ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಬಿಜೆಪಿ ಸರ್ಕಾರವು ಯುವ ಜನಾಂಗಕ್ಕೆ ದೊಡ್ಡ ಮಟ್ಟದ ವಂಚನೆ ಮಾಡಿದೆ. ಕಾಂಗ್ರೆಸ್ ಪಕ್ಷ ಯುವ ಜನಾಂಗದ ಏಳಿಗೆಗೆ ಬದ್ಧವಾಗಿದ್ದು, ಪಕ್ಷದ ವಿವಿಧ ಹುದ್ದೆಗಳಲ್ಲೂ ಯುವಕರಿಗೆ ಆದ್ಯತೆ ನೀಡಿ ಯುವಶಕ್ತಿ ಬೆಳೆಸುತ್ತೇವೆ ಎಂದು ಎಐಸಿಸಿ ವೀಕ್ಷಕ ಚರಣ್ ಸಿಂಗ್ ಸಪ್ರಾ ತಿಳಿಸಿದ್ದಾರೆ.ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕಾತಿ, ತಳಮಟ್ಟದಲ್ಲಿ ಪಕ್ಷ ಸಂಘಟನೆ ಕುರಿತು ರಾಜ್ಯಾದ್ಯಂತ ‘ಸಂಘಟನಾ ಸೃಜನ್ ಅಭಿಯಾನ’ ಯಶಸ್ವಿಯಾಗಿ ನಡೆಯುತ್ತಿದೆ. ಈ ಬಗ್ಗೆ ಹೈಕಮಾಂಡ್‌ಗೆ ಅಂತಿಮ ವರದಿ ನೀಡುತ್ತೇವೆ ಎಂದರು.
ದೇಶದಲ್ಲಿ ಭ್ರಷ್ಟಾಚಾರ, ನಿರಂತರ ಬೆಲೆ ಏರಿಕೆ, ನೀಟ್ ಹಗರಣ, ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ಬಿಜೆಪಿಯು ದೇಶವನ್ನು ಹಾಳು ಮಾಡುತ್ತಿದೆ. ಅಭಿವೃದ್ಧಿಗೆ ಆದ್ಯತೆ ನೀಡದೆ ಯುವ ಜನಾಂಗ, ಪದವಿಧರರ ಉದ್ಯೋಗ ಕಸಿದು ಬಿಜೆಪಿ ಮೋಸ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಯುವಕರ ಸರ್ವತೋಮುಖ ಅಭಿವೃದ್ದಿ-ಏಳಿಗೆಗಾಗಿ ಕಾಂಗ್ರೆಸ್ ಪಕ್ಷವು ಯುವ ಜನಾಂಗಕ್ಕೆ ನ್ಯಾಯ ಒದಗಿಸುವ ಕೆಲಸ ಕಾಂಗ್ರೆಸ್ ಮಾಡಲಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ, ಮಾಹಿತಿಯನ್ನು ನೀಡಬಹುದು. ಕಾರ್ಯಕರ್ತರ ಅಭಿಲಾಷೆಯಂತೆ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತೇವೆ. ಇದಕ್ಕಾಗಿ ಶೋಷಿತರು, ಬಡವರು, ರೈತರ ಪರ ಕೆಲಸ ಮಾಡುವ ಕಾರ್ಯಕರ್ತರ ತಂಡ ಕಟ್ಟಲು ಅಭಿಯಾನ ನಡೆಸಲಾಗುತ್ತಿದೆ ಎಂದು ಚರಣ್ ಸಿಂಗ್ ಹೇಳಿದರು. ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಮಾಜಿ ಶಾಸಕ ನಂಜುಂಡಸ್ವಾಮಿ ಹಾಜರಿದ್ದರು.