ಬ್ಯಾಡಗಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ನೀಡಲಾಗುವ 2025-26ನೇ ಸಾಲಿನ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ತಾಲೂಕಿನ ಬಿಸಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಿಕ್ಷಕ ಸಿಬ್ಬಂದಿ ಎಸ್‌ಡಿಎಂಸಿ ಸದಸ್ಯರನ್ನು ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷ ಶಂಭುಲಿಂಗಪ್ಪ ಯಲಿಗಾರ, ನಗರ ಮತ್ತು ಹಳ್ಳಿ ಶಾಲೆಗಳ ನಡುವೆ ಮೂಲಸೌಕರ್ಯಗಳಲ್ಲಿ ವ್ಯತ್ಯಾಸ ಹಾಗೂ ತಾರತಮ್ಯಗಳಿವೆ. ಶುದ್ಧ ಕುಡಿಯುವ ನೀರು, ನಿರಂತರ ವಿದ್ಯುತ್ ಅವಶ್ಯಕತೆಗೆ ಅನುಗುಣವಾಗಿ ಪ್ರಯೋಗಾಲಯ ಸೇರಿದಂತೆ ಸೌಕರ್ಯಗಳನ್ನು ಹೊಂದಿಲ್ಲ. ಹೀಗಾಗಿ, ಗ್ರಾಮೀಣ ಪ್ರದೇಶದ ಬಹುತೇಕ ಸರ್ಕಾರಿ ಶಾಲೆಗಳು ಇನ್ನೂ ಕ್ರಿಯಾತ್ಮಕವಾಗಿ ಹಾಗೂ ರಚನಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಖಾಸಗಿ ಶಾಲೆಗಳ ಪೈಪೋಟಿ

ಗ್ರಾಮೀಣ ಪ್ರದೇಶದಲ್ಲಿನ ಶಿಕ್ಷಣ ವ್ಯವಸ್ಥೆಯ ಸುಧಾರಣೆಯನ್ನು 21ನೇ ಶತಮಾನದ ಬೇಡಿಕೆಗಳನ್ನು ಪೂರೈಸುವಂತಹ ಕಲಿಕಾ ಸಾಮರ್ಥ್ಯವನ್ನು ಮಕ್ಕಳಲ್ಲಿ ಅಳವಡಿಸಬೇಕಾಗಿದೆ. ಆದರೆ, ಖಾಸಗಿ ಶಾಲೆಗಳ ಪೈಪೋಟಿಯಿಂದ ಸರ್ಕಾರಿ ಶಾಲೆಗಳನ್ನು ಮುನ್ನಡೆಸುವುದೇ ಹೈರಾಣಾಗಿದೆ. ಆದರೆ, ಗ್ರಾಮದ ಗುರು ಹಿರಿಯರು, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಶಿಕ್ಷಣ ಪ್ರೇಮಿಗಳು ಹಾಗೂ ದಾನಿಗಳ ಸಹಕಾರದಿಂದ ನಮ್ಮೂರಿನ ಶಾಲೆಗೆ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ ಬಂದಿದ್ದು ಬಿಸಲಹಳ್ಳಿ ಗ್ರಾಮಸ್ಥರು ಶಿಕ್ಷಣದ ಏಳಿಗೆಗಾಗಿ ಸದಾಕಾಲ ಹಗಲಿರುಳು ಶ್ರಮಿಸುತ್ತೇವೆ ಎಂದರು.ಸರ್ಕಾರಿ ಶಾಲೆಗೆ ಕಳಿಸಿಕೊಡಿ

ಮುಖ್ಯ ಶಿಕ್ಷಕ ಐ.ಬಿ. ಜ್ಯೋತಿ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಅಕ್ಷರ ಜ್ಞಾನವಲ್ಲ. ವ್ಯಕ್ತಿಯ ಶಾರೀರಿಕ ಮಾನಸಿಕ ಬೌದ್ಧಿಕ ಮತ್ತು ನೈತಿಕ ವಿಕಾಸಕ್ಕೆ ಅಗತ್ಯವಾದ ಜ್ಞಾನ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವುದೇ ಶಿಕ್ಷಣದ ಮೂಲ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪಾಲಕರು ಹಿಂದು ಮುಂದೆ ನೋಡದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದರು.

ಈ ವೇಳೆ ಗ್ರಾಮಸ್ಥರಾದ ಶಂಕರಗೌಡ ಪಾಟೀಲ, ಹೇಮಂತ ಶೆಟ್ಟರ, ವಾಸಪ್ಪ ಬೆಳಕೇರಿ, ಬಸವರಾಜ ಕಾಕೋಳ, ದುಂಡೆಪ್ಪ ಜ್ಯೋತಿ, ಲೋಕೇಶಪ್ಪ ಮಾಗನೂರ, ಬಸವರಾಜ ಮುಚ್ಚಟ್ಟಿ, ಸಹ ಶಿಕ್ಷಕರಾದ ರಾಜು ದೇವಗಿರಿಮಠ, ಮಂಗಳಾ ಕಂಬಿ, ವೀರಮ್ಮ ಮಠದ, ಅಂಬಿಕಾ ಪವಾರ, ಶಂಕರ ಕಿಚಡಿ, ಮಂಜುಳಾ ಶೆದಿಯಣ್ಣನವರ, ಎ.ಸಿ. ರೂಪಾ, ವಿಜಯ ಶಿಡಗನಾಳ ಸೇರಿದಂತೆ ಇನ್ನಿತರರಿದ್ದರು.