ನೀರಾವರಿ ಸಲಹಾ ತಜ್ಞ ಕನ್ನಯ್ಯ ನಾಯ್ಡು ಪ್ರಕಾರ ಬೇಸಿಗೆ ಬೆಳೆಗೆ ನೀರು ಸರಬರಾಜು ಮಾಡಬಹುದು ಎಂದು ಸರ್ಕಾರಕ್ಕೆ ವರದಿ ನೀಡಿದರು.

ಸಿರುಗುಪ್ಪ: ನಗರದಲ್ಲಿ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.ಮಾಜಿ ಶಾಸಕ ಎಂ‌.ಎಸ್. ಸೋಮಲಿಂಗಪ್ಪ ಮಾತನಾಡಿ, ಬಳ್ಳಾರಿ, ರಾಯಚೂರು, ಕೊಪ್ಪಳ ಭಾಗದ ರೈತರ ಎರಡನೇ ಬೆಳೆಗೆ ನೀರು ಒದಗಿಸಬೇಕು. ಇಲ್ಲವಾದರೆ ಪ್ರತಿ ಎಕರೆಗೆ ₹ 25 ಸಾವಿರ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿದರು.

ನೀರಾವರಿ ಸಲಹಾ ತಜ್ಞ ಕನ್ನಯ್ಯ ನಾಯ್ಡು ಪ್ರಕಾರ ಬೇಸಿಗೆ ಬೆಳೆಗೆ ನೀರು ಸರಬರಾಜು ಮಾಡಬಹುದು ಎಂದು ಸರ್ಕಾರಕ್ಕೆ ವರದಿ ನೀಡಿದರು. ಸರ್ಕಾರ ಮಾತ್ರ ರೈತರಿಗೆ ಗೇಟ್ ನೆಪದಲ್ಲಿ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿದರು.

ನಮ್ಮ ರಾಜ್ಯ ಭಾಗದ ನೀರು ಇಲ್ಲವಂತೆ, ಆಂಧ್ರಪ್ರದೇಶದ ಭಾಗದ ನೀರು ಮಾತ್ರ ಇದೆ ಎಂದು ಅಧಿಕಾರಿಗಳು ಹೇಳುತ್ತಿರುವುದು ಎಷ್ಟು ಸರಿ? ಆದರೆ ನದಿಗೆ ಮತ್ತು ಕಾಲುವೆ ಮೂಲಕ ನೀರು ಪೋಲಾಗುತ್ತಿದೆ. ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಆಡಳಿತ ಕುಸಿಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಖರ್ಗೆ ಭೇಟಿ ಹೋದರೆ, ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗುತ್ತಿದ್ದಾರೆ ಎಂದರು.

ಕಳೆದ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ನಷ್ಟ ಅನುಭವಿಸಿದ ರೈತರ ಬೆಳೆಗಳಿಗೆ ಪರಿಹಾರ ನೀಡಬೇಕು. ಮೆಕ್ಕೆಜೋಳ ಮಾರುಕಟ್ಟೆಯಲ್ಲಿ ₹15-17 ಸಾವಿರಗೆ ಮಾರಾಟವಾಗುತ್ತಿದೆ. ₹35 ಸಾವಿರ ಬೆಂಬಲ ಬೆಲೆ ನೀಡಬೇಕು. ಎರಡನೇ ಬೆಳೆಗೆ ನೀರು ಬಿಡಿ ಇಲ್ಲವಾದರೆ ₹25 ಸಾವಿರ ಬೆಳೆ ಪರಿಹಾರ ನೀಡದಿದ್ದರೆ ಬೆಳಗಾವಿ ಅಧಿವೇಶನ ನಡೆಯದಂತೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಘೋಷ ಫಲಕಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಜಿಲ್ಲಾ ಯುವಮೋರ್ಚ ಅಧ್ಯಕ್ಷ ಎಂ.ಎಸ್.ಸಿದ್ದಪ್ಪ, ಬಿಜೆಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ಕೆ.ಮಲ್ಲಿಕಾರ್ಜುನ ಸ್ವಾಮಿ, ಮುಖಂಡ ಟಿ.ಧರಪ್ಪ ನಾಯಕ ಮಾತನಾಡಿದರು.

ನಂತರ ತಹಶೀಲ್ದಾರ ಗೌಸಿಯ ಬೇಗಂ ಅವರಿಗೆ ಮನವಿ ಸಲ್ಲಿಸಿದರು. ಬಿಜೆಪಿ ಪಕ್ಷದ ತಾಲೂಕು ಕಚೇರಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಯೊಂದಿಗೆ ಮಹಾತ್ಮ ಗಾಂಧಿ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಯಿತು.