್ಷಗಳ ಮತದಾನದ ಹಕ್ಕು ಹಾಗೂ ಮತದಾನದ ಹಕ್ಕುನ್ನು ಪ್ರಶ್ನಿಸಿದರೆ ಏನು ಮಾಡುತ್ತೀರಿ ಎಂದು ಎಚ್ಚರಿಸಿ, ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಕುಳಿತು ಬಗೆಹರಿಸಿಕೊಡುತ್ತೇನೆ ಎಂದರು.
ಇದು ಅರಣ್ಯ ಭೂಮಿಯಾಗಿದ್ದರಿಂದ ಈ ಸಮಸ್ಯೆಯನ್ನು ಕೂಡಲೇ ಬಗ್ಗೆ ಹರಿಸಲು ಅಸಾಧ್ಯ. ನೀವು ಕೂಡಾ ಕೋರ್ಟ್ ಮುಖಾಂತರ ಹೋರಾಟ ಮಾಡಬೇಕಾಗುತ್ತದೆ. ಈ ಗ್ರಾಮದಲ್ಲಿ ಸುಮಾರು 68 ಎಕರೆ ಭೂಮಿ ರೈತರ ಹೆಸರಿನಲ್ಲೇ ಡಿನೋಟಿಪೈ ಇದ್ದು ಅಂತಹವರಿಗೆ ಸರ್ಕಾರದ ಸೌಲಭ್ಯ ಸಿಗುತ್ತಿದೆ. ಅಂತಹ ದಾಖಲೆಗಳನ್ನು ಕ್ರೋಡಿಕರಣ ಮಾಡುವದು ಅವಶ್ಯವಿದೆ. ನವಜೀವನ ಕಲೆಕ್ಟಿವ್ ಕೋ-ಆಪ್ ಫಾರ್ಮಿಂಗ್ ಸಂಸ್ಥೆಯ ಚೇರ್ಮನ್ ಈ ಸೊಸೈಟಿಯ ನಿಮ್ಮ ಹಳೆಯ ದಾಖಲೆಗಳನ್ನು ಕ್ರೋಡಿಕರಣ ಮಾಡಿ ಕಂದಾಯ ಇಲಾಖೆಗೆ ದಾಖಲೆಗಳನ್ನು ಒದಗಿಸಿದಾಗ ಮಾತ್ರ ನಿಮ್ಮ ಸಮಸ್ಯೆಗಳು ಬಗೆಹರಿಸಲು ಸಲೀಸಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅರಣ್ಯ ಭೂಮಿಗೆ ಸಂಬಂಧಿಸಿದಂತೆ ತಾವು ಸದ್ಯಕ್ಕೆ ಏನೂ ಮಾಡಲಾಗುವುದಿಲ್ಲ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಹಾಗೂ ಅದನ್ನು ಸರ್ಕಾರದ ಹಂತದಲ್ಲೇ ಪ್ರಯತ್ನಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಗ್ರಾಮಸ್ಥರು ಕೇಳುತ್ತಿರುವ ಸ್ಮಶಾನಕ್ಕೆ ಬೇಕಾದ ಭೂಮಿಯನ್ನು ಕೂಡಲೇ ಮಂಜೂರು ಮಾಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಎಸ್‌ಐಆರ್ ಪ್ರಕ್ರಿಯೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ರವಿಕುಮಾರ ಕೊರವರ, ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ, ಗ್ರಾಮಸ್ಥರಾದ ಹುಲ್ಲಗಪ್ಪ ಅಲ್ಲಿಪೂರ, ಫಕ್ಕೀರಪ್ಪ ಬೆಳ್ಳಟ್ಟಿ, ಮಹಾದೇವಪ್ಪ ಬುಡ್ರಕಟ್ಟಿ, ಹೇಮಣ್ಣ ಸಾಲಿ, ತಿಪ್ಪಣ್ಣ ಸವಣೂರ, ಹನಮಂತಪ್ಪ ಹನಮಾಪೂರ, ಬಸವರಾಜ ಪೂಜಾರ, ಮಾರುತಿ ದುಂಡಶಿ, ಮಾರುತಿ ಮೈದೂರ, ದೀವಪ್ಪ ಹಿರೆಮನಿ, ಸೋಮಶೇಖರ ಸಾಲಿ, ಮಂಜುನಾಥ ಲಕ್ಮಾಪೂರ, ಹುಲಗಪ್ಪ ಕಬ್ಬೂರ, ಬಸವಣ್ಣೆಪ್ಪ ಬುಡ್ರಕಟ್ಟಿ, ಸಿದ್ರಾಮಪ್ಪ ಪೂಜಾರ, ಸುರೇಶ ಬೆಳ್ಳಟ್ಟಿ ಹಾಗೂ ಗ್ರಾಮಸ್ಥರು ಇದ್ದರು.