ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಪ್ರತ್ಯೇಕವಾಗಿ ಶನಿವಾರ ಸಂಭವಿಸಿದ 3 ಪ್ರತ್ಯೇಕ ಅಪಘಾತಗಳಲ್ಲಿ ಖಾಸಗಿ ನರ್ಸಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ 6 ಜನರು ಮೃತಪಟ್ಟಿದ್ದಾರೆ.

ಮೈಸೂರು ರಸ್ತೆಯ ಆರ್.ಆರ್‌.ದಂತ ಮಹಾವಿದ್ಯಾಲಯ ಸಮೀಪ ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿಗಳು ಅಸುನೀಗಿದ್ದಾರೆ. ಕೆಂಗೇರಿ ನಿವಾಸಿಗಳಾದ ಅತುಲ್ (21) ಹಾಗೂ ಗೌರಿಶಂಕರ್ ಮೃತರು. ರಾಮನಗರದ ಕಡೆಗೆ ತಮ್ಮ ಸ್ನೇಹಿತರ ಜತೆ ಹೋಗಿ ಅವರು ನಸುಕಿನ 2 ಗಂಟೆಯಲ್ಲಿ ಮನೆಗೆ ಮರಳುವಾಗ ಈ ಅವಘಡ ಸಂಭವಿಸಿದೆ.

ಮೃತರು ಮೂಲತಃ ಕೇರಳದವರಾಗಿದ್ದು, ಕೆಂಗೇರಿಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ಮೈಸೂರು ರಸ್ತೆಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ 4ನೇ ವರ್ಷದಲ್ಲಿ ಅತುಲ್ ಹಾಗೂ ಗೌರಿಶಂಕರ್ ಓದುತ್ತಿದ್ದರು. ರಾಮನಗರ ಕಡೆಗೆ ಶುಕ್ರವಾರ ರಾತ್ರಿ 3 ಬೈಕ್‌ಗಳಲ್ಲಿ 6 ಮಂದಿ ಹೋಗಿದ್ದು, ಒಂದು ಬೈಕ್‌ನಲ್ಲಿ ಅತುಲ್ ಹಾಗೂ ಗೌರಿಶಂಕರ್ ಇದ್ದರು. ಅಲ್ಲಿಂದ ನಸುಕಿನ 2 ಗಂಟೆಗೆ ಮರಳುವಾಗ ಸವಾರನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಬೈಕ್ ಅಪ್ಪಳಿಸಿದೆ. ಘಟನೆಯಲ್ಲಿ ಗಾಯಗೊಂಡು ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಾರ್ಪೆಂಟರ್ ಸಾವು:


ಮೈಸೂರು ರಸ್ತೆಯಲ್ಲಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಕಾರ್ಪೆಂಟರ್‌ವೊಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ. ಯಲಹಂಕ ನಿವಾಸಿ ಸುಖ್‌ದೇವ್‌ (45) ಮೃತ. ಈ ಘಟನೆಯಲ್ಲಿ ಮೃತರ ನಾಲ್ವರು ಸಂಬಂಧಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಜಸ್ಥಾನ ಮೂಲದ ಸುಖ್‌ ದೈವ್ ಅವರು, ನಗರದಲ್ಲಿ ಕಾರ್ಪೆಂಟರ್ ಆಗಿದ್ದರು. ಮೈಸೂರಿಗೆ ಕೆಲಸದ ನಿಮಿತ್ತ ಸಂಬಂಧಿಕರ ಜತೆ ಕಾರಿನಲ್ಲಿ ತೆರಳುತ್ತಿದ್ದರು. ಆಗ ಕೆಂಗೇರಿ ದಾಟಿ ಮೈಸೂರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬೈಕ್‌ಗಳಿಗೆ ಗುದ್ದಿ ಅವರ ಕಾರು ಪಲ್ಟಿಯಾಗಿ ಸಾವನ್ನಪ್ಪಿದ್ದಾರೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಗಳು ದಾಖಲಾಗಿವೆ.

ಶಾಲಾ ವಾಹನ ಡಿಕ್ಕಿಯಾಗಿ

ತಾಯಿ ಸಾವು, ಮಗಳು ಪಾರು

ಖಾಸಗಿ ಶಾಲಾ ವಾಹನ ಡಿಕ್ಕಿಯಾಗಿ ಸ್ಕೂಟರ್‌ನಲ್ಲಿದ್ದ ತಾಯಿ ಮೃತಪಟ್ಟು ಮಗಳು ಪ್ರಾಣಪಾಯದಿಂದ ಪಾರಾಗಿರುವ ಘಟನೆ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಲ್ಲೂರಹಳ್ಳಿ ನಿವಾಸಿ ಕಾಂತಾ (42) ಮೃತ ದುರ್ದೈವಿ. ಮೃತಳ ಪುತ್ರಿ ನೇಹಾಗೆ (16) ಸಣ್ಣಪುಟ್ಟ ಗಾಯವಾಗಿದ್ದು, ಸುರಕ್ಷಿತವಾಗಿದ್ದಾಳೆ. ತಮ್ಮ ಮಗಳನ್ನು ಕಾಲೇಜಿಗೆ ಬಿಡಲು ಸ್ಕೂಟರ್‌ನಲ್ಲಿ ಕಾಂತಾ ತೆರಳುವಾಗ ಈ ಅವಘಡ ಸಂಭವಿಸಿದೆ. ಶಾಲಾ ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯಲ್ಲಿ ಕಾಂತಾ ನೌಕರಿಯಲ್ಲಿದ್ದರು. ತಮ್ಮ ಪತಿ ಸೈಯದ್ ಹಾಗೂ ಪುತ್ರಿ ನೇಹಾ ಜತೆ ಅವರು ವಾಸವಾಗಿದ್ದರು. ವೈಟ್‌ಫೀಲ್ಡ್ ಸಮೀಪದ ಖಾಸಗಿ ಕಾಲೇಜಿನಲ್ಲಿ ಅವರ ಪುತ್ರಿ ಪ್ರಥಮ ವರ್ಷದ ಪಿಯುಸಿಯಲ್ಲಿ ಓದುತ್ತಿದ್ದು, ಪ್ರತಿ ದಿನ ಕಾಲೇಜಿಗೆ ಮಗಳನ್ನು ಕಾಂತಾ ಬಿಟ್ಟು ಬರುತ್ತಿದ್ದರು. ಅಂತೆಯೇ ಶನಿವಾರ ಬೆಳಗ್ಗೆ ಸಹ ಅವರು ತೆರಳಿದ್ದಾರೆ. ಆಗ ಸಿದ್ದಾಪುರದ ಮೀನಾಕ್ಷಿ ಲೇಔಟ್‌ ಬಳಿ ಅವರ ಸ್ಕೂಟರ್‌ಗೆ ಖಾಸಗಿ ಶಾಲಾ ವಾಹನ ಡಿಕ್ಕಿಯಾಗಿದೆ. ಈ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡು ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಜ್‌ ಕಾರ್‌ ಜಾಲಿ ರೈಡ್‌ಗೆ ಇಬ್ಬರು ಬಲಿ

ಕನ್ನಡಪ್ರಭ ವಾರ್ತೆ ಹೊಸಕೋಟೆ

ಜಾಲಿ ರೈಡ್‌ ವೇಳೆ ಬೆಂಜ್‌ ಕಾರು ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಯುವಕ-ಯುವತಿ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಹುಲ್ಲೂರು ಬಳಿಯ ಉಪನಗರ ವರ್ತುಲ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರಿನ ಕಮ್ಮನಹಳ್ಳಿ ಮೂಲದ ಶಾಜಿಯಾ ಶೇಖ್ (28) ಹಾಗೂ ಎಚ್‌ಬಿಆರ್ ಲೇಔಟ್ ನಾಗವಾರ ನಿವಾಸಿ ರಿಜ್ವಾನ್ (30) ಮೃತರು. ಶನಿವಾರ ಮುಂಜಾನೆ 3 ಗಂಟೆಗೆ ಶಾಜಿಯಾ ಹಾಗೂ ರಿಜ್ವಾನ್ ದೇವನಹಳ್ಳಿ ಕಡೆಯಿಂದ ಹೊಸಕೋಟೆ ಕಡೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಜಾಲಿ ರೈಡ್ ಬಂದಿದ್ದು, ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಸ್ಥಳದಲ್ಲೇ ಯುವಕ-ಯುವತಿ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಬೆಂಜ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸುಮಾರು 20 ಅಡಿ ದೂರದಲ್ಲಿ ಸೇತುವೆ ಕೆಳಗೆ ನೀರು ನಿಂತಿದ್ದ ಮೋರಿಯಲ್ಲಿ ರಿಜ್ವಾನ್ ಮೃತ ದೇಹ ಪತ್ತೆಯಾಗಿದೆ. ಈ ಸಂಬಂಧ ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಹಾಜಿಯಾ ಕಮ್ಮನಹಳ್ಳಿ ಹಾಗೂ ರಿಜ್ವಾನ್ ಎಚ್‌ಬಿಆರ್ ಲೇಔಟ್‌ನ ನಾಗವಾರ ನಿವಾಸಿಗಳಾಗಿದ್ದು, ರಿಜ್ವಾನ್ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದ.

ಸಂದರ್ಶನಕ್ಕೆ ಹೋಗುತ್ತಿದ್ದ ಯುವತಿ ಲಾರಿ ಡಿಕ್ಕಿಗೆ ಬಲಿ

ಹೊಸಕೋಟೆ: ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿಯಾಗಿ ಬೈಕ್‌ ಹಿಂಬದಿ ಕುಳಿತ್ತಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೋಲಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. ಮೋನಿಷಾ(21) ಮೃತ ಯುವತಿ. ಈಕೆಯ ಸ್ನೇಹಿತ ಪ್ರೀತಮ್(22) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಒರಿಸ್ಸಾ ಮೂಲದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದರು. ಕೋಲಾರ ಜಿಲ್ಲೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಹೋಂಡಾ ಕಂಪನಿಯಲ್ಲಿ ಉದ್ಯೋಗ ಅರಸಿ ಜಾಬ್ ಸಂದರ್ಶನಕ್ಕೆ ತೆರಳುತ್ತಿದ್ದಾಗ ಹಿಂಬದಿಯಿಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಮೋನಿಷಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಹೊಸಕೋಟೆ ಸಂಚಾರ ಠಾಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.