ಮತದಾರರ ಪಟ್ಟಿ ದೋಷ ಸರಿಪಡಿಕೆಗೆ ಮಹತ್ವದ ಹೆಜ್ಜೆ, ಸಹಕರಿಸಿ: ಶಿವಲಿಂಗಯ್ಯ ಮನವಿಕನ್ನಡಪ್ರಭ ವಾರ್ತೆ ಗೌರಿಬಿದನೂರು
ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದು ಹಾಗೂ ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸುವುದು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಉದ್ದೇಶ. ಇದರ ಮಹತ್ವ ಸಾರ್ವಜನಿಕರಿಗೆ ತಿಳಿಸುವುದು ಈ ಜಾಥಾ ಉದ್ದೇಶವಾಗಿದೆ ಎಂದು ಮತದಾರರ ನೊಂದಣಾಧಿಕಾರಿ ಶಿವಲಿಂಗಯ್ಯ ಹೇಳಿದರು.ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಅನರ್ಹರು ಸೇರ್ಪಡೆಯಾಗದಂತೆ ನೋಡಿಕೊಳ್ಳಲು ಈ ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಜೆ.ಕೆ.ಹೊನ್ನಯ್ಯ ಮಾತನಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 30ರಿಂದ ಜುಲೈ 29ರವರೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮ ನಡೆಯಲಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದು ಹಾಗೂ ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸುವುದು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.ಅರ್ಹ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಹಾಗೂ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಮತಪಟ್ಟಿ ಪರಿಷ್ಕರಣೆಯಲ್ಲಿ ಯಾವೊಬ್ಬ ನಾಗರಿಕನೂ ವಂಚಿತರಾಗಬಾರದು, ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಕಾರ್ಯಕ್ರಮ ಹಮ್ಮಿಕೊಂಡಿದ್ದು ಬೂತ್ ಮಟ್ಟದ ಅಧಿಕಾರಿಗೆ ಅಗತ್ಯ ಮಾಹಿತಿ ನೀಡಲು ಸಹಕರಿಸಬೇಕೆಂದು ತಿಳಿಸಿದರು.ತಹಸೀಲ್ದಾರ್ ಅರವಿಂದ ಮಾತನಾಡಿ ತಾಲೂಕಿನಲ್ಲಿ ಒಟ್ಟು 2,14,210 ಮತದಾರರಿದ್ದು, ಈ ಪೈಕಿ ಸುಮಾರು 35,000 ಮತದಾರರ ವಿವರಗಳಲ್ಲಿ ವ್ಯತ್ಯಾಸಗಳಿರುವುದು (ಅನಾಮಲಿ) ಪತ್ತೆಯಾಗಿದೆ. ಇದರಲ್ಲಿ ಶೇ. 70 ರಷ್ಟು ಪ್ರಕರಣಗಳು ಹೆಸರಿನ ತಿದ್ದುಪಡಿಗೆ ಸಂಬಂಧಿಸಿದವು ಮತ್ತು ಉಳಿದವು ವಯಸ್ಸಿನ ವ್ಯತ್ಯಾಸವನ್ನು ಹೊಂದಿವೆ ಎಂದರು.18ವರ್ಷ ಪೂರ್ಣಗೊಂಡವರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಈಗಾಗಲೇ ನೋಂದಾಯಿತರಾಗಿರುವ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದಾಗ, ಎನ್ಯುಮರೇಷನ್ ಅರ್ಜಿಯನ್ನು ಭರ್ತಿ ಮಾಡಿ, ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು. ಗುರುತಿನ ಚೀಟಿಯಲ್ಲಿ ದೋಷಗಳು ಕಂಡು ಬಂದಲ್ಲಿ ತಿದ್ದುಪಡಿಗೆ ಅವಕಾಶವಿದೆ. ಬೂತ್ ಮಟ್ಟದ ಅಧಿಕಾರಿಗಳು ಮನೆಗೆ ಬಂದಾಗ ಮತದಾರರು ಅಗತ್ಯ ಮಾಹಿತಿಯನ್ನು ಒದಗಿಸಬೇಕು. ಇದರಲ್ಲಿ ಲೋಪ ದೋಷಗಳಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಗರದ ಶ್ರೀ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಜಾಥಾ ನಗರದ ಮುಖ್ಯ ರಸ್ತೆಗಳ ಮೂಲಕ ಎನ್.ಸಿ.ನಾಗಯ್ಯರೆಡ್ಡಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಮತ್ತು ಮಹಾತ್ಮ ಗಾಂಧಿ ವೃತ್ತದ ಮೂಲಕ ಬಜಾರ್ ರಸ್ತೆಯಿಂದಸಾಗಿ ಕೋಟೆ ಸರ್ಕಾರಿ ಬಾಲಕಿಯರ ಶಾಲೆ ಆವರಣಕ್ಕೆ ತಲುಪಿತು.ಈ ರ‍್ಯಾಲಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ನಗರಸಭೆ ಎಲ್ಲಾ ಕಚೇರಿ ಸಿಬ್ಬಂಧಿ, ಸಿಡಿಪಿಒ ರವಿಕುಮಾರ್, ಎಡಿಎಲ್‌ಆರ್ ನಾಗೇಶ್, ಚುನಾವಣಾ ಶಿರಸ್ತೆದಾರ್ ಕಬೀರ್, ಪೊಲೀಸ್ ಇಲಾಖೆ ಸಿಬ್ಬಂದಿ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.