ಸಾರಾಂಶ
ಹೊನ್ನಾವರ: ತಾಲೂಕಿನಲ್ಲಿ ಬಿಜೆಪಿ ಸದಸ್ಯತ್ವ ಸಂಖ್ಯೆಯನ್ನು ಐವತ್ತು ಸಾವಿರಕ್ಕೂ ಮೀರಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪಕ್ಷದ ಕಾರ್ಯಕರ್ತರಲ್ಲಿ ಮಾಡಿದರು.
ಪಟ್ಟಣದ ಶರಾವತಿ ವೃತ್ತದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ, ನರೇಂದ್ರ ಮೋದಿಯವರು ಮೂರನೇ ಸಲ ಪ್ರಧಾನಿಯಾಗಿ ನೂರೇ ದಿನಗಳಲ್ಲಿ ಅಭಿವೃದ್ಧಿ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅಭಿವೃದ್ಧಿಗೆ ಹೊಸ ರೂಪವನ್ನು ಕೊಟ್ಟಿದ್ದಾರೆ.ಅತಿ ಹೆಚ್ಚು ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದೀರಿ. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.ರಾಜ್ಯ ಸರ್ಕಾರ ಕಸ್ತೂರಿರಂಗನ್ ವರದಿಯ ಬಗ್ಗೆ ಒಂದೊಂದು ದಿನ ಒಂದೊಂದು ರೀತಿಯಲ್ಲಿ ಹೇಳುತ್ತಿದೆ. ಮಂತ್ರಿಗಳು ಒಮ್ಮೆ ಅರಣ್ಯ ಭೂಮಿ ಅತಿಕ್ರಮಣವನ್ನು ಖುಲ್ಲಾಪಡಿಸುತ್ತೇವೆ ಎನ್ನುತ್ತಾರೆ. ಇನ್ನೊಮ್ಮೆ ಖುಲ್ಲಾಪಡಿಸುವುದಿಲ್ಲ ಎನ್ನುತ್ತಾರೆ. ದಿನಕ್ಕೊಂದು ರೀತಿಯಲ್ಲಿ ಸರ್ಕಾರ ಹೇಳುತ್ತಿದೆ. ಜನರಲ್ಲಿ ಗೊಂದಲ ಉಂಟುಮಾಡಿದೆ. ಇದರ ಬಗ್ಗೆ ಸ್ಪಷ್ಟ ನಿಲುವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಬೇಕು ಎಂದರು. ಜಿಲ್ಲೆಯ ಅರಣ್ಯಭೂಮಿ ಅತಿಕ್ರಮಣದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.ಎರಡು ಬಗೆಯ ಕಾಯ್ದೆ ಇದ್ದಲ್ಲೆಲ್ಲ ಒಂದೇ ಆಗುತ್ತದೆ ಎಂದ ಅವರು, ವಕ್ಫ್ ಮಂಡಳಿ ಕಾನೂನು ತಿದ್ದುಪಡಿ ಆಗೇ ಆಗುತ್ತದೆ ಎಂದರು. ಶರಾವತಿ ನದಿ ನೀರನ್ನು ಬೆಂಗಳೂರಿಗೆ ತಿರುಗಿಸುವ ಯೋಜನೆಯ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಜನರ ಜತೆ ಇರುವುದಾಗಿ ತಿಳಿಸಿದರು. ಈ ಯೋಜನೆಗೆ ಶಿವಮೊಗ್ಗದಲ್ಲಿ ಈ ಹಿಂದೆಯೇ ವಿರೋಧ ವ್ಯಕ್ತವಾಗಿದೆ. ಪರಿಸರ ರಕ್ಷಣೆಯನ್ನು ಮಾಡಬೇಕಾಗಿದೆ ಎಂದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ. ಗುತ್ತಿಗೆದಾರರು ಕೆಲಸ ಮಾಡುವುದನ್ನೇ ನಿಲ್ಲಿಸಿದ್ದಾರೆ. ಅರಣ್ಯಭೂಮಿ ಅತಿಕ್ರಮಣದಾರರಿಗೆ ಅಧಿಕಾರಿಗಳಿಂದ ತೊಂದರೆ ಆಗುತ್ತಿದೆ. ಈ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಧಿಕಾರಿಗಳ ಜತೆ ಮಾತನಾಡಬೇಕು ಎಂದರು.ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ ನಾಯ್ಕ, ಪಪಂ ಅಧ್ಯಕ್ಷ ನಾಗರಾಜ ಭಟ್, ಉಪಾಧ್ಯಕ್ಷ ಸುರೇಶ ಹೊನ್ನಾವರ, ಮುಖಂಡರಾದ ಶಿವಾನಂದ ಹೆಗಡೆ ಕಡತೋಕಾ, ವಿನೋದ ನಾಯ್ಕ ರಾಯಲಕೇರಿ, ಜಿ.ಜಿ. ಶಂಕರ, ಗಣಪತಿ ಗೌಡ ಚಿತ್ತಾರ, ಎಚ್.ಆರ್. ಗಣೇಶ, ಮಹೇಶ ಮೇಸ್ತ, ಎಂ.ಜಿ. ನಾಯ್ಕ, ವಿಘ್ನೇಶ್ವರ ಹೆಗಡೆ, ಶ್ರೀಕಲಾ ಶಾಸ್ತ್ರೀ ಮತ್ತಿತರರು ಉಪಸ್ಥಿತರಿದ್ದರು. ಸದ್ದಿಲ್ಲದೆ ಗುದ್ದು ನೀಡಿದ ಸಂಸದ
ಕುಮಟಾ ಕ್ಷೇತ್ರದಲ್ಲಿ ಅತಿ ಹೆಚ್ಚು ಸದಸ್ಯರ ನೋಂದಣಿ ಆಗಬೇಕು ಎಂದ ಸಂಸದ ಕಾಗೇರಿಯವರು, ಜಿಲ್ಲೆಯಲ್ಲಿ ಬಿಜೆಪಿಯ ಏಕೈಕ ಶಾಸಕ ದಿನಕರ ಶೆಟ್ಟಿ ಎನ್ನುವ ಮೂಲಕ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ನಮ್ಮ ಪಕ್ಷದ ಶಾಸಕರು ಅಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳುವ ಮೂಲಕ ಸದ್ದಿಲ್ಲದೇ ಗುದ್ದು ಕೊಟ್ಟಂತೆ ಮಾತನಾಡಿದರು.