ಪ್ರತಿವರ್ಷ ಫೆಬ್ರವರಿ 4ರಂದು ಆಚರಿಸಲ್ಪಡುವ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯು ಉಡುಪಿಯ ಆಟೋ ಕ್ಲಬ್, ಜಾವಾ–ಯೆಜ್ಡಿ ಮೋಟಾರ್‌ಸೈಕಲ್ ಕ್ಲಬ್, ರಾಯಲ್ ಎನ್‌ಫೀಲ್ಡ್ ರೈಡರ್ಸ್ ಹಾಗೂ ಆಭರಣ ಮೋಟಾರ್ಸ್ ಸಹಯೋಗದೊಂದಿಗೆ ನಾವು ಒಟ್ಟಾಗಿ ಕ್ಯಾನ್ಸರ್ ವಿರುದ್ಧ ಜೀವನಕ್ಕಾಗಿ ಸವಾರಿ ಮಾಡುತ್ತೇವೆ ಎಂಬ ದ್ಯೇಯದೊಂದಿಗೆ ಬೈಕ್ ರ್ಯಾಲಿ
ಮಣಿಪಾಲ: ಪ್ರತಿವರ್ಷ ಫೆಬ್ರವರಿ 4ರಂದು ಆಚರಿಸಲ್ಪಡುವ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯು ಉಡುಪಿಯ ಆಟೋ ಕ್ಲಬ್, ಜಾವಾ–ಯೆಜ್ಡಿ ಮೋಟಾರ್‌ಸೈಕಲ್ ಕ್ಲಬ್, ರಾಯಲ್ ಎನ್‌ಫೀಲ್ಡ್ ರೈಡರ್ಸ್ ಹಾಗೂ ಆಭರಣ ಮೋಟಾರ್ಸ್ ಸಹಯೋಗದೊಂದಿಗೆ ನಾವು ಒಟ್ಟಾಗಿ ಕ್ಯಾನ್ಸರ್ ವಿರುದ್ಧ ಜೀವನಕ್ಕಾಗಿ ಸವಾರಿ ಮಾಡುತ್ತೇವೆ ಎಂಬ ದ್ಯೇಯದೊಂದಿಗೆ ಬೈಕ್ ರ್ಯಾಲಿಯನ್ನು ಆಯೋಜಿಸಿತು. ಈ ಬೈಕ್ ರ್‍ಯಾಲಿಯಲ್ಲಿ 100ಕ್ಕೂ ಹೆಚ್ಚು ಬೈಕ್ ಸವಾರರು ಉತ್ಸಾಹದಿಂದ ಭಾಗವಹಿಸಿದ್ದು, ಈ ರ್ಯಾಲಿ ಕ್ಯಾನ್ಸರ್ ರಹಿತ ಭವಿಷ್ಯದತ್ತ ಏಕತೆ, ಶಕ್ತಿ ಮತ್ತು ಬದ್ಧತೆಯ ಸಂಕೇತವಾಯಿತು. ರ್ಯಾಲಿಯು ಕಸ್ತೂರ್ಬಾ ಆಸ್ಪತ್ರೆಯಿಂದ ಹೊರಟು ಉಡುಪಿ ಮುಖ್ಯರಸ್ತೆಯ ಮೂಲಕ ಕಿನ್ನಿಮುಲ್ಕಿ ಸ್ವಾಗತ ಗೋಪುರದವರೆಗೆ ಹಾಗೂ ಅಲ್ಲಿಂದ ಮರಳಿ ಕಸ್ತೂರ್ಬಾ ಆಸ್ಪತ್ರೆಗೆ ಸಾಗಿ, ಕ್ಯಾನ್ಸರ್ ಜಾಗೃತಿ ಮತ್ತು ಸಮಯೋಚಿತ ವೈದ್ಯಕೀಯ ಚಿಕಿತ್ಸೆಯ ಮೂಲಕ ಜೀವ ಉಳಿಸಬಹುದೆಂಬ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿತು.ಈ ರ್‍ಯಾಲಿಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಹಸಿರು ನಿಶಾನೆ ತೋರಿದರು. ಈ ಜಾಗೃತಿ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ, ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಶಿಸ್ತು, ಸುರಕ್ಷಿತ ವಾಹನ ಚಾಲನೆ ಹಾಗೂ ಸಮುದಾಯದ ಸಹಕಾರ ಅತ್ಯಂತ ಮಹತ್ವದ್ದೆಂದು ಅವರು ಹೇಳಿದರು. ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿರುವುದಕ್ಕಾಗಿ ಕಸ್ತೂರ್ಬಾ ಆಸ್ಪತ್ರೆಯನ್ನು ಅವರು ಅಭಿನಂದಿಸಿದರು.ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಪ್ ಜೋಸ್ ಗೌರವ ಅತಿಥಿಯಾಗಿ ಆಗಮಿಸಿದ್ದರು. ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಹಾಗೂ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.ವೈದ್ಯಕೀಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಅನಂತ್ ಪೈ ಅವರು ವಿಶ್ವ ಕ್ಯಾನ್ಸರ್ ದಿನದ ಮಹತ್ವದ ಕುರಿತು ಮಾಹಿತಿ ನೀಡಿ, ಜಾಗೃತಿ, ಆರಂಭಿಕ ಪತ್ತೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಇತ್ತೀಚಿನ ಪ್ರಗತಿಗಳ ಬಗ್ಗೆ ವಿವರಿಸಿದರು.