ಕನ್ನಡಪ್ರಭ ವಾರ್ತೆ ಮಳವಳ್ಳಿ
ಪವಾಡ ಪುರುಷ ಧರೆಗೆ ದೊಡ್ಡವರ ಬೊಪ್ಪೇಗೌಡನಪುರ (ಬಿ.ಜಿ.ಪುರ) ಮಂಟೇಸ್ವಾಮಿ ಮಠದ ಮಠಾಧಿಪತಿ ಶ್ರೀ ಜ್ಞಾನಾನಂದ ಚೆನ್ನೇರಾಜೇ ಅರಸ್ ಸ್ವಾಮೀಜಿ ಅವರು 60 ವಸಂತಗಳ ಪೂರೈಕೆ, ಅವರ ಪುತ್ರ ಮುಂದಿನ ಉತ್ತರಧಿಕಾರಿ ಹಿತೇಶ್ ಅರಸ್ ಅವರಿಗೆ 30 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಇಬ್ಬರ ಜನ್ಮದಿನವನ್ನು ಬುಧವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಬುಧವಾರ ಬೆಳಗ್ಗೆ ಶ್ರೀಜ್ಞಾನಾನಂದ ಚೆನ್ನೇರಾಜೇ ಅರಸ್ ಅವರು ಮಠದ ಆವರಣದಲ್ಲಿನ ಶ್ರೀಮಂಟೇಸ್ವಾಮಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಮಠದ ಬಸವ, ಫಲಾರದಯ್ಯನ ಗದ್ದುಗೆ ಹಾಗೂ ಉರಿಗದ್ದಿಗೆಗೂ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯದಲ್ಲಿ ಮಠಾಧೀಶರ ಧರ್ಮಪತ್ನಿ ಸನ್ಮತಿ ಅವರು ಪಾಲ್ಗೊಂಡಿದ್ದರು.
ಬಳಿಕ ಬಿ.ಜಿ.ಪುರ ಸುತ್ತಮುತ್ತಲಿನ ಪ್ರಮುಖ ದೇವಾಲಯಗಳು ಹಾಗೂ ಮುಟ್ಟನಹಳ್ಳಿ ತೋಪಿನಲ್ಲಿರುವ ಶ್ರೀದೊಡ್ಡಮ್ಮ ತಾಯಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಠದ ಆವರಣದಲ್ಲಿ 5 ಸಂಸ್ಥಾನ ಮಠದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೀಲಗಾರರ ಪರಂಪರೆಯ ಮುಖಂಡರು, ಮಠದ ಸಿಬ್ಬಂದಿ ಹಾಗೂ ಭಕ್ತರ ಸಮ್ಮುಖದಲ್ಲಿ ಮಠಾಧೀಶರು ಬೃಹತ್ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ 60ನೇ ಹುಟ್ಟುಹಬ್ಬ ಆಚರಿಸಿಕೊಂಡರು.ಈ ವೇಳೆ ಭಕ್ತರು ಹಾಗೂ ಸಿಬ್ಬಂದಿ ಬೃಹತ್ ಪ್ರಮಾಣದ ಹೂ ಮಳೆಗರೆದು ಶ್ರೀಗಳನ್ನು ಸನ್ಮಾನಿಸಿ ಗೌರವಿಸಿದರು. ಕುಟುಂಬದವರು ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಈ ವೇಳೆ ಮಾತನಾಡಿದ ಶ್ರೀಜ್ಞಾನಾನಂದ ಚೆನ್ನೇರಾಜೇ ಅರಸ್, ಸದಾ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿರುವ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಆದರೆ, 60 ವಸಂತ ಪೂರೈಸಿದ ಈ ಸಂದರ್ಭದಲ್ಲಿ ನೀಲಗಾರರು, ಮಠದ ಸಿಬ್ಬಂದಿ ಹಾಗೂ ಭಕ್ತರು ಬೃಹತ್ ವೇದಿಕೆ ನಿರ್ಮಿಸಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿರುವುದು ಅವರ ಪ್ರೀತಿ, ಅಭಿಮಾನಕ್ಕೆ ಸಾಕ್ಷಿ. ಇದರಿಂದ ಹೃದಯ ತುಂಬಿ ಬಂದಿದೆ ಎಂದು ಭಾವುಕರಾದರು.
ಎಲ್ಲ ನೀಲಗಾರರಿಗೆ ಶ್ರೀಮಂಟೇಸ್ವಾಮಿ ಒಳಿತನ್ನು ಮಾಡಲಿ. ಅವರೆಲ್ಲ ಸುಖ, ನೆಮ್ಮದಿಯಿಂದ ಬಾಳಲಿ. ತಮ್ಮ ತಮ್ಮ ಗ್ರಾಮಗಳಲ್ಲಿ ಉತ್ತಮ ಸಮಾಜ ಸೇವಾ ಕಾರ್ಯಗಳನ್ನು ಮಾಡಿ ಒಳ್ಳೆಯ ಹೆಸರು ಗಳಿಸಿ ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು.
ಶ್ರೀಗಳ ಪುತ್ರ ಹಿತೇಶ್ ರಾಜೇಅರಸ್ ಮಾತನಾಡಿ, ಪೀಠಾಧೀಶರ ಜನ್ಮದಿನದ ಅಂಗವಾಗಿ ಭಕ್ತರಿಗೆ ಪ್ರಸಾದ ವಿನಿಯೋಗ, ಶಾಲಾ ಮಕ್ಕಳಿಗೆ ಲೇಖನಿ ಸಾಮಗ್ರಿ ಹಾಗೂ ಸಿಹಿ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀಗಳ ಸಹೋದರರಾದ ಸಂಜಯ್ ರಾಜೇಅರಸ್, ಚೇತನ್ ರಾಜೇಅರಸ್ ಸೇರಿದಂತೆ ಹಲವಾರು ಕುಟುಂಬಸ್ಥರು, ನೀಲಗಾರರ ಪರಂಪರೆಯ ಮುಖಂಡರು, ಮಠದ ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ಬಳಿಕ ಬಿ.ಜಿ. ಪುರ ಹಾಗೂ ಮುಟ್ಟನಹಳ್ಳಿ ಶಾಲೆಗಳಿಗೆ ತೆರಳಿದ ಮಠಾಧೀಶರು ಮಕ್ಕಳಿಗೆ ಲೇಖನಿ ಸಾಮಗ್ರಿ ಹಾಗೂ ಸಿಹಿ ವಿತರಿಸಿದರು.