ರೈತರು ತಮ್ಮ ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಒಕ್ಕೂಟದ ಸಿಹಿ ತಿನಿಸುಗಳನ್ನೇ ಬಳಕೆ ಮಾಡಿದರೆ, ಒಕ್ಕೂಟದ ಅಭಿವೃದ್ಧೀಗೆ ಶ್ರಮಿಸಿದಂತಾಗುತ್ತದೆ. ಅದರ ಲಾಭದ ಹಣ ಒಂದಲ್ಲಾ ಒಂದು ರೀತಿಯಲ್ಲಿ ಮತ್ತೆ ರೈತರಿಗೇ ಸೇರುತ್ತದೆ. ಹಾಗಾಗಿ ಎಲ್ಲಾ ರೈತರು ಒಕ್ಕೂಟದ ಸಿಹಿ ಪದಾರ್ಥಗಳನ್ನು ಬಳಕೆ ಮಾಡಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತರು ಡೈರಿಗೆ ಗುಣಮಟ್ಟದ ಹಾಲು ಪೂರೈಕೆ ಜತೆಗೆ ತಮ್ಮ ಮನೆ ಶುಭ ಸಮಾರಂಭಗಳಿಗೆ ಒಕ್ಕೂಟದಿಂದ ದೊರೆಯುವ ಸಿಹಿತಿನಿಸುಗಳನ್ನು ಬಳಕೆ ಮಾಡಿ ಮನ್ಮುಲ್ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನಿರ್ದೇಶಕ ಸಿ.ಶಿವಕುಮಾರ್ ತಿಳಿಸಿದರು.ಪಟ್ಟಣದ ಮನ್ಮುಲ್ ಉಪಕಚೇರಿಯಲ್ಲಿ ನಡೆದ ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್‍ಯಕ್ರಮದಲ್ಲಿ 20.61 ಲಕ್ಷ ರು. ಮೌಲ್ಯದ ಚೆಕ್‌ಗಳನ್ನು ವಿತರಿಸಿ ಮಾತನಾಡಿ, ಒಕ್ಕೂಟವು 192ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿದೆ. ಇಲ್ಲಿ ತಯಾರಾಗುವ ಉತ್ಪನ್ನಗಳನ್ನು ರಾಜ್ಯ, ಹೊರ ರಾಜ್ಯ ಸೇರಿದಂತೆ ಹೊರ ದೇಶಕ್ಕೂ ಸಹ ರಪ್ತು ಮಾಡಲಾಗುತ್ತಿದೆ ಎಂದರು.
ರೈತರು ತಮ್ಮ ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಒಕ್ಕೂಟದ ಸಿಹಿ ತಿನಿಸುಗಳನ್ನೇ ಬಳಕೆ ಮಾಡಿದರೆ, ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಿದಂತಾಗುತ್ತದೆ. ಅದರ ಲಾಭದ ಹಣ ಒಂದಲ್ಲಾ ಒಂದು ರೀತಿಯಲ್ಲಿ ಮತ್ತೆ ರೈತರಿಗೇ ಸೇರುತ್ತದೆ. ಹಾಗಾಗಿ ಎಲ್ಲಾ ರೈತರು ಒಕ್ಕೂಟದ ಸಿಹಿ ಪದಾರ್ಥಗಳನ್ನು ಬಳಕೆ ಮಾಡಬೇಕು ಎಂದರು.ತಾಲೂಕಿನಲ್ಲಿ 24 ಡೈರಿಗಳಿಗೆ ಸ್ವಂತ ಕಟ್ಟಡಗಳು ಇಲ್ಲ. ನಿವೇಶನದ ಕೊರತೆ ಇರುವ ಡೈರಿಗಳು ನಿವೇಶನ ನೀಡಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಪಟ್ಟಣದಲ್ಲಿ ಮನ್ಮುಲ್ ಉಪ ಕಚೇರಿ ನಿರ್ಮಾಣಕ್ಕೆ ನಿವೇಶನ ಖರೀದಿ 4.45 ಕೋಟಿ ರು. ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರವೇ ಕಚೇರಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿದರು. ಇದೇ ವೇಳೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ವಡ್ಡರಹಳ್ಳಿ ಡೈರಿಗೆ 1.80 ಲಕ್ಷ, ಹೊಸಸಾಯಪನಹಳ್ಳಿ ಡೈರಿ-1.35 ಲಕ್ಷ ಹಾಗೂ ಚಿಕ್ಕಾಯರಹಳ್ಳಿ ಡೈರಿಗೆ-36 ಸಾವಿರದ ಚೆಕ್ ಹಾಗೂ ವಯೋನಿವೃತ್ತಿ ಹೊಂದಿದ ಹೊಸಹಳ್ಳಿ ಡೈರಿ ಕಾರ್‍ಯದರ್ಶಿ ಚಂದ್ರಶೇಖರ್ ಎಚ್.ವಿ.ಅವರನ್ನು ಅಭಿನಂದಿಸಿ 4 ಲಕ್ಷ ರು. ಚೆಕ್ ವಿತರಿಸಿದರು.ಕಾರ್ಯಕ್ರಮದಲ್ಲಿ ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಸಂತೋಷ್ ಬುಡುಗೌದ್ರ, ಡಾ.ಪ್ರಕಾಶ್ ಬಳಗಲಿ, ಡಾ.ಮಣಿಕಂಠ, ವಿಸ್ತರಣಾಕಾರಿಗಳಾದ ಮಧುಶಂಕರ್ ಸಿ.ಎನ್., ನಾಗೇಂದ್ರಕುಮಾರ್ ಜಿ., ಉಷಾ ಎಚ್.ಎನ್., ಕಾರ್‍ಯದರ್ಶಿ ಬೋರೇಗೌಡ, ಟೆಕ್ನಿಷಿಯನ್ ಆನಂದ್ ಸೇರಿದಂತೆ ಹಲವರು ಇದ್ದರು.