ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲ ಎಂಬ ಜೆಡಿಎಸ್ ನಾಯಕರ ಹೇಳಿಕೆಯಿಂದ ಬಿಜೆಪಿ ನಾಯಕರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಜರಿದರು.ಪಟ್ಟಣದ ಟಿ.ಬಿ.ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಮೇಗೌಡರು, ಆಡಳಿತ ಪಕ್ಷ ರಾಜ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದ ವಿಪಕ್ಷ ದುರ್ಬಲವಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದ್ದರೂ ಕೂಡ ಜೆಡಿಎಸ್ ಮುಖಂಡರೇ ರಾಜ್ಯದಲ್ಲಿ ವಿರೋಧ ಪಕ್ಷವಿಲ್ಲದಂತಾಗಿದೆ. ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ರಾಜ್ಯ ರಾಜಕಾರಣಕ್ಕೆ ಹಿಂತಿರುಗಿ ಎಂದು ಎಚ್.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯಿಸುತ್ತಿರುವುದನ್ನು ನೋಡಿದರೆ ಬಿಜೆಪಿಯವರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.ಪ್ರಧಾನಿ ನರೇಂದ್ರ ಮೋದಿ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರಲ್ಲ, ಈಗ ಬಿಜೆಪಿಯವರು ಯೋಚಿಸಬೇಕು. ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಎಚ್ಡಿಕೆಯನ್ನು ರಾಜ್ಯಕ್ಕೆ ಮತ್ತೆ ಬನ್ನಿ ಎಂದು ಕರೆಯುತ್ತಿದ್ದಾರೆಂದರೆ ಇಲ್ಲಿ ಜೆಡಿಎಸ್ ನವರ ಬೇಳೆ ಬೇಯುತ್ತಿಲ್ಲ ಅಂತನೋ ಅಥವಾ ರಾಜ್ಯದಲ್ಲಿ ನಮಗೆ ಅಸ್ತಿತ್ವವಿಲ್ಲವಾಗುತ್ತಿದೆ ಎಂಬ ಭಯದಲ್ಲಿ ಕರೆಯುತ್ತಿದ್ದಾರೋ ಗೊತ್ತಿಲ್ಲ ಎಂದರು.
ಬಿಜೆಪಿಯವರಿಗೆ ಹಿಂದುತ್ವ ಅಷ್ಟೇ ಅವರ ಮತಬ್ಯಾಂಕ್ ಆಗಿದೆ. ಆದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹಿಂದುತ್ವ ನೋಡಿ ಬಿಜೆಪಿಯವರಿಗೆ ಭಯ ಶುರುವಾಗಿದೆ. ಎಚ್ಡಿಕೆ ಇಲ್ಲದೆ ಬಿಜೆಪಿ ನಾಯಕರಿಗೆ ಧಮ್- ತಾಕತ್ ಇಲ್ಲದಂತಾಗಿದೆ. ಇದನ್ನೆಲ್ಲಾ ಗಮನಿಸಿದರೆ ಬಿಜೆಪಿಯಲ್ಲಿ ಯಾರೂ ಗಂಡಸರಿಲ್ಲ ಎನಿಸುತ್ತಿದೆ ಎಂದು ಟೀಕಿಸಿದರು.
ಒಕ್ಕಲಿಗ ಸಮುದಾಯ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವದಿಂದ ಬೇಸತ್ತು ಹೊಸ ಮುಖ ಹುಡುಕುತ್ತಿತ್ತು. ಈಗ ಹೊಸ ಮುಖವಾಗಿ ಸಿಎಂ ಡಿ.ಕೆ.ಶಿವಕುಮಾರ್ ಸಿಕ್ಕಿದಾರೆ. ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರನ್ನು ದೆಹಲಿಗೆ ಹೋಗಿ ಕೆಲಸ ಮಾಡಿ ಎಂದರೆ ರಾಮನಗರ, ಬಿಡದಿ ವಿಷಯಕ್ಕೆ ಬರುತ್ತಾರೆ. ಸಿಎಂ ಆಗಿ ಡಿ.ಕೆ.ಶಿವಕುಮಾರ್ ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಎಚ್ಡಿಕೆಗೆ ಹೊಟ್ಟೆ ಉರಿ ಬಂದಿದೆ ಎಂದು ಜರಿದರು.
ಜೆಡಿಎಸ್ ಪಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಿಡಿತದಲ್ಲಿದ್ದಾಗ ಒಂದು ಮಾದರಿ ಪಕ್ಷವಾಗಿ ಬೆಳೆಯುತ್ತಿತ್ತು. ಒಕ್ಕಲಿಗ ನಾಯಕರ ದಂಡೇ ಅವರ ಜೊತೆಗಿತ್ತು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಜವಾಬ್ದಾರಿ ವಹಿಸಿಕೊಂಡ ನಂತರ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಟೀಕಿಸಿದರು.ಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ನಾವೆಲ್ಲ ಯುವ ಕಾಂಗ್ರೆಸ್‌ನಿಂದ ಬಂದವರು. ಉಳಿದಿರುವ ಎರಡು ವರ್ಷ ಅವಧಿಯ ಜೊತೆಗೆ ಮುಂದಿನ 5 ವರ್ಷ ಕಾಲವೂ ಸೇರಿ ಡಿಕೆಶಿ ಮುಖ್ಯಮಂತ್ರಿಯಾಗಿ ಜನಸೇವೆ ಮಾಡಬೇಕು ಎಂದು ಆಶಿಸಿದರು.
ಈ ವೇಳೆ ಶಿವರಾಮೇಗೌಡರ ಪುತ್ರ ಎಲ್.ಎಸ್.ಚೇತನ್‌ಗೌಡ, ಅಹಿಂದ ಮುಖಂಡ ಬಿದರಕೆರೆ ಮಂಜೇಗೌಡ, ಹಿರಿಯ ವಕೀಲ ಟಿ.ಕೆ.ರಾಮೇಗೌಡ, ತಾಪಂ ಮಾಜಿ ಸದಸ್ಯರಾದ ಚಿಣ್ಯ ಕರಿಯಣ್ಣ, ಹೇಮರಾಜು, ಪುರಸಭೆ ಮಾಜಿ ಸದಸ್ಯ ಲಾರಿಚನ್ನಪ್ಪ, ಮುಖಂಡರಾದ ನರೇಂದ್ರ, ಹರೀಶ್, ಸಿ.ಜೆ.ಕುಮಾರ್ ಸೇರಿದಂತೆ ಹಲವರು ಇದ್ದರು.--------
10ಕೆಎಂಎನ್ ಡಿ19ನಾಗಮಂಗಲ ತಮ್ಮ ಗೃಹ ಕಚೇರಿಯಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.